ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜನಾರ್ದನ ರೆಡ್ಡಿ ಬಿಜೆಪಿ ಸೇರ್ಪಡೆ; ಕಾರ್ಯಕರ್ತರಿಗೆ ಟ್ರೋಲ್‌

ಇಕ್ಬಾಲ್ ಅನ್ಸಾರಿ ಫ್ಯಾನ್ಸ್ ಖಾತೆಯಲ್ಲಿ ಹ್ಯಾಸ್ಯಾಸ್ಪದ ಪೋಸ್ಟ್, ವಿಡಿಯೊ ವೈರಲ್‌
ವಿಜಯ ಎನ್‌.
Published 26 ಮಾರ್ಚ್ 2024, 5:07 IST
Last Updated 26 ಮಾರ್ಚ್ 2024, 5:07 IST
ಅಕ್ಷರ ಗಾತ್ರ

ಗಂಗಾವತಿ: ಕ್ಷೇತ್ರದ ಶಾಸಕ ಹಾಗೂ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಜಿ. ಜನಾರ್ದನ ರೆಡ್ಡಿ ಸೋಮವಾರ ಬಿಜೆಪಿಗೆ ಸೇರುತ್ತಿದ್ದಂತೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಫ್ಯಾನ್ಸ್ ಎಂಬ ಫೇಸ್‌ಬುಕ್‌ ಖಾತೆಯಲ್ಲಿ ರೆಡ್ಡಿ ನಡೆ, ಕಾರ್ಯಕರ್ತರ ಪರಿಸ್ಥಿತಿ, ಅನ್ಸಾರಿ ಭಾಷಣದ ವಿಡಿಯೊ ತುಣುಕುಗಳು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗುತ್ತಿವೆ.

ಜನಾರ್ದನ ರೆಡ್ಡಿ ಹನುಮನ ಜನ್ಮಸ್ಥಳ ಅಂಜನಾದ್ರಿಗೆ ರಾಜ್ಯ ಸರ್ಕಾರ ₹100 ಕೋಟಿ, ಆನೆಗೊಂದಿ ಉತ್ಸವಕ್ಕೆ ಅನುದಾನ ನೀಡಿದ ಕಾರಣಕ್ಕೆ ಕಾಂಗ್ರೆಸ್ ಪರ ಮಾತನಾಡಿ ‘ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ನೀಡದಿರಿ’ ಎಂದು ಸದನದಲ್ಲಿಯೇ ಆಗ್ರಹಿಸಿದ್ದರು.

ಈಚೆಗೆ ಏಕಾಏಕಿ ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಿ ಬೆಂಗಳೂರಿನಲ್ಲಿ ಕೆಆರ್‌ಪಿಪಿ ಕಾರ್ಯಕರ್ತರ ಸಭೆ ನಡೆಸಿ ಈಗ ಬಿಜೆಪಿ ಸೇರಿದ್ದಾರೆ. ಹಿಂದಿನ ವಿಧಾನಸಭಾ ಚುನಾವಣೆ ವೇಳೆ ಮಾಜಿ ಸಚಿವ ಅನ್ಸಾರಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದರು. ಆಗ ಅವರು ‘ರೆಡ್ಡಿ ಗೆದ್ದರೂ ಬಿಜೆಪಿ ಸೇರುತ್ತಾನೆ’ ಎಂದಿದ್ದರು. ಇದನ್ನು ಅವರ ಕಾರ್ಯಕರ್ತರು ಬೆಂಬಲಿಸಿದ್ದರು. ಈಗ ರೆಡ್ಡಿ ಸೇರ್ಪಡೆಯಾಗಿದ್ದರಿಂದ ಅನ್ಸಾರಿ ಹೇಳಿಕೆಗಳು ಸಾಮಾಜಿಕ ತಾಣದಲ್ಲಿ ಹೆಚ್ಚು ಪ್ರಚಾರ ಪಡೆದುಕೊಳ್ಳುತ್ತಿವೆ.    

‘ರೆಡ್ಡಿ ಇದೀಗ ಬಿಜೆಪಿ ಸೇರಿದರಲ್ಲ, ಇರಪ್ಪೊ ಮಾರಾಯ, ಕಾರ್ಯಕರ್ತರು ಯಾವ ದಿಕ್ಕಿಗೆ ಹೋಗಬೇಕಂತ ದಿಕ್ಕುತೋಚವಲ್ದು’ ಎಂಬ ಸಂದೇಶ ಹರಿದಾಡುತ್ತಿದೆ. ಇದಕ್ಕೆ  ಭಿನ್ನ, ವಿಭಿನ್ನ ಹಾಸ್ಯಮತ ಮತ್ತು ವ್ಯಂಗ್ಯವಾದ ಪ್ರತಿಕ್ರಿಯೆಗಳು ಬಂದಿವೆ.

ಚುನಾವಣೆ ಸಂದರ್ಭದಲ್ಲಿ ಅನ್ಸಾರಿ ಪಕ್ಕದಲ್ಲಿದ್ದ ಬಹುತೇಕ ಅಲ್ಪಸಂಖ್ಯಾತರ ನಗರಸಭೆ ಸದಸ್ಯರು, ಮುಖಂಡರು, ಕಾರ್ಯಕರ್ತರು ರೆಡ್ಡಿ ಅವರನ್ನು ಬೆಂಬಲಿಸಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು. ರೆಡ್ಡಿ ಬಿಜೆಪಿ ಸೇರಿದ ಕೂಡಲೇ ರೆಡ್ಡಿ ಬಳಿ ಕ್ಲಿಕ್ಕಿಸಿಕೊಂಡ ಅಲ್ಪಸಂಖ್ಯಾತರ ಮುಖಂಡರ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ‘ಇವರ ಪಾಡೇನೂ ಸ್ವಾಮಿ, ನಡುನೀರಿನಲ್ಲಿ ಕೈ ಬಿಟ್ಬಿಟ್ರಿ’ ಎಂಬ ಶೀರ್ಷಿಕೆ ಬರೆಯಲಾಗಿದೆ.

ವಿಧಾನಸಭಾ ಚುನಾವಣೆ ಪ್ರಚಾರ ವೇಳೆ ಅನ್ಸಾರಿ ರೆಡ್ಡಿ ವಿರುದ್ಧ ಮಾತನಾಡಿದ, ಫುಟ್‌ಬಾಲ್‌ (ಕೆಆರ್‌ಪಿಪಿ ಚಿಹ್ನೆ) ಹಿಂದೆ ಹೋಗಬೇಡಿ, ಅಲ್ಲಿಗೆ ಹೋದವರಿಗೆ ಭವಿಷ್ಯವಿಲ್ಲ, ಬರಿ ಸುಳ್ಳು ಹೇಳ್ತಾರೆ, ಮರಳು ಮಾಡ್ತಾರೆ ಎನ್ನುವ ವಿಡಿಯೊ ಜೊತೆಗೆ ಈಗ ರೆಡ್ಡಿ ಬಿಜೆಪಿ ಸೇರ್ಪಡೆಯಾದ ವಿಡಿಯೊ ಸೇರಿಸಿ ವೈರಲ್‌ ಮಾಡಲಾಗಿದೆ.

ರೆಡ್ಡಿ ಬಿಜೆಪಿ ಸೇರಿದ ನಂತರ ಬೆಂಬಲಿತ ಮುಸ್ಲಿಂ ಸಮುದಾಯದ ಹಲವು ಮುಖಂಡರು ಶಾಲುಗಳು ಧರಿಸಿದ್ದು, ಈ ಚಿತ್ರವನ್ನ ಸಾಮಾಜಿಕ ಜಾಲತಾಣದಲ್ಲಿ ಹಾಕಿ ‘ಯಪ್ಪೊ’ ಎಂದು ಶೀರ್ಷಿಕೆ ನೀಡಿದ್ದಾರೆ.

ಇಕ್ಬಾಲ್‌ ಅನ್ಸಾರಿ ಅಭಿಮಾನಿಗಳು ಸಾಮಾಜಿಕ ತಾಣದಲ್ಲಿ ಹಾಕಿರುವ ಸಂದೇಶ
ಇಕ್ಬಾಲ್‌ ಅನ್ಸಾರಿ ಅಭಿಮಾನಿಗಳು ಸಾಮಾಜಿಕ ತಾಣದಲ್ಲಿ ಹಾಕಿರುವ ಸಂದೇಶ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT