ಕೊಪ್ಪಳ: ‘ಹಿಂದೆ ವಾಮಮಾರ್ಗದಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿ ಈಗ ರಾಜ್ಯ ಸರ್ಕಾರವನ್ನು ಬೀಳಿಸುವ ಪ್ರಯತ್ನ ಮಾಡುತ್ತಿದ್ದು, ನಮ್ಮ ಸರ್ಕಾರಕ್ಕೆ ಏನೂ ಆಗುವುದಿಲ್ಲ. ಇನ್ನುಳಿದ ಅವಧಿಗೂ ಸುಭದ್ರವಾಗಿರುತ್ತದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ತಾಲ್ಲೂಕಿನ ಗಿಣಗೇರಿಯಲ್ಲಿ ಏರ್‌ಸ್ಟ್ರಿಪ್‌ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಬೆಂಗಳೂರಿನಲ್ಲಿ ಬಿಜೆಪಿಯವರ ಕಚೇರಿ ಮಲ್ಲೇಶ್ವರಂನಲ್ಲಿ ಇಲ್ಲ. ಇದೀಗ ಅದು ರಾಜಭವನಕ್ಕೆ ಸ್ಥಳಾಂತರವಾಗಿದೆ. ರಾಜಭವನ ಬಿಜೆಪಿ ಕಚೇರಿಯಾಗಿದೆ’ ಎಂದು ಆರೋಪಿಸಿದರು.
‘ಕೊಪ್ಪಳದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪ್ರಯತ್ನ ನಡೆಯುತ್ತಿದೆ. ಜಾಗ ಹುಡುಕಾಡಲಾಗುತ್ತಿದೆ. ಬಿಜೆಪಿ ಅವಧಿಯಲ್ಲಿಯೇ ಸಾಕಷ್ಟು ರಸ್ತೆಗಳು ಹಾಳಾಗಿದ್ದು ಅವುಗಳನ್ನು ನಾವು ದುರಸ್ತಿ ಮಾಡುತ್ತೇವೆ. ತೋಟಗಾರಿಕಾ ಹೈ ಟೆಕ್ನಾಲಜಿ ಪಾರ್ಕ್‌ಗೆ ಸಿದ್ಧಪಡಿಸಿದ್ದ ಡಿಪಿಆರ್‌ನಲ್ಲಿ ಒಂದಷ್ಟು ಮಾರ್ಪಾಡು ಮಾಡಬೇಕಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಲಾಗುವುದು’ ಎಂದರು.