ಶನಿವಾರ, ಅಕ್ಟೋಬರ್ 16, 2021
21 °C
ಜಿಲ್ಲೆಯ ವಿವಿಧೆಡೆ ಜಮೀನುಗಳಿಗೆ ನುಗ್ಗಿದ ನೀರು; ರೈತರಲ್ಲಿ ಆತಂಕ

ಮಳೆ: ಅಪಾರ ಬೆಳೆ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಳವಂಡಿ: ಸಮೀಪದ ಮೈನಳ್ಳಿ- ಬಿಕನಳ್ಳಿ ಗ್ರಾಮದಲ್ಲಿ ಸೋಮವಾರ ಸುರಿದ ಬಾರಿ ಮಳೆಯಿಂದ ಕೆರೆ, ಚರಂಡಿ, ಕಟ್ಟೆಗಳು ತುಂಬಿ ಹರಿಯುತ್ತಿವೆ.

ಸೋಮವಾರ ಮಧ್ಯಾಹ್ನ ಸುರಿದ ಮಳೆಯಿಂದ ಜಮೀನುಗಳಲ್ಲಿ ನೀರು ನಿಂತಿರುವುದರಿಂದ ಮೆಕ್ಕೆಜೋಳ, ಈರುಳ್ಳಿ, ಮೆಣಸಿನಕಾಯಿ ಸೇರಿದಂತೆ ಇತರ ಬೆಳೆಗಳು ಹಾನಿ ಆಗಿದ್ದು, ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಈ ಬಗ್ಗೆ ಜಮೀನಿನ ರೈತ ವಿಧ್ಯಾದರ ಮಾತನಾಡಿ, ಮಳೆಯಿಂದ ಜಮೀನಿ ಗೆ ನೀರು ನುಗ್ಗಿ, ಬೆಳೆದ ಬೆಳೆಗಳು ಹೊಲದಲ್ಲಿಯೇ ಕೊಳೆಯುತ್ತಿವೆ. ಇದರಿಂದ ನಷ್ಟ ಉಂಟಾಗಿದೆ ಎಂದರು. ಅಳವಂಡಿ- ಸಿಂದೋಗಿ ರಸ್ತೆ‌ ಮೇಲೆ ಮಳೆ ಸುರಿದ ಪರಿಣಾಮವಾಗಿ ಚರಂಡಿ ನೀರು ಹರಿದು ಬಂದಿದ್ದರಿಂದ ಸಂಚಾರ ಅಸ್ತವ್ಯಸ್ತವಾಗಿತ್ತು.

ಈರುಳ್ಳಿ ಹಾನಿ: ಸತತ ಮಳೆ ಯಿಂದ ಹಾಗೂ ಕೊಳೆ ರೋಗದಿಂದ ಈರುಳ್ಳಿ ಬೆಳೆ ಹಾಳಾಗಿ ರೈತರಿಗೆ ಸಂಕಷ್ಟ ಎದುರಾಗಿದೆ. ಗ್ರಾಮದ ರೈತ ಅಂದಾನಪ್ಪ ಟುಬಾಕಿ ಅವರ ತಮ್ಮ 2 ಕ್ಕಿಂತ ಹೆಚ್ಚು ಎಕ್ಕರೆ ಭೂಮಿಯಲ್ಲಿ ಬೋರವೆಲ್ ಮೂಲಕ ಸುಮಾರು ₹1 ಲಕ್ಷಕ್ಕಿಂತ ಹೆಚ್ಚು ಖರ್ಚು ಮಾಡಿ ಈರುಳ್ಳಿ ಬೆಳೆ ಬೆಳೆದ್ದಿದ್ದು, ಅದು ಮಳೆ ಹಾಗೂ ಕೊಳೆ ರೋಗದಿಂದ ಕಟಾವು ಮಾಡಿದ ಈರುಳ್ಳಿ ಕೊಳೆತು ನಾರುತ್ತಿದೆ.ರೈತ ಅಂದಾನಪ್ಪ ಟುಬಾಕಿ ಮಾತನಾಡಿ, ಮಳೆಯಾಗುತ್ತಿ ರುವುದರಿಂದ ಈರುಳ್ಳಿ ಕೊಳೆಯುತ್ತಿದೆ. ಕೈಗೆ ಬಂದ ಅಲ್ಪ ಸ್ವಲ್ಪ ಬೆಳೆ ಮಾರುಕಟ್ಟೆಗೆ ಸಾಗಿಸಿದರೆ ಸಾಗಣೆ ವೆಚ್ಚವು ಸಿಗಲ್ಲ. ಸರ್ಕಾರ ರೈತರಿಗೆ ಪರಿಹಾರ ನೀಡಬೇಕು ಎಂದು
ಮನವಿ ಮಾಡಿದರು.

ಧಾರಾಕಾರ ಮಳೆ

ಕುಷ್ಟಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಸೋಮವಾರ ಮಧ್ಯಾಹ್ನ ಅತ್ಯಧಿಕ ಮಳೆ ಸುರಿದಿದೆ.

ಪಟ್ಟಣದಲ್ಲಿ ಸುಮಾರು ಒಂದು ಗಂಟೆ ಧಾರಾಕಾರ ಮಳೆ ಸುರಿದರೆ ಸುತ್ತಲಿನ ಕೆಲವು ಗ್ರಾಮಗಳಲ್ಲಿಯೂ ಉತ್ತಮ ಮಳೆ ಬಂದಿದೆ. ಮಧ್ಯಾಹ್ನದ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತು.

ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನರು ತೊಂದರೆ ಅನುಭವಿಸಿದರು. ಚರಂಡಿಗಳು ತುಂಬಿ ಹರಿದರೆ ಕೆಲವು ಕಡೆ ಕಟ್ಟಿಕೊಂಡು ಕೊಳಚೆ ನೀರು ರಸ್ತೆಗೆ ಹರಿಯಿತು ಎಂದು ಜನರು ತಿಳಿಸಿದರು. ಪಕ್ಕದ ಯಲಬುರ್ಗಾ ತಾಲ್ಲೂಕಿನ ಕೆಲವು ಹಳ್ಳಿಗಳಲ್ಲಿ ಭಾರಿ ಮಳೆ ಸುರಿದು ಗುಮಗೇರಾ ಬಳಿಯ ಎರೆ ಹಳ್ಳ ತುಂಬಿ ಹರಿಯಿತು ಎಂದು
ಗ್ರಾಮಸ್ಥರು ಹೇಳಿದರು.

ತಾಲ್ಲೂಕಿನ ಕಂದಕೂರು ಗ್ರಾಮದ ಹೊರ ಪ್ರದೇಶದ ಯಡ್ಡೋಣಿ ದಾರಿಯಲ್ಲಿರುವ ಕೆಲವು ಮನೆಗಳಲ್ಲಿ ನೀರು ಬಂದಿದೆ. ಸುತ್ತಲೂ ತಗ್ಗುಗುಂಡಿಗಳಿವೆ. ಈ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆದಿಲ್ಲ, ಮಳೆ ನೀರು ಸರಾಗವಾಗಿ ಹರಿದು ಹೋಗುವುದಕ್ಕೆ ಯಾವುದೇ ದಾರಿ ಇಲ್ಲ. ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ ವಹಿಸಿದೆ.

ಮನೆಗಳ ಸುತ್ತಲಿನ ಗುಂಡಿಗಳಲ್ಲಿ ಸಂಗ್ರಹವಾಗುವ ನೀರು ಮನೆಯೊಳಗೆ ಬಸಿದು ಬರುತ್ತದೆ. ಸಾಮನುಗಳನ್ನು ಇಟ್ಟುಕೊಳ್ಳಲು, ಮಲಗುವುದಕ್ಕೆ ಜಾಗವಿಲ್ಲ, ಮಕ್ಕಳು, ಮಹಿಳೆಯರು ಇಡಿ ರಾತ್ರಿ ಜಾಗರಣೆ ಮಾಡುವಂತಾಗಿದೆ. ಈ ಭಾಗದ ಅನೇಕ ಮನೆಗಳ ಜನರು ಅನುಭವಿಸುವ ನೋವು ಯಾರಿಗೂ ಅರ್ಥವಾಗುತ್ತಿಲ್ಲ ಎಂದು ತೊಂದರೆಗೆ ಒಳಗಾಗಿರುವ ದೇವರಡ್ಡೆಪ್ಪ ಕಂದಕೂರು ‘ಪ್ರಜಾವಾಣಿ’ಗೆ ಸಮಸ್ಯೆ ವಿವರಿಸಿದರು.

ಕಳೆದ ಮೂರು ದಿನಳಗಳಿಂದಲೂ ಪ್ರತಿದಿನ ಮಳೆಯಾಗುತ್ತಿದ್ದು ಕೃಷಿ ಚಟುವಟಿಕೆಗಳಿಗೆ ಅಡ್ಡಿಯಾಗಿದೆ, ಹೊಲಗದ್ದೆಗಳು ಜಲಾವೃತವಾಗಿವೆ. ಮಸಾರಿ ಜಮೀನಿನಲ್ಲಿ ಸಜ್ಜೆ, ಮೆಕ್ಕೆಜೋಳ, ಸೂರ್ಯಕಾಂತಿ ಕಟಾವು ನಡೆಯುತ್ತಿದ್ದು ಮಳೆಯಿಂದ ಸಮಸ್ಯೆಯಾಗಿದೆ.

ಎರೆ ಜಮೀನುಗಳಲ್ಲಿ ತೇವಾಂಶ ಹೆಚ್ಚಿದ್ದು ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಕಡಲೆ ಬಿತ್ತನೆಗೆ ಮಳೆ ಅಡ್ಡಿಯಾಗಿದೆ ಎಂದು ತೋಪಲಕಟ್ಟಿಯ ಬಸವರಾಜ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.