ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗಂಗಾವತಿ ಪಿಯು ಕಾಲೇಜು: ಸಾಧನೆಗಿಂತ, ಸಮಸ್ಯೆಗಳೇ ಹೆಚ್ಚು

ಗಂಗಾವತಿ ತಾಲ್ಲೂಕಿನ ಪಿಯು ಕಾಲೇಜುಗಳಲ್ಲಿ ಕೊಠಡಿ, ಶೌಚಾಲಯ, ಮೈದಾನ, ಉಪನ್ಯಾಸಕರ ಕೊರತೆ
ಎನ್‌. ವಿಜಯ
Published 28 ಜೂನ್ 2024, 5:10 IST
Last Updated 28 ಜೂನ್ 2024, 5:10 IST
ಅಕ್ಷರ ಗಾತ್ರ

ಗಂಗಾವತಿ: ಕಾಯಂ ಉಪನ್ಯಾಸಕರ ಕೊರತೆ, ಶೌಚಾಲಯ ಸಮಸ್ಯೆ, ಕುಡಿಯುವ ನೀರಿನ ಅಭಾವ, ಕೊಠಡಿಗಳ ದುರಸ್ತಿ, ಇದ್ದು ಇಲ್ಲದಂತಾದ ಮೈದಾನ, ಅಶೀಲ್ಲ ಬರಹಗಳು, ಬೋಧಕೇತರ ಸಿಬ್ಬಂದಿ ಸಮಸ್ಯೆ...ಇವು ಗಂಗಾವತಿ ತಾಲ್ಲೂಕಿನ ನಾಲ್ಕು ಸರ್ಕಾರಿ ಪಿಯು ಕಾಲೇಜಿನಲ್ಲಿ ಇರುವ ಸಾಮೂಹಿಕ ಸಮಸ್ಯೆಗಳು.

ಗಂಗಾವತಿಯಲ್ಲಿ ಬಾಲಕರ ಸರ್ಕಾರಿ ಪಿಯು ಕಾಲೇಜು, ಎಂಎನ್ಎಂ, ಕೆಸರಹಟ್ಟಿ, ಶ್ರೀರಾಮನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಸೇರಿ ಒಟ್ಟು ನಾಲ್ಕು ಸರ್ಕಾರಿ ಪಿಯು ಕಾಲೇಜುಗಳಿವೆ.

ಭತ್ತದನಾಡು ಎಂದೇ ಪ್ರಖ್ಯಾತಿ ಪಡೆದ ಗಂಗಾವತಿ ಇದೀಗ ಶಿಕ್ಷಣ ಕಾಶಿಯಾಗಿ ಬದಲಾಗಿದ್ದು, ಇಲ್ಲಿ ಸರ್ಕಾರಿ ಶಾಲಾ- ಕಾಲೇಜುಗಳಿಗಿಂತ, ಖಾಸಗಿ ಶಿಕ್ಷಣ ಸಂಸ್ಥೆಗಳ ಶಾಲಾ-ಕಾಲೇಜುಗಳೇ ಹೆಚ್ಚಿವೆ. ಗುಣಮಟ್ಟದ ಶಿಕ್ಷಣ, ಮೂಲ ಸೌಕರ್ಯ ವ್ಯವಸ್ಥೆ, ಉತ್ತಮ ಫಲಿತಾಂಶ ಹೊರತರುವ ವಿಚಾರದಲ್ಲಿ ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ನಡುವೆ ಪೈಪೋಟಿಯಿದ್ದರೂ ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳೇ ಮೇಲುಗೈ ಸಾಧಿಸಿವೆ.

ಇಲ್ಲಿನ ಖಾಸಗಿ ಶಿಕ್ಷಣ ಸಂಸ್ಥೆಗಳು ಮಕ್ಕಳಿಂದ ಹೆಚ್ಚಿನ ಶುಲ್ಕ ಪಡೆದು ನೀಟ್, ಇಸಿಟಿ, ಜೆಇಇ ತರಬೇತಿ, ಸಂಪನ್ಮೂಲ ಶಿಕ್ಷಕರಿಂದ ಬೋಧನೆ, ಉತ್ತಮ ಬೆಂಚ್, ಶುದ್ದ ಕುಡಿಯುವ ನೀರಿನ ವ್ಯವಸ್ಥೆ, ಸುಸಜ್ಜಿತ ಲ್ಯಾಬ್, ಕೊಠಡಿ, ಶೌಚಾಲಯದ ವ್ಯವಸ್ಥೆ ಇರುವುದರಿಂದ ವರ್ಷದಿಂದ ವರ್ಷಕ್ಕೆ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗುತ್ತಿದೆ.

‘ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯ ಕಲ್ಪಿಸದಿರುವುದು, ವೈದ್ಯಕೀಯ, ಎಂಜಿನಿಯರಿಂಗ್ ಕೋರ್ಸ್ ಪ್ರವೇಶಕ್ಕೆ ಇರುವ ಜೆಇಇ, ನೀಟ್, ಸಿಇಟಿ ಪರೀಕ್ಷೆಗಳ ಬಗ್ಗೆ ಸೂಕ್ತ ತರಬೇತಿ ನೀಡದಿರುವುದು ಸರ್ಕಾರಿ ಪಿಯು ಕಾಲೇಜುಗಳಲ್ಲಿ ಪ್ರವೇಶಾತಿ ಕುಸಿಯುತ್ತಿರುವುದಕ್ಕೆ ಪ್ರಮುಖ ಕಾರಣ’ ಎನ್ನುತ್ತಾರೆ ಇಲ್ಲಿನ ಉಪನ್ಯಾಸಕರು.

ಎಂಎನ್ಎಂ ಕಾಲೇಜು:

ಗಂಗಾವತಿ ನಗರದ ಹೃದಯ ಭಾಗದಲ್ಲಿನ ಎಂಎನ್ಎಂ ಪಿಯು ಕಾಲೇಜು ವಿದ್ಯಾರ್ಥಿನಿಯರಿಗೆ ಅಚ್ಚುಮೆಚ್ಚು. ಇಲ್ಲಿನ ಕಲಾ, ವಿಜ್ಞಾನ, ವಾಣಿಜ್ಯ ವಿಭಾಗದಲ್ಲಿ 840 ವಿದ್ಯಾರ್ಥಿನಿಯರು ಓದುತ್ತಿದ್ದು, ಸಂಖ್ಯೆಗೆ ತಕ್ಕಂತೆ ಶೌಚಾಲಯವೇ ಇಲ್ಲ. ಇತಿಹಾಸ, ಅರ್ಥಶಾಸ್ತ್ರ, ಸಮಾಜ ಶಾಸ್ತ್ರ ವಿಷಯಗಳಿಗೆ ಕಾಯಂ ಉಪನ್ಯಾಸಕರಿಲ್ಲ. ಕಚೇರಿ ಕೊಠಡಿ ಶಿಥಿಲ ಸ್ಥಿತಿಯಲ್ಲಿದೆ. ಗ್ರಂಥಾಲಯವಿಲ್ಲ. ಆಟವಾಡಲು ಮೈದಾನವಿಲ್ಲ.

ಜೂನಿಯರ್ ಕಾಲೇಜು:

ಜೂನಿಯರ್ ಕಾಲೇಜಿಗೆ 52 ವರ್ಷಗಳ ಇತಿಹಾಸವಿದೆ. ಇನ್ನೂ ಕಾಲೇಜು ಅಭಿವೃದ್ದಿ ಪ್ರಗತಿಯಲ್ಲಿದೆ. ಇಲ್ಲಿ ವಿವಿಧ ವಿಷಯ 10 ಉಪನ್ಯಾಸಕರು, 4 ಕಾಯಂ ಬೋಧಕೇತರ ಸಿಬ್ಬಂದಿ ಕಾಯಂ ಅಗತ್ಯತೆ ಇದೆ. ಇಲ್ಲಿ 580ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದು, ವಿದ್ಯಾರ್ಥಿಗಳಿಗೆ ಸಮಪರ್ಕವಾದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಸುಸಜ್ಜಿತ ಶೌಚಾಲಯವಿಲ್ಲ. ವಿದ್ಯಾರ್ಥಿಗಳಲ್ಲಿ ಕ್ರೀಡಾ ಪತ್ರಿಭೆಯಿದ್ದರೂ, ತರಬೇತಿ ನೀಡಲು ದೈಹಿಕ ಶಿಕ್ಷಣ ಶಿಕ್ಷಕರಿಲ್ಲ. ಆಡಲು ಮೈದಾನವಿಲ್ಲ. ನಾಲ್ಕು ಕೊಠಡಿಗಳು ದುರಸ್ತೆಗೆ ಕಾದು, ಮಳೆಗೆ ಸೋರುತ್ತಿವೆ.

ಕುಡುಕರ ತಾಣವಾದ ಕೆಸರಹಟ್ಟಿ ಕಾಲೇಜು:

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕೆ ಕೆಸರಹಟ್ಟಿಯಲ್ಲಿ ಪಿಯು ಕಾಲೇಜು ಆರಂಭಿಸಲಾಗಿದೆ. ಈ ಸ್ಥಳ ನಿತ್ಯ ಸಂಜೆ ಕುಡುಕರ ತಾಣವಾಗಿ ಪರಿವರ್ತನೆ ಆಗುತ್ತಿದೆ. ಯುವಕರು ನಿತ್ಯ ಮದ್ಯಪಾನ, ಧೂಮಪಾನ ಮಾಡಿ, ಎಲ್ಲೆಂದರಲ್ಲೆ ಬಾಟಲ್, ಸಿಗರೇಟ್,‌ ಎಸೆದು, ಗುಟ್ಕಾ ತಿಂದು ಕೊಠಡಿಗಳಲ್ಲಿ ಉಗುಳುತ್ತಾರೆ. ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಶೌಚಾಲಯವಿಲ್ಲ. ಕುಡಿಯುವ ನೀರಿಲ್ಲ. ಎಲ್ಲದಕ್ಕೂ ಪಕ್ಕದ ಪ್ರೌಢಶಾಲೆಯನ್ನೇ ಆಶ್ರಯಿಸಬೇಕಿದೆ.

ಪ್ರೌಢಶಾಲೆ ಕಟ್ಟಡದಲ್ಲಿ ಶ್ರೀರಾಮನಗರ ಕಾಲೇಜು:

ಶ್ರೀರಾಮನಗರದಲ್ಲಿ ಪಿಯು ಕಾಲೇಜಿನ ಕಟ್ಟಡ ದುರಸ್ತಿಗೆ ಕಾದು 10 ವರ್ಷಗಳು ಕಳೆದಿವೆ. ಈವರೆಗೆ ನೂತನ ಕಟ್ಟಡ ಮಂಜೂರು ಆಗಿಲ್ಲ. ಅನಿವಾರ್ಯವಾಗಿ ಕಾಲೇಜಿನ ಬಳಿನ ಬೊಬ್ಬಾರಾಮಚಂದ್ರರಾವ್ ಸರ್ಕಾರಿ ಪ್ರೌಢಶಾಲಾ ಕಟ್ಟಡದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ತರಗತಿ ನಡೆಸಲಾಗುತ್ತಿದೆ. ಶೌಚಾಲಯಕ್ಕೆ, ಕುಡಿಯುವ ನೀರಿಗೂ ಪ್ರೌಢಶಾಲೆಯೇ ಆಸರೆಯಾಗಿದೆ.

ಗಂಗಾವತಿ ತಾಲ್ಲೂಕಿನ ಕೆಸರಹಟ್ಟಿ ಪದವಿ ಪೂರ್ವ ಕಾಲೇಜಿನ ಕಿಟಕಿ ಗಾಜುಗಳಿಗೆ ಕಿಡಿಗೇಡಿಗಳಿಂದ ಹಾನಿ ಮಾಡಿರುವುದು
ಗಂಗಾವತಿ ತಾಲ್ಲೂಕಿನ ಕೆಸರಹಟ್ಟಿ ಪದವಿ ಪೂರ್ವ ಕಾಲೇಜಿನ ಕಿಟಕಿ ಗಾಜುಗಳಿಗೆ ಕಿಡಿಗೇಡಿಗಳಿಂದ ಹಾನಿ ಮಾಡಿರುವುದು
ಕೆಸರಹಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಅಪೂರ್ಣಗೊಂಡ ಶೌಚಾಲಯ
ಕೆಸರಹಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಅಪೂರ್ಣಗೊಂಡ ಶೌಚಾಲಯ
ಗಂಗಾವತಿ ಜೂನಿಯರ್ ಕಾಲೇಜಿನಲ್ಲಿ ದುರಸ್ತಿಗೆ ಕಾದ ಕೊಠಡಿ
ಗಂಗಾವತಿ ಜೂನಿಯರ್ ಕಾಲೇಜಿನಲ್ಲಿ ದುರಸ್ತಿಗೆ ಕಾದ ಕೊಠಡಿ

ಶ್ರೀರಾಮನಗರದಲ್ಲಿ ಬೃಹತ್ ಖಾಸಗಿ ಪಿಯು ಕಾಲೇಜುಗಳಿದ್ದು ಸರ್ಕಾರಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿ ಸಂಖ್ಯೆ ಹೆಚ್ಚಿಸಲು ಸುಸಜ್ಜಿತ ಕೊಠಡಿಗಳು ಅಗತ್ಯ ಸಿಬ್ಬಂದಿ ಸಂಪನ್ಮೂಲ ಉಪನ್ಯಾಸಕರ ಜತೆಗೆ ವಸತಿ ನಿಲಯ ಮತ್ತು ಕಾಲೇಜಿಗೆ ನೂತನ ಕಟ್ಟಡ ಒದಗಿಸಬೇಕಿದೆ.

–ಮಲ್ಲಿಕಾರ್ಜುನ ಪ್ರಾಚಾರ್ಯ ಸರ್ಕಾರಿ ಪಿಯು ಕಾಲೇಜು ಶ್ರೀರಾಮನಗರ

ನಿತ್ಯ ಸಂಜೆ ಕಾಲೇಜು ಆವರಣದಲ್ಲಿ ಯುವಕರು ಮದ್ಯಸೇವಿಸಿ ಕಾಲೇಜಿನ ಕಿಟಕಿ ಗಾಜುಗಳಿಗೆ ಕಲ್ಲೆಸೆದು ಗೋಡೆಗಳ ಮೇಲೆ ಅಶ್ಲೀಲ ಬರಹ ಬರೆದು ಹೋಗುತ್ತಿದ್ದಾರೆ. ಕಾಲೇಜಿನ ಸಿಬ್ಬಂದಿ ಅಶ್ಲೀಲ ಬರಹಗಳು ಕಾಣದಂತೆ ಅದರ ಮೇಲೆ ಸುಣ್ಣ ಹಚ್ಚುತ್ತ ಬರುತ್ತಿದ್ದಾರೆ. ಇದಕ್ಕೆ ಕಡಿವಾಣ ಬೀಳಬೇಕು.

–ಅಮರೇಶ ಉಪನ್ಯಾಸಕ ಪಿಯು ಕಾಲೇಜು ಕೆಸರಹಟ್ಟಿ

ಕಾಲೇಜಿನಲ್ಲಿ ಶೌಚಾಲಯ ಅಸ್ವಚ್ಛತೆಯಿಂದ ಕೂಡಿ ಗಬ್ಬುನಾರುತ್ತಿದ್ದು ಅನಿವಾರ್ಯವಾಗಿ ಇದನ್ನೇ ಬಳಸಬೇಕಿದೆ. ಕಾಲೇಜಿನಲ್ಲಿನ ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ ಕನಿಷ್ಠ 3 ಶೌಚಾಲಯಗಳಾದರೂ ನಿರ್ಮಿಸಬೇಕಿದೆ.

–ಮಂಜುಳಾ ವಿದ್ಯಾರ್ಥಿನಿ ಎಂಎನ್ಎಂ ಪಿಯು ಕಾಲೇಜು ಗಂಗಾವತಿ

ಜೂನಿಯರ್ ಕಾಲೇಜಿನಲ್ಲಿ ವಾಲಿಬಾಲ್ ಕಬಡ್ಡಿ ಕೊಕ್ಕೊ ಬ್ಯಾಡ್ಮಿಂಟನ್ ಕ್ರೀಡೆಗಳು ಆಡಲು ಮೈದಾನವೇ ಇಲ್ಲ. ಕಾಲೇಜಿನ ಮುಂಭಾಗ ಮೈದಾನವಿದ್ದು ಸಾರ್ವಜನಿಕರೇ ಹೆಚ್ಚಾಗಿ ಕ್ರಿಕೆಟ್ ಆಡುತ್ತಿರುತ್ತಾರೆ. ಕಾಲೇಜಿನಲ್ಲಿ ಕೆಲ ಕೊಠಡಿಗಳು ದುರಸ್ತಿಗೆ ಕಾದಿದ್ದು ಜೂನಿಯರ್ ವಿದ್ಯಾರ್ಥಿಗಳು ಅಲ್ಲೆ ಪಾಠ ಕೇಳುವ ಸ್ಥಿತಿಯಿದೆ.

–ನಾಗರಾಜ ವಿದ್ಯಾರ್ಥಿ ಬಾಲಕರ ಪದವಿ ಪೂರ್ವ ಕಾಲೇಜು ಗಂಗಾವತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT