ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂದರ್ಶನ | ನೀರಾವರಿ ಯೋಜನೆಗಳಿಗೆ ಮೊದಲ ಆದ್ಯತೆ: ರಾಜಶೇಖರ ಹಿಟ್ನಾಳ

Published 9 ಜೂನ್ 2024, 6:17 IST
Last Updated 9 ಜೂನ್ 2024, 6:17 IST
ಅಕ್ಷರ ಗಾತ್ರ

ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದೀರಿ. ಏನು ಹೇಳಲು ಬಯಸುತ್ತೀರಿ?

ನನ್ನ ಮೇಲೆ ಭರವಸೆಯಿಟ್ಟು ಸತತ ಎರಡನೇ ಬಾರಿಗೆ ಟಿಕೆಟ್‌ ನೀಡಿದ ಪಕ್ಷದ ಎಲ್ಲ ನಾಯಕರಿಗೆ ಮೊದಲು ಧನ್ಯವಾದ ಹೇಳುವೆ. ಎಂಟು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿ ಹೊಂದಿರುವ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಪ್ರತಿಯೊಬ್ಬರೂ ಸಂಘಟನಾತ್ಮಕವಾಗಿ ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಿದ್ದಾರೆ. ನನ್ನ ಕಾರ್ಯಕರ್ತರು, ಮುಖಂಡರು ಹಾಗೂ ನಾಯಕರ ಶ್ರಮ ಗೆಲುವಿಗೆ ಕಾರಣ. ಕ್ಷೇತ್ರದ ಜನ ನನ್ನ ಮೇಲಿಟ್ಟ ನಿರೀಕ್ಷೆ ನಿಜ ಮಾಡುವೆ.

2019ರ ಚುನಾವಣೆಯಲ್ಲಿ ಕಂಡಿದ್ದ ಕಡಿಮೆ ಮತಗಳ ಅಂತರದ ಸೋಲು ಈ ಬಾರಿ ಅನುಕಂಪದ ಅಲೆಯಾಗಿ ಬದಲಾಯಿತೇ?

ನನ್ನ ಗೆಲುವಿಗೆ ಅನೇಕ ಕಾರಣಗಳು ಇವೆ. ಹಿಂದಿನ ಚುನಾವಣೆಯಲ್ಲಿ ಎದುರಿಸಿದ್ದ ಸೋಲಿನ ಎಲ್ಲ ಅಂಶಗಳನ್ನು ಗಮನಿಸಿಕೊಂಡು ಅದಕ್ಕೆ ತಕ್ಕಂತೆ ಯೋಜನೆ ರೂಪಿಸಿ ಈ ಬಾರಿ ಕೆಲಸ ಮಾಡಿದೆವು. ಅನುಕಂಪ ಮಾತ್ರವಲ್ಲ; ಇದರ ಜೊತೆಗೆ ಬೇರೆ ಹಲವು ಅಂಶಗಳೂ ನನ್ನ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿವೆ.

ಸಂಗಣ್ಣ ಕರಡಿ ಪಕ್ಷಕ್ಕೆ ಬಂದಿದ್ದು ಅನುಕೂಲವಾಯಿತೇ?

ಸಂಗಣ್ಣ ಕರಡಿ ಅವರು ಮೊದಲು ಬಿಜೆಪಿಯಲ್ಲಿದ್ದರೂ ಪಕ್ಷಾತೀತವಾಗಿ ಎಲ್ಲ ಕಾರ್ಯಕರ್ತರು ಹಾಗೂ ನಾಯಕರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದು, ಅವರದ್ದೇ ಆದ ತಂಡವಿದೆ. ಅವರು ಶ್ರಮಪಟ್ಟು ಕೆಲಸ ಮಾಡಿದ್ದು ಗೆಲುವಿಗೆ ಸಹಕಾರಿಯಾಯಿತು.

ಕ್ಷೇತ್ರದ ಅಭಿವೃದ್ಧಿಗೆ ನಿಮ್ಮ ಕನಸುಗಳೇನು?

ಕನಕಗಿರಿ ಬಳಿ ನವಲಿಯಲ್ಲಿ ಸಮತೋಲನ ಜಲಾಶಯ ನಿರ್ಮಾಣ ಮಾಡುವ ಅಗತ್ಯವಿದೆ. ತುಂಗಭದ್ರಾ ಜಲಾಶಯದಲ್ಲಿ ನೀರು ವ್ಯರ್ಥವಾಗಿ ಹರಿದು ಹೋಗುವ ಬದಲು ಪರ್ಯಾಯ ಜಲಾಶಯ ನಿರ್ಮಿಸಿದರೆ ಜನರಿಗೆ ಅನುಕೂಲವಾಗುತ್ತದೆ. ಬರಗಾಲದ ಸಮಯದಲ್ಲಿಯೂ ನೀರಿನ ಹಪಾಹಪಿಯೂ ತಪ್ಪುತ್ತದೆ. ಈ ಯೋಜನೆ ತ್ವರಿತಗತಿಯಲ್ಲಿ ಜಾರಿಗೆ ತರಲು ಪ್ರಯತ್ನಿಸುವೆ. ಸಂಬಂಧಪಟ್ಟ ಶಾಸಕರು, ಮುಖಂಡರ ಜೊತೆ ಸಚಿವರೊಂದಿಗೆ ಚರ್ಚಿಸುವೆ. ಬಾಕಿ ಉಳಿದ ರೈಲ್ವೆ ಕಾಮಗಾರಿಗಳಿಗೆ ಡಿಪಿಆರ್‌ ಸಿದ್ಧವಾಗಿದೆ, ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಬೇಕಿದೆ. ರಾಜ್ಯದಲ್ಲಿ ನಮ್ಮ ಪಕ್ಷವೇ ಅಧಿಕಾರದಲ್ಲಿರುವ ಕಾರಣ ರಾಜ್ಯದ ನೆರವಿನೊಂದಿಗೆ ಕೊಪ್ಪಳದಲ್ಲಿ ವಿಮಾನ ನಿಲ್ದಾಣದಲ್ಲಿ ಸ್ಥಾಪನೆ, ರೈಸ್‌ ಟೆಕ್ನಾಲಜಿ ಪಾರ್ಕ್‌ ನಿರ್ಮಾಣ, ಹುಲಿಗಿ ಮತ್ತು ಅಂಜನಾದ್ರಿ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡುವೆ.

ಸಂಸದರಾದರೂ ಕೇಂದ್ರದಲ್ಲಿ ಇಂಡಿಯಾ ಒಕ್ಕೂಟ ಸರ್ಕಾರ ರಚನೆ ಮಾಡುತ್ತಿಲ್ಲ. ಈಗಿನ ಪರಿಸ್ಥಿತಿಯಲ್ಲಿ ಕೇಂದ್ರದಿಂದ ಸುಲಭವಾಗಿ ಅನುದಾನ ತರಲು ಸಾಧ್ಯವೇ?

ಸಹಜವಾಗಿ ಸ್ವಲ್ಪ ಮಟ್ಟಿಗೆ ತೊಂದರೆಯಾಗುತ್ತದೆ. ನಮ್ಮ ಪಕ್ಷದಲ್ಲಿ ಅನೇಕ ಹಿರಿಯ ನಾಯಕರು ಇದ್ದು ಅವರ ಸಲಹೆ ಹಾಗೂ ಮಾರ್ಗದರ್ಶನ ಪಡೆದು ಕ್ಷೇತ್ರದ ಅಭಿವೃದ್ಧಿಗೆ ಗರಿಷ್ಠ ಅನುದಾನ ತರುವೆ.

ನಿಮ್ಮ ಸಹೋದರನೇ ಕೊಪ್ಪಳ ಕ್ಷೇತ್ರದ ಶಾಸಕ, ನೀವು ಸಂಸದ. ಈಗ ಜಿಲ್ಲಾ ಕೇಂದ್ರದ ಅಭಿವೃದ್ಧಿಗೆ ವೇಗ ಲಭಿಸಬಹುದೇ?

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಅನುದಾನ ಪಡೆದು ಕೆಲಸ ಮಾಡುತ್ತೇವೆ. ಕ್ಷೇತ್ರ ವ್ಯಾಪ್ತಿಯಲ್ಲಿ ಹಲವು ನೀರಾವರಿ ಯೋಜನೆಗಳು ಪ್ರಗತಿ ಹಂತದಲ್ಲಿದ್ದು, ಅವುಗಳ ಬಗ್ಗೆ ಸಂಪೂರ್ಣ  ಮಾಹಿತಿ ಪಡೆದುಕೊಂಡು ನನ್ನ ಅವಧಿಯಲ್ಲಿ  ಪೂರ್ಣಗೊಳಿಸುವೆ.

ಈ ಸಲದ ಚುನಾವಣೆಯಲ್ಲಿ ಸಿರಗುಪ್ಪ ಮತ್ತು ಗಂಗಾವತಿ ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚು ಲೀಡ್‌ ಲಭಿಸಿದೆಯಲ್ಲ; ಇದರ ಬಗ್ಗೆ ಏನು ಹೇಳುತ್ತೀರಿ?

ಎರಡೂ ಕ್ಷೇತ್ರಗಳು ಮೊದಲಿನಿಂದಲೂ ಕಾಂಗ್ರೆಸ್‌ ಪಕ್ಷದ ಪರವಾಗಿಯೇ ಇವೆ. ಅಲ್ಲಿ ನಮ್ಮ ಪಕ್ಷದ ಪರ ಒಲವು ಇರುವ ಜನ ಇದ್ದಾರೆ. ಕುಷ್ಟಗಿ ಮತ್ತು ಸಿಂಧನೂರಿನಲ್ಲಿ ಮಾತ್ರ ಅಲ್ಪ ಹಿನ್ನಡೆಯಾಗಿದೆ. ಮುಂದಿನ ದಿನಗಳಲ್ಲಿ ಅಲ್ಲಿಯೂ ಮುನ್ನಡೆ ಗಳಿಸಲು ಪ್ರಯತ್ನ ಮಾಡುತ್ತೇವೆ.

ಗಂಗಾವತಿಯಲ್ಲಿ ಆಂತರಿಕ ಭಿನ್ನಾಭಿಪ್ರಾಯ ವ್ಯಾಪಕವಾಗಿತ್ತು. ಆದರೂ ಆ ಕ್ಷೇತ್ರದಲ್ಲಿ ದೊಡ್ಡ ಸಂಖ್ಯೆಯ ಲೀಡ್‌ ಸಾಧ್ಯವಾಗಿದ್ದು ಹೇಗೆ?

ಒಂದು ದೊಡ್ಡ ರಾಜಕೀಯ ಪಕ್ಷವೆಂದ ಮೇಲೆ ಸಣ್ಣ ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ. ಅವುಗಳನ್ನು ನಮ್ಮ ರಾಜ್ಯ ಮತ್ತು ಜಿಲ್ಲಾ ನಾಯಕರು ಸಮರ್ಪಕವಾಗಿ ನಿರ್ವಹಣೆ ಮಾಡಿದ್ದರಿಂದ ಉತ್ತಮ ಮತಗಳಲ್ಲಿ ಲೀಡ್‌ ಪಡೆದುಕೊಂಡಿದ್ದೇವೆ. ಯಾರು ಏನೇ ಬಣ ರಾಜಕಾರಣ ಮಾಡಿದರೂ ಎಲ್ಲರೂ ಪಕ್ಷಕ್ಕಾಗಿ, ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಕೆಲಸ ಮಾಡಿದ್ದಾರೆ.

ಅಪ್ಪನ ಆಸೆ ಈಡೇರಿಸಿದ ಮಗ

ರಾಜಶೇಖರ ಹಿಟ್ನಾಳ ಅವರ ತಂದೆ ಮಾಜಿ ಶಾಸಕ ಬಸವರಾಜ ಹಿಟ್ನಾಳ 2014ರಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಸೋಲು ಕಂಡಿದ್ದರು. ಮರುಚುನಾವಣೆ (2019ರಲ್ಲಿ) ರಾಜಶೇಖರ ಸ್ಪರ್ಧಿಸಿ ಕಡಿಮೆ ಮತಗಳ ಅಂತರದಿಂದ ಸೋತಿದ್ದರು. ಈ ಎರಡೂ ಚುನಾವಣೆಗಳಲ್ಲಿ ಹಿಟ್ನಾಳ ಕುಟುಂಬ 35 ಸಾವಿರ ಮತಗಳ ಅಂತರದ ಆಸುಪಾಸಿನಲ್ಲಿ ನಿರಾಸೆ ಕಂಡಿತ್ತು. ಮೂರನೇ ಬಾರಿಗೆ ಆ ಕುಟುಂಬಕ್ಕೆ ಸಂಸದ ಸ್ಥಾನ ಒಲಿಯಿತು.  

‘ತಂದೆಗೂ ಸಂಸದರಾಗುವ ಆಸೆಯಿತ್ತು. ಗೆಲುವಿಗಾಗಿ ಆಗಲೂ ಬಹಳಷ್ಟು ಪ್ರಯತ್ನ ಮಾಡಿದ್ದೆವು. ಆದರೆ ಸಾಧ್ಯವಾಗಲಿಲ್ಲ. ಎರಡನೇ ಬಾರಿ ಕೂಡ ನನಗೆ ಪ್ರಯತ್ನ ಮಾಡಿ ವಿಫಲವಾಗಿದೆ. ಈಗ ಎಲ್ಲರ ಒಗ್ಗಟ್ಟಿನ ಪ್ರಯತ್ನದಿಂದ ಗೆಲುವು ಸಾಧ್ಯವಾಗಿದೆ. ಅವರ ಆಸೆ ನನ್ನಿಂದ ಈಡೇರಿದೆ’ ಎಂದು ರಾಜಶೇಖರ ಹೇಳಿದರು.

ಲೋಕಸಭಾ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದಿಂದ ಎರಡನೇ ಬಾರಿ ಸ್ಪರ್ಧಿಸಿ ಮೊದಲ ಬಾರಿಗೆ ಸಂಸದರಾಗಿರುವ ಕೆ.ರಾಜಶೇಖರ ಹಿಟ್ನಾಳ ಅವರ ಮುಂದೆ ಸರಣಿ ಸವಾಲುಗಳಿವೆ. ಇವರ ಸಹೋದರ ರಾಘವೇಂದ್ರ ಹಿಟ್ನಾಳ ಶಾಸಕರಾಗಿರುವುದು, ರಾಜ್ಯದಲ್ಲಿ ತಮ್ಮದೇ ಪಕ್ಷದ ಸರ್ಕಾರ ಇರುವುದಿರಿಂದ ರಾಜ್ಯದ ನೆರವಿನೊಂದಿಗೆ ಕೇಂದ್ರದಿಂದಲೂ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡಬೇಕಿದೆ. ಅಭಿವೃದ್ಧಿಗೆ ನೂತನ ಸಂಸದರ ಕನಸುಗಳು ಏನು ಎನ್ನುವುದನ್ನು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಅವರು ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT