ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಧಿಕೃತ ರೆಸಾರ್ಟ್‌ ತೆರವಿಗೆ ಹಿಂದೂ ಜಾಗರಣ ವೇದಿಕೆ ಪ್ರಮುಖರ ಆಗ್ರಹ

Last Updated 22 ಅಕ್ಟೋಬರ್ 2021, 6:18 IST
ಅಕ್ಷರ ಗಾತ್ರ

ಗಂಗಾವತಿ: ಅಂಜನಾದ್ರಿ ಬೆಟ್ಟದ ಸುತ್ತಮುತ್ತ ನಿರ್ಮಾಣ ಆಗಿರುವ ಅನಧಿಕೃತ ರೆಸಾರ್ಟ್‌ಗಳನ್ನು ಕೂಡಲೆ ತೆರವುಗೊಳಿಸಬೇಕು ಎಂದು ಹಿಂದೂ ಜಾಗರಣ ವೇದಿಕೆ ಸದಸ್ಯ ಶ್ರೀಕಾಂತ ಹೊಸಕೇರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ತಹಶೀಲ್ದಾರ್‌ ಕಚೇರಿಯ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿ, ತಹಶೀಲ್ದಾರ್‌ ಅವರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಆನೆಗುಂದಿ ಸುತ್ತಮುತ್ತ ಈಗಾಗಲೇ ಸಾಕಷ್ಟು ಅಕ್ರಮ ರೆಸಾರ್ಟ್‌ಗಳು ತಲೆ ಎತ್ತಿವೆ. ನೆಪಕ್ಕೆ ಮಾತ್ರ ರೆಸಾರ್ಟ್ ಆದರೆ, ಒಳಗೆ ಅಕ್ರಮ ಚಟುವಟಿಕೆಗಳೇ ಹೆಚ್ಚಾಗಿ ನಡೆಯುತ್ತವೆ ಎಂದು ದೂರಿದರು.

ಆನೆಗೊಂದಿ ಸುತ್ತಮುತ್ತ ಅಂಜನಾದ್ರಿ ಪರ್ವತ, ಋಷಿಮುಖ, ಪಂಪಾ ಸರೋವರ, ದುರ್ಗಾದೇವಿ ದೇವಸ್ಥಾನ ಸೇರಿದಂತೆ ಇತರೆ ಐತಿಹಾಸಿಕ ಸ್ಥಳಗಳಿದ್ದು, ಇಲ್ಲಿನ ಸಂಸ್ಕೃತಿಗೆ ರೆಸಾರ್ಟ್‌ ಸಂಸ್ಕೃತಿಯಿಂದ ದಕ್ಕೆ ತರಲಾಗುತ್ತಿದೆ ಎಂದರು.

ಇಲ್ಲಿನ ಅಂಜನಾದ್ರಿ ಪರ್ವತಕ್ಕೆ ಆಗಮಿಸುವ ಭಕ್ತರಿಗೆ ಅನುಕೂಲ ಕಲ್ಪಿಸುವ ನೆಪದಲ್ಲಿ ಅನಧಿಕೃತ ರೆಸಾರ್ಟ್, ಹೋಟೆಲ್ ನಿರ್ಮಿಸಿ, ಅಕ್ರಮ ಚಟುವಟಿಕೆ ನಡೆಸುತ್ತಾರೆ. ಈ ಬಗ್ಗೆ ಸ್ಥಳೀಯ ಪೊಲೀಸ್‌ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ ಎಂದರು.

ಇದೀಗ ಕೃಷಿ ಭೂಮಿಗಳಲ್ಲಿ ಮತ್ತೆ ನಾಯಿ ಕೊಡೆಗಳಂತೆ ರೆಸಾರ್ಟ್‌ಗಳು ನಿರ್ಮಾಣ ಆಗಿವೆ. ಇವುಗಳ ತೆರವಿಗೆ ಜಿಲ್ಲಾಧಿಕಾರಿ ಆದೇಶ ನೀಡಲಾಗಿತ್ತು, ಆದರೆ ಕೆಲ ರಾಜಕೀಯ ವ್ಯಕ್ತಿಗಳ ಬೆಂಬಲದಿಂದ ತಡೆ ಹಿಡಿಯಲಾಗಿದೆ ಎಂದರು.

ಅಧಿಕಾರಿಗಳು ಹಿಂದೂ ಧರ್ಮದ ಭಾವನೆಗಳ ಹಾಗೂ ಹಿಂದೂ ದೇವಸ್ಥಾನಗಳ ಪಾವಿತ್ರ್ಯಕ್ಕೆ ದಕ್ಕೆ ತರುವ ರೆಸಾರ್ಟ್‌ಗಳನ್ನೂ ಕೂಡಲೆ ತೆರವುಗೊಳಿಸಬೇಕು. ಇಲ್ಲವಾದಲ್ಲಿ ಕಿಷ್ಕಿಂಧಾ ಉಳಿಸಿ ಹೋರಾಟ ಸಮಿತಿ ರಚಿಸಿ ಯುವಕರಿಂದ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್‌ ಯು. ನಾಗರಾಜ ಈಗಾಗಲೇ ಆನೆಗೊಂದಿ ಸುತ್ತಮುತ್ತ ಇರುವ ಎಲ್ಲ ರೆಸಾರ್ಟ್‌ಗಳ ಕುರಿತು ಸಮೀಕ್ಷೆ ನಡೆಸಿ, ಅಲ್ಲಿನ 52 ರೆಸಾರ್ಟ್‌ಗಳ ಕುರಿತು ಸಂಪೂರ್ಣ ಮಾಹಿತಿ ಪಡೆಯಲಾಗಿದೆ.

ಕಂದಾಯ, ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಬರುವ ಅಕ್ರಮ ರೆಸಾರ್ಟ್‌ಗಳನ್ನು ತೆರವುಗೊಳಿಸಿ, ಪಟ್ಟಾ ಜಮೀನಿನಲ್ಲಿ ನಿರ್ಮಾಣ ಆಗಿರುವ ರೆಸಾರ್ಟ್‌ಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಚಿಂತನೆ ನಡೆಸಲಾಗುತ್ತಿದೆ ಎಂದರು. ಅಯ್ಯನಗೌಡ ಹೇರೂರು, ವಿರೇಶ್ ಭಟ್ರಂಚಿನಾಳ, ಚನ್ನು ಹೂಗಾರ, ಆನಂದ ಸಂಗಾಪುರ, ಕುಮಾರೇಶ ಹೂಗಾರ, ವಿರೇಶ ಕೋಲ್ಕಾರ, ಮಂಜು ಗಾಂಧಿನಗರ, ಗಾಧಿಲಿಂಗಪ್ಪ ಗಾಂಧಿನಗರ, ಶಿವಕುಮಾರ್ ಹೆರೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT