ಶನಿವಾರ, ಆಗಸ್ಟ್ 13, 2022
24 °C
ಸಂತೆಯಲ್ಲಿ ನೂರಾರು ಜನರು ಭಾಗಿ

ಕೊಪ್ಪಳ: ಪ್ರತಿಷ್ಠೆಯಾದ ಕುರಿ ಮೇಕೆ ಸಂತೆ, ಲಕ್ಷಾಂತರ ವಹಿವಾಟು

ಸಿದ್ದನಗೌಡ ಪಾಟೀಲ Updated:

ಅಕ್ಷರ ಗಾತ್ರ : | |

ಕೊಪ್ಪಳ: ಶಾಸಕ ಮತ್ತು ಸಂಸದರಿಗೆ ಪ್ರತಿಷ್ಠೆಯಾದ ಜಿಲ್ಲೆಯ ಕುರಿ ಮೇಕೆ ಸಂತೆಯು ಸದಾ ವಿವಾದದ ಕೇಂದ್ರ ಬಿಂದುವಾಗಿ ಹೈಕೋರ್ಟ್ ಆದೇಶದಂತೆ ಸಂತೆ ನಡೆಯುವಂತೆ ಆಗಿದೆ.

ಆಡಳಿತರೂಢ ಪಕ್ಷಗಳು ತಮಗೆ ಬೇಕಾದ ಊರಿನಲ್ಲಿ ಸಂತೆ ನಡೆಸುವ ಮೂಲಕ ಈ ವಿವಾದವನ್ನು ಜೀವಂತವಾಗಿ ಇಟ್ಟಿರುವುದು ವಿಶೇಷವಾಗಿದೆ. ತಾಲ್ಲೂಕಿನ ಕೂಕನಪಳ್ಳಿ ಮತ್ತು ಬೂದಗುಂಪಾ (ಗಿಣಗೇರಾ) ದಲ್ಲಿ ಕುರಿ, ಮೇಕೆ ಸಂತೆಯೇ ಇದಕ್ಕೆ ತಾಜಾ ಉದಾಹರಣೆಯಾಗಿದೆ.

ಕೂಕನಪಳ್ಳಿಯಲ್ಲಿ ಸುಮಾರು ದಶಕದಿಂದ ಸಂತೆ ನಡೆಯುತ್ತಾ ಬಂದಿದ್ದು, ಕೃಷಿ ಮಾರುಕಟ್ಟೆಯಿಂದ ಕುಡಿಯುವ ನೀರು ಸೇರಿದಂತೆ ಎಲ್ಲ ಮೂಲಸೌಕರ್ಯಗಳನ್ನು ಕಲ್ಪಿಸಿ ಶೆಡ್‌ಗಳನ್ನು ಕೂಡಾ ನಿರ್ಮಾಣ ಮಾಡಲಾಗಿದೆ. ಇಲ್ಲಿಂದ ಎಪಿಎಂಸಿಯವರು ಮಾರಾಟಗಾರರು, ರೈತರಿಂದ ತೆರಿಗೆಯನ್ನು ಸಂಗ್ರಹಿಸುತ್ತಿದ್ದಾರೆ. ಶುಕ್ರವಾರ ನಡೆಯುವ ಈ ಸಂತೆಗೆ ಹುಬ್ಬಳ್ಳಿ ಸೇರಿದಂತೆ ದೂರದ ಊರಿನ ವ್ಯಾಪಾರಸ್ಥರು ಬಂದು ಕುರಿ, ಮೇಕೆಯನ್ನು ಖರೀದಿಸುತ್ತಾರೆ.

ಕೂಕನಪಳ್ಳಿ ಸಂಸದ ಸಂಗಣ್ಣ ಕರಡಿ ಅವರ ಸ್ವಗ್ರಾಮವಾಗಿದ್ದು, ಸ್ವಂತ ಆಸ್ಥೆ ವಹಿಸಿ, ಸಂತೆಯನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡು ಅಭಿವೃದ್ಧಿಪಡಿಸಿದ್ದಾರೆ. ಈ ಹಿಂದಿನ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಬೂದಗುಂಪಾದಲ್ಲಿ ಸಂತೆ ನಡೆಯುವಂತೆ ಆದೇಶ ಹೊರಡಿಸಿತ್ತು. ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಈ ಭಾಗದ ವ್ಯಾಪಾರಸ್ಥರಿಗೆ, ರೈತರಿಗೆ, ಕುರಿಗಾರರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಇಲ್ಲಿಯೇ ನಡೆಯಲಿ ಎಂದು ಸಂತೆ ನಡೆಯುವಂತೆ ನೋಡಿಕೊಳ್ಳುತ್ತಿದ್ದರು.

ಆದರೆ, ಬೂದಗುಂಪಾದಲ್ಲಿ ನಡೆಯುವ ಸಂತೆಗೆ ಯಾವುದೇ ಮೂಲಸೌಕರ್ಯವಿಲ್ಲ. ಅಲ್ಲದೆ ಎಪಿಎಂಸಿಗೆ ಆದಾಯವೂ ಬರುವುದಿಲ್ಲ ಎಂದು ಪ್ರಸ್ತುತ ಸರ್ಕಾರ ಜಿಲ್ಲಾಧಿಕಾರಿಗಳ ಮೂಲಕ ಆದೇಶ ಹೊರಡಿಸಿ ನಿಷೇಧಾಜ್ಞೆ ಹಾಗೂ ಪೊಲೀಸ್‌ ಬಂದೋಬಸ್ತ್‌ ಮೂಲಕ ಸಂತೆ ನಡೆಯದಂತೆ ನೋಡಿಕೊಳ್ಳುತ್ತಿತ್ತು. ಅಲ್ಲದೆ ರಸ್ತೆಯ ಮೇಲೆಯೇ ವ್ಯಾಪಾರ ನಡೆಯುವುದರಿಂದ ಜನರಿಗೆ ತೊಂದರೆ ಆಗುತ್ತದೆ ಎಂಬ ಕಾರಣದಿಂದ ಸಂತೆಯನ್ನು ರದ್ದು ಮಾಡಲಾಗಿತ್ತು.

ಇದು ಸ್ಪಷ್ಟವಾಗಿ ಕಾಂಗ್ರೆಸ್-ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿ ಧಾರವಾಡ ಹೈಕೋರ್ಟ್ ಮೆಟ್ಟಿಲೇರಿತ್ತು. ಈಗ ನ್ಯಾಯಾಲಯ ಕೂಕನಪಳ್ಳಿಯಲ್ಲಿಯೇ ಸಂತೆ ನಡೆಯಬೇಕು ಎಂದು ಆದೇಶಿಸಿದ್ದು, ಅಗತ್ಯ ಭದ್ರತೆ ಒದಗಿಸುವಂತೆ ಪೊಲೀಸರಿಗೆ ಸೂಚನೆ ನೀಡಿದೆ.

ಬೂದಗುಂಪಾ ಕ್ರಾಸಿನ  ಸುತ್ತಮುತ್ತಲಿನ ಗ್ರಾಮಗಳಾದ ಬೂದಗುಂಪಾ, ದನಕನದೊಡ್ಡಿ, ಹಿರೇವಂಕಲಕುಂಟಾ, ವನಬಳ್ಳಾರಿ, ಹೊಸೂರುಗಳಲ್ಲಿ ಈ ಹಿಂದೆ ಸಂತೆಯ ಕಾರಣದಿಂದ ಗಲಭೆಗಳಾಗಿದ್ದು, ಯಾವುದೇ ಅಹಿತಕರ ಘಟನೆಗೆ ಆಸ್ಪದವಿಲ್ಲದಂತೆ ಸಂತೆ ನಡೆಸುವಂತೆ ಆದೇಶ ನೀಡಿದೆ. 

ಕೊರೊನಾ ಹಿನ್ನೆಲೆಯಲ್ಲಿ ಶುಕ್ರವಾರ ನಡೆದ ಸಂತೆಯಲ್ಲಿ ನೂರಾರು ರೈತರು ಪಾಲ್ಗೊಂಡಿದ್ದರು. ವ್ಯಕ್ತಿಗತ ಅಂತರವನ್ನು ಕಾಪಾಡಿಕೊಳ್ಳದೆ ವ್ಯಾಪಾರ ವಹಿವಾಟು ನಡೆದಿದೆ ಎನ್ನಲಾಗಿದೆ. ಸಂತೆಯೊಂದು
ಪ್ರತಿಸಾರಿ ಜಿಲ್ಲಾಡಳಿತಕ್ಕೆ ಚಿಂತೆಯನ್ನು ತಂದಿಟ್ಟಿದೆ.

ಈಗ ಲಾಕ್‌ಡೌನ್ ನಂತರ ಬೂದಗುಂಪಾ ಕ್ರಾಸ್‌ ಬದಲು ಕೂಕನಪಳ್ಳಿ ಉಪ ಮಾರುಕಟ್ಟೆ ಪ್ರಾಂಗಣದಲ್ಲಿಯೇ ಪ್ರತಿವಾರ ಕುರಿ ಸಂತೆ ನಡೆಯಬೇಕು ಎಂದು ಹೈಕೋರ್ಟ್ ಆದೇಶ ಮಾಡಿದ್ದು, ಜಿಲ್ಲಾಡಳಿತಕ್ಕೆ ನಿರಾಳತೆ ಮೂಡಿಸಿದೆ.‌

ಹೀಗೆ ಜಿಲ್ಲೆಯ ಸಂತೆಯೊಂದು ಶಾಸಕ, ಸಂಸದರಿಗೆ ಪ್ರತಿಷ್ಠೆಯಾಗಿದ್ದು, ಬೆಂಬಲಿಗರ ನಡುವೆ ಘರ್ಷಣೆಗೆ ಕಾರಣವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.