ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನುಷ್ಯನಿಗೆ ಪಾಪ ಪ್ರಜ್ಞೆಯೇ ಇಲ್ಲ: ವಿಷಾದ

ಶಾಂತಿ ಪ್ರಕಾಶನದ ಮಹಮ್ಮದ್ ಕುಂಞಯಿಂದ ಕನ್ನಡದಲ್ಲಿ ಕುರ್‌ಅನ್ ಪ್ರವಚನ
Last Updated 18 ಫೆಬ್ರುವರಿ 2020, 9:39 IST
ಅಕ್ಷರ ಗಾತ್ರ

ಗಂಗಾವತಿ: ಸಮಾಜದ ಎಲ್ಲ ಶತಮಾನದಲ್ಲಿ ಕೆಡುಕುಗಳು ಇದ್ದವು. ಆದರೆ, ಆಧುನಿಕ ಸಮಾಜದ ಶಾಪ ಎಂದರೆ, ಪಾಪ ಮಾಡುವವನಿಗೆ ಪಾಪಪ್ರಜ್ಞೆ ಇಲ್ಲದಿರುವುದು ಎಂದು ಮಂಗಳೂರಿನ ಶಾಂತಿ ಪ್ರಕಾಶನದ ಪ್ರವಚನಕಾರ ಜನಾಬ್‌ ಮಹಮ್ಮದ್‌ ಕುಂಞ ವಿಷಾದಿಸಿದರು.

ಇಲ್ಲಿನ ಜುಲೈನಗರದ ಕಾಳಪ್ಪ ಮೈದಾನದಲ್ಲಿ ಭಾನುವಾರ ಜಮಾಆತೆ ಇಸ್ಲಾಮಿಯಾ ಹಿಂದ್‌ ಹಾಗೂ ಕುರಾನ್‌ ಪ್ರವಚನ ಸ್ವಾಗತ ಸಮಿತಿ ವತಿಯಿಂದ ನಡೆದ ಕನ್ನಡದಲ್ಲಿ ಸಾರ್ವಜನಿಕರಿಗೆ ಕುರ್‌ಅನ್‌ ಪ್ರವಚನ ಕಾರ್ಯಕ್ರಮದಲ್ಲಿ ‘ಕೆಡಕು ಮುಕ್ತ ಸಮಾಜ’ಕುರಿತು ಪ್ರವಚನ ನೀಡಿದರು.

ಜಗತ್ತಿಗೆ ಬಂದ ಪ್ರವಾದಿಗಳು, ಸಾಧು ಸಂತರು, ಧಾರ್ಮಿಕ ಗ್ರಂಥಗಳು, ಆಚಾರ್ಯರು ಮಾತನಾಡಿದ್ದು, ಈ ಮನುಷ್ಯನ ಬಗ್ಗೆ, ಮನುಷ್ಯನ ತರಬೇತಿ, ಸುಧಾರಣೆ ಬಗ್ಗೆ. ವ್ಯಕ್ತಿಗಳಿಂದ ಸಮಾಜ ನಿರ್ಮಾಣ ಆಗುತ್ತದೆ. ವ್ಯಕ್ತಿಗಳು ಒಳ್ಳೆಯವರಾದರೆ, ಆ ಒಳ್ಳೆಯ ವ್ಯಕ್ತಿಗಳು ಬದುಕುವ ಸಮಾಜ ಕೂಡ ಒಳ್ಳೆಯದಾಗಿರುತ್ತದೆ. ವ್ಯಕ್ತಿಗಳು ಕೆಟ್ಟು ಹೋಗುವಾಗ, ಕೆಟ್ಟ ವ್ಯಕ್ತಿಗಳಿಂದ ತುಂಬಿರುವ ಸಮಾಜವು ರೋಗಗ್ರಸ್ಥ ಸಮಾಜವಾಗುತ್ತದೆ ಎಂದರು.

ಇಂದು ನಾವು ಬದುಕುತ್ತಿರುವುದು ಆಧುನಿಕ ಜಗತ್ತಿನಲ್ಲಿ. ಆದರೆ, ಯಾವ ಕೆಡುಕಗಳಿಲ್ಲದ, ಒಳಿತುಗಳು ಮಾತ್ರ ಇರುವ ಸಮಾಜ ಅಲ್ಲ. ಆಧುನಿಕ ಸಮಾಜ. ಬದಲಾಗಿ ಹಳೆಯ ಅನಾಗರಿಕ ಕಾಲದಲ್ಲಿ ಯಾವೆಲ್ಲ ಕೆಡುಕಗಳಿದ್ದವೋ, ಆ ಎಲ್ಲ ಕೆಡುಕುಗಳನ್ನು ಆಧುನಿಕ ಶೈಲಿಯಲ್ಲಿ ಮಾಡುತ್ತಿರುವ ಸಮಾಜದಲ್ಲಿ. ಮನುಷ್ಯನ ಬದುಕಿಗೆ ಚೌಕಟ್ಟುಗಳಿಲ್ಲ. ಯಾವುದನ್ನು ಮಾಡಬಾರದು, ಕೇಳಬಾರದು ಎಂಬ ಯಾವ ಚೌಕಟ್ಟುಗಳು, ನಿಯಮಗಳು ಇಲ್ಲ ಎಂದಾದರೆ, ಮನುಷ್ಯ ಮನುಷ್ಯನಾಗಲಿಕ್ಕೆ ಸಾಧ್ಯವಿಲ್ಲ. ಮನುಷ್ಯನಿಗೆ ಚೌಕಟ್ಟುಗಳಿವೆ, ಅವು ಇರಲೇಬೇಕು. ಮನುಷ್ಯ ಮನುಷ್ಯನಾಗಿರಬೇಕಾದರೆ ಅವನಿಗೆ ಮೌಲ್ಯಗಳ ಚೌಕಟ್ಟುಗಳು ಇರಬೇಕು. ಇಲ್ಲವಾದರೆ, ಮನುಷ್ಯ ಮನುಷ್ಯನಾಗಿ ಉಳಿಯಲಿಕ್ಕೆ ಸಾಧ್ಯವಿಲ್ಲ ಎಂದರು.

ಇನ್ನು, ಜಗತ್ತಿನಲ್ಲಿ ಧರ್ಮ ವಿಶ್ವಾಸಿಗಳಿಂದ, ಪ್ರಾಮಾಣಿಕವಾಗಿ ದೇವರಲ್ಲಿ ನಂಬಿಕೆ ಇದ್ದವರಿಂದ, ಜಗತ್ತಿನಲ್ಲಿ ಯಾವ ಸಮಸ್ಯೆಗಳು ಇಲ್ಲಿಯ ತನಕ ಆಗಲಿಲ್ಲ. ಲೋಕಾಂತ್ಯದ ತನಕವೂ ಆಗುವುದಿಲ್ಲ. ಅಧರ್ಮಕ್ಕೆ ಧರ್ಮದ ಮುಖವಾಡವನ್ನು ತೊಡಿಸಿದಾಗ, ಅಧಿಕಾರ ಪಡೆಯುವ, ಇರುವ ಅಧಿಕಾರವನ್ನು ಉಳಿಸುವ, ಟ್ರೋಲ್‌ ಆಗುವಾಗ ಧರ್ಮದ ಹೆಸರಲ್ಲಿ ಗೊಂದಲಗಳು ಉಂಟಾಗುತ್ತವೆ ಎಂದು ಹೇಳಿದರು.

ಇದುವರೆಗೂ ಇಹಲೋಕ, ಪರಲೋಕ ಅಂತಾ ಇತ್ತು. ಈ ಬಗ್ಗೆಎಲ್ಲ ಧರ್ಮಗಳು ಕೂಡ ಚರ್ಚೆ ಮಾಡಿವೆ. ಇದರ ಜೊತೆ ಇದೀಗ ಮತ್ತೊಂದು ಇಹಲೋಕ ಅಂತಾ ಸೇರಿಕೊಂಡಿದೆ. ಇದಕ್ಕೆ ಸೋಶಿಯಲ್‌ ಮೀಡಿಯಾ ಎಂದು ಹೇಳುತ್ತೇವೆ. ಜನರು ಬಹಳ ಸುಲಭವಾಗಿ, ಬಲಪ್ರದವಾಗಿ ಉಪಯೋಗಿಸುತ್ತಿರುವ ಮಾಧ್ಯಮ ಈ ಸೋಶಿಯಲ್‌ ಮೀಡಿಯಾ.ಈ ಸೋಶಿಯಲ್‌ ಮೀಡಿಯಾಗಳಿಂದ ಎಷ್ಟು ಒಳಿತುಗಳಿವೆಯೋ ಅದಕ್ಕಿಂತ ಹೆಚ್ಚು ಕೆಡುಕುಗಳಿವೆ. ಅದರ ಬಗ್ಗೆ ನಮಗೆ ಗೊತ್ತಿರಬೇಕು. ಮಕ್ಕಳಿಗೆ ಹೇಳಿಕೊಡಬೇಕು. ಆಧುನಿಕ ಸವಲತ್ತುಗಳನ್ನು ಖಂಡಿತವಾಗಿ ಉಪಯೋಗಿಸಬೇಕು ಎಂದು ಹೇಳಿದರು.

ನಂತರ ಸುಳೇಕಲ್‌ ಬೃಹನ್ಮಠದ ಭುವನೇಶ್ವರಯ್ಯ ತಾತಾ ಮಾತನಾಡಿ, ಕನ್ನಡದಲ್ಲಿ ಕುರಾನ್‌ ಪ್ರವಚನವು ಒಳ್ಳೆಯ ಕಾರ್ಯಕ್ರಮವಾಗಿದ್ದು, ಮೂರು ದಿನವೂ ಮಾನವನ ಕಲ್ಯಾಣವನ್ನು ಕುರಿತಾಗಿರುವ ವಿಷಯಗಳು ಪ್ರಸ್ತಾಪವಾಗಿವೆ. ಕುರಾನ್‌ನಲ್ಲಿರುವ ವಿಚಾರಗಳು, ಪ್ರವಾದಿಗಳು, ಬಸವಾದಿ ಶರಣರು, ಸಾಧು ಸಂತರು ಹೇಳಿದ ಸಂದೇಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಆಳವಡಿಸಿಕೊಂಡಾಗ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಬಹುದು ಎಂದು ಹೇಳಿದರು.

ಈ ವೇಳೆ ಇಸಿಐ ಚರ್ಚ್‌ ಬಿಶಪ್‌ ರೆವರೆಂಡ್‌ ಜಾನ್‌ ಮುಳ್ಳೂರ್‌, ಜಮಾತೆ ಇಸ್ಲಾಮಿ ಹಿಂದ್‌ ರಾಜ್ಯ ಉಪಾಧ್ಯಕ್ಷ ಜನಾಬ್‌ ಮಹಮ್ಮದ್‌ ಯೂಸೂಫ್‌ ಕನ್ನಿ, ವಾಣಿಜೋದ್ಯಮಿ ಸುರೇಶ್‌ ಸಿಂಗನಾಳ, ಮಾಜಿ ಸಂಸದ ಶಿವರಾಮೇಗೌಡ, ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಪ್ರಮುಖರಾದ ನೂರುಲ್ಲಾ ಖಾದ್ರಿ, ಆಖ್ತರ್‌ ಅನ್ಸಾರಿ, ಖಾಸಿಂಸಾಬ್‌ ಗದ್ವಾಲ್‌, ಸೈಯ್ಯದ್‌ ಅಲಿ, ಮನೋಹರಸ್ವಾಮಿ ಹಿರೇಮಠ, ಶಾಮೀದ್‌ ಮನಿಯಾರ್‌ ಸೇರಿದಂತೆ ನಗರಸಭೆ ಸದಸ್ಯರು,ಸಂಘಟಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT