ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವಾಲಾಲ್ ದೇವಸ್ಥಾನ ತೆರವಿಗೆ ಆಕ್ರೋಶ

ಕುಷ್ಟಗಿ: ಬಂಜಾರ ಸಮುದಾಯ ಪ್ರತಿಭಟನೆ
Last Updated 4 ಡಿಸೆಂಬರ್ 2019, 10:28 IST
ಅಕ್ಷರ ಗಾತ್ರ

ಕುಷ್ಟಗಿ: ಕಲಬುರ್ಗಿ ವಿಮಾನ ನಿಲ್ದಾಣದ ಉದ್ಘಾಟನೆ ನೆಪದಲ್ಲಿ ಸಂತ ಸೇವಾಲಾಲ ಹಾಗೂ ಮಾತಾ ಮರಿಯಮ್ಮ ದೇವಸ್ಥಾನ ಧ್ವಂಸಗೊಳಿಸಿರುವುದನ್ನು ಖಂಡಿಸಿ ಪಟ್ಟಣದಲ್ಲಿ ಮಂಗಳವಾರ ತಾಲ್ಲೂಕು ಬಂಜಾರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪ್ರತಿಭಟನೆ ನಡೆಯಿತು.

ಕಾರ್ಗಿಲ್ ಯೋಧ ಮಲ್ಲಯ್ಯ ವೃತ್ತದಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಸಮುದಾಯದ ಜನರು ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಡೆಸಿ ಜನರ ಗಮನಸೆಳೆದರು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಬರೆದ ಪತ್ರವನ್ನು ನಂತರ ತಹಶೀಲ್ದಾರ್ ಎಂ.ಸಿದ್ದೇಶ ಅವರಿಗೆ ಸಲ್ಲಿಸಿದರು.

ಈ ವೇಳೆ ಮಾತನಾಡಿದ ತಾಲ್ಲೂಕು ಬಂಜಾರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಂಗಪ್ಪ ಲಮಾಣಿ, ವಿಮಾನ ನಿಲ್ದಾಣದ ಸಮೀಪ ಇದ್ದ ಕುಲಗುರು ಹಾಗೂ ಮರಿಯಮ್ಮ ದೇವಿ ದೇವ ಸ್ಥಾನವನ್ನು ರಾತ್ರೋರಾತ್ರಿ ತೆರವುಗೊಳಿಸಿರುವುದು ಸಮುದಾಯದ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ. ಅಲ್ಲದೇ ನಿಲ್ದಾಣಕ್ಕೆ ಸ್ವಾಧೀನಪಡಿಸಿಕೊಂಡಿರುವ ಜಮೀನಿ ಶೇಕಡ 70ರಷ್ಟು ಪ್ರದೇಶ ಬಂಜಾರ ಸಮುದಾಯಕ್ಕೆ ಸೇರಿದೆ. ಆದರೆ, ಪ್ರಾರಂಭದಲ್ಲಿ ದೇವಸ್ಥಾನಕ್ಕೆ ಯಾವುದೇ ಧಕ್ಕೆ ಮಾಡುವುದಿಲ್ಲ ಎಂದು ಭರವಸೆ ನೀಡಿದವರೇ ಅದರ ನಾಶಕ್ಕೆ ಕಾರಣರಾಗಿರುವುದು ಬಂಚಾರ ಸಮುದಾಯಕ್ಕೆ ನೋವಿನ ಸಂಗತಿಯಾಗಿದೆ ಎಂದರು.

ದೇವಸ್ಥಾನಗಳ ಪುನರ್ ನಿರ್ಮಾಣಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಕಲಬುರ್ಗಿ ವಿಮಾನ ನಿಲ್ದಾಣಕ್ಕೆ ಸಂತ ಸೇವಾಲಾಲ್ ಮಹಾರಾಜರ ಹೆಸರು ನಾಮಕರಣ ಮಾಡಬೇಕು. ಜಮೀನು ಕಳೆದುಕೊಂಡಿರುವ ಕುಟುಂಬದವರಿಗೆ ಉದ್ಯೋಗ ಒದಗಿಕೊಡಬೇಕು ಇತರೆ ಬೇಡಿಕೆಗಳು ಮನವಿಯಲ್ಲಿದ್ದವು.

ಜಿಲ್ಲಾ ಪಂಚಾಯಿತಿ ಸದಸ್ಯ ವಿಜಯ ನಾಯಕ, ಮಾಜಿ ಸದಸ್ಯ ಪ್ರಕಾಶ ರಾಠೋಡ, ತಾಲ್ಲೂಕು ಪಂಚಾಯಿತಿ ಸದಸ್ಯ ಯಂಕಪ್ಪ ಚವ್ಹಾಣ, ಪ್ರಮುಖರಾದ ಎಚ್‌.ಆರ್‌.ನಾಯಕ, ನೀಲಪ್ಪ ಚವ್ಹಾಣ, ಮುತ್ತಣ್ಣ ಚವ್ಹಾಣ, ಉಮೇಶ ರಾಠೋಡ, ಶಿವು ಚವ್ಹಾಣ, ನಾಗಪ್ಪ ರಾಠೋಡ, ಪೂರ್ಣಿಮಾ ಚವ್ಹಾಣ, ವೆಂಕಟೇಶ ಚವ್ಹಾಣ, ಕಾಂತಪ್ಪ ನಾಯಕ, ಬದ್ರಿ ಪವಾರ, ನೀಲಪ್ಪ ರಾಠೋಡ, ಲಕ್ಷ್ಮಪ್ಪ ರಾಠೋಡ, ಶಿವಪ್ಪ ನಾಯಕ, ದೇನಪ್ಪ ರಾಠೋಡ, ಬೋದೂರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT