ಮುನಿರಾಬಾದ್: ಇಲ್ಲಿನ ಕೈಗಾರಿಕಾ ಪ್ರದೇಶದ(ಎಸ್‌ಜೆಎಸ್ ಕಾಲೊನಿ) ರಾಘವೇಂದ್ರ ಸ್ವಾಮಿ ಮಠದಲ್ಲಿ ಮಂಗಳವಾರದಿಂದ(ಆಗಸ್ಟ್ 20) ಮೂರು ದಿನಗಳ ಕಾಲ ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವ ನಡೆಯಲಿದೆ.
ಕಾಲೊನಿಯ ಆಂಜನೇಯ ಸ್ವಾಮಿ ದೇವಸ್ಥಾನ ಆವರಣದಲ್ಲಿನ ಮಠದಲ್ಲಿ ಸೋಮವಾರ ತಯಾರಿ ನಡೆದಿದ್ದು, ದೇವಸ್ಥಾನ ಮತ್ತು ಮಠವನ್ನು ಸುಣ್ಣಬಣ್ಣಗಳಿಂದ ಅಲಂಕರಿಸಲಾಗಿದೆ. ಸೋಮವಾರ ಉಪಾಕರ್ಮ, ಪೂಜೆ ಅಲಂಕಾರ, ಸಂಜೆ ಧ್ವಜಾರೋಹಣ ಮತ್ತು ಪಂಚರಾತ್ರೋತ್ಸವ ಪೂಜೆ ನಡೆಯಿತು.
ಮಂಗಳವಾರ ರಾಯರ ಪೂರ್ವಾರಾಧನೆ ಅಂಗವಾಗಿ ಸುಪ್ರಭಾತ, ಅಷ್ಟೋತ್ತರ, ಅಭಿಷೇಕ ಹಾಗೂ ಪೂಜೆ, ಅಲಂಕಾರ, ತೊಟ್ಟಿಲು ಪೂಜೆ ನಡೆಯುತ್ತದೆ. ಬುಧವಾರ ಮದ್ಯಾರಾಧನೆ ಅಂಗವಾಗಿ, ಅಷ್ಟೋತ್ತರ, ವಿಶೇಷ ಪಂಚಾಮೃತ ಅಭಿಷೇಕ, ಕನಕಾಭಿಷೇಕ, ನೈವೇದ್ಯ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ.
ಗುರುವಾರ ಉತ್ತರಾರಾಧನೆ ಅಂಗವಾಗಿ ಕನಕಾಭಿಷೇಕ, ರಥೋತ್ಸವ, ನೈವೇದ್ಯ ಹಾಗೂ ಹಸ್ತೋದಕ, ಮಹಾಮಂಗಳಾರತಿ ಮತ್ತು ಪ್ರಸಾದ ವಿತರಣೆ ನಡೆಯುತ್ತದೆ ಎಂದು ಮಠದ ಪ್ರಕಟಣೆ ತಿಳಿಸಿದೆ.