ವರದಿ ಫಲಶ್ರುತಿ: ಗ್ರಾಮಕ್ಕೆ ಬಂದ ಬಸ್– ವಿದ್ಯಾರ್ಥಿಗಳ ಸಂತಸ

ಅಳವಂಡಿ (ಕೊಪ್ಪಳ ಜಿಲ್ಲೆ): ತಾಲ್ಲೂಕಿನ ಅಳವಂಡಿ ಹೋಬಳಿಯ ಮೋರನಾಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳ ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯು ಬಸ್ ಆರಂಭಿಸಿದ್ದು, ಇದು ವಿದ್ಯಾರ್ಥಿಗಳ ಸಂತಸಕ್ಕೆ ಕಾರಣವಾಗಿದೆ.
ಈ ಕುರಿತು ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾಗಿತ್ತು. ಈ ಕಾರಣ ಕೊಪ್ಪಳ ವಿಭಾಗೀಯ ಸಂಚಾರ ನಿಯಂತ್ರಣಾಧಿಕಾರಿ ಎಂ.ಎ.ಮುಲ್ಲಾ, ವ್ಯವಸ್ಥಾಪಕ ಬಸವರಾಜ್, ಸಿಬ್ಬಂದಿ ನಾಗರಾಜ್ ಅವರು ಅಳವಂಡಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು.
ಮುಂಡರಗಿ ಸಮೀಪದ, ತಾಲ್ಲೂಕಿನ ಕೊನೆಯ ಭಾಗದ ಹಳ್ಳಿಯಾದ ಇಲ್ಲಿ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಿತ್ಯ ಅಳವಂಡಿಯ ಪ್ರೌಢಶಾಲೆ ಮತ್ತು ಕಾಲೇಜುಗಳಿಗೆ ಬರುತ್ತಾರೆ. ಎರಡು ವರ್ಷದಿಂದ ಸಂಚಾರ ರದ್ದು ಮಾಡಿದ್ದರಿಂದ ಬಸ್‌ಗಳು ಇಲ್ಲದೆ ವಿದ್ಯಾರ್ಥಿಗಳಿಗೆ ತೊಂದರೆಯಾಗಿತ್ತು. ಪತ್ರಿಕೆಯ ವರದಿಯನ್ನು ನೋಡಿದ ಅಧಿಕಾರಿಗಳು ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳು ಮತ್ತು ಮುಖ್ಯ ಶಿಕ್ಷಕ ಸುರೇಂದ್ರಗೌಡ ಪಾಟೀಲ ಅವರೊಂದಿಗೆ ಚರ್ಚೆ ನಡೆಸಿದರು.
ನಂತರ ಮಾತನಾಡಿದ ಮುಲ್ಲಾ, ‘ಕೊಪ್ಪಳ– ಮುಂಡರಗಿ ಮಾರ್ಗವಾಗಿ ಈಗಾಗಲೇ ಕೆಲವು ಬಸ್‌ಗಳು ಸಂಚಾರಿಸುತ್ತಿವೆ. ವಿದ್ಯಾರ್ಥಿಗಳು ಶಾಲೆಯ ಸಮಯಕ್ಕೆ ಬಸ್ ಓಡಿಸಲು ಮನವಿ ಮಾಡಿದ್ದಾರೆ. ಮೋರನಾಳ ಗ್ರಾಮಕ್ಕೂ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆ ಆಲಿಸಿದ್ದೇವೆ. ಬೆಳಿಗ್ಗೆ 9 ಮತ್ತು ಮಧ್ಯಾಹ್ನ 1, ಸಂಜೆ 5ಕ್ಕೆ ಬಸ್ ಆರಂಭಿಸಿದ್ದೇವೆ' ಎಂದು ಹೇಳಿದರು.
‘ಪ್ರಜಾವಾಣಿ ವರದಿಯಿಂದ ವಿದ್ಯಾರ್ಥಿಗಳ ಸಮಸ್ಯೆ ಪರಿಹಾರವಾಯಿತು’ ಎಂದು ಗ್ರಾಮಸ್ಥರ ಹನಮಂತಪ್ಪ ಮೋರನಾಳ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.