ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಖಾನೆಗೆ ಎನ್‌ಒಸಿ ನೀಡಲು ಆಗ್ರಹ: ಸಂಸದ ಸಂಗಣ್ಣ ಕರಡಿಗೆ ಮನವಿ

ಕೋರಮಂಡಲ ಕಾರ್ಖಾನೆ ನೌಕರರ ಸಂಘದಿಂದ
Last Updated 16 ಜುಲೈ 2020, 16:43 IST
ಅಕ್ಷರ ಗಾತ್ರ

ಕೊಪ್ಪಳ: ತಾಲ್ಲೂಕಿನ ಹುಲಗಿ– ಮುನಿರಾಬಾದ್ ಬಳಿ ಇರುವ ಕೋರಮಂಡಲ ಇಂಟರ್‌ನ್ಯಾಷನಲ್‌ ಲಿಮಿಟೆಡ್‌ ಕಂಪೆನಿಯನ್ನು ಮುಂದುವರೆಸುವ ನಿಟ್ಟಿನಲ್ಲಿ ಅಸಹಕಾರ ನೀತಿ ಅನುಸರಿಸುತ್ತಿರುವ ಗ್ರಾಮ ಪಂಚಾಯಿತಿಗೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿ ಕಂಪೆನಿಯ ಕಾರ್ಖಾನೆಯ ನೌಕರರ ಸಂಘ ಪ್ರತಿನಿಧಿಗಳು ಸಂಸದ ಸಂಗಣ್ಣ ಕರಡಿ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.

ಈ ಕಾರ್ಖಾನೆ ಕಳೆದ ಎರಡೂವರೆ ದಶಕಗಳಿಂದಲೂ ಕಾರ್ಯನಿರ್ವಹಿಸುತ್ತಿದೆ. ಆದರೆ ಕೆಲವೇ ವ್ಯಕ್ತಿಗಳ ಕುಮ್ಮಕ್ಕಿನಿಂದ ಗ್ರಾಮ ಪಂಚಾಯಿತಿ ಕಾರ್ಖಾನೆಗೆ ನಿರಪೇಕ್ಷಣಾ ಪತ್ರ (ಎನ್‌ಒಸಿ) ನೀಡುತ್ತಿಲ್ಲ. ಕಾರ್ಖಾನೆಯಲ್ಲಿ ಈ ಭಾಗದ ಸುಮಾರು ಎರಡು ನೂರು ಜನ ಕಾರ್ಮಿಕರಿಗೆ ಉದ್ಯೋಗ ದೊರಕಿದ್ದು, ಒಂದೊಮ್ಮೆ ಅದು ಕೆಲಸ ಸ್ಥಗಿತಗೊಳಿಸಿದರೆ ನೂರಾರು ಜನ ಕಾರ್ಮಿಕರು ಬೀದಿಪಾಲಾಗಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಅನೇಕ ವರ್ಷಗಳಿಂದಲೂ ಪರಿಸರ ಮಾಲಿನ್ಯ, ಜನರ ಅನಾರೋಗ್ಯ ಎಂಬ ಇತ್ಯಾದಿ ಸುಳ್ಳು ಕಾರಣಗಳಿಂದ ಮುಂದೂಡುತ್ತಿರುವ ಕೆಲ ವ್ಯಕ್ತಿಗಳು ಕಾರ್ಖಾನೆಯ ಕಾರ್ಯನಿರ್ವಹಣೆಗೆ ಪರೋಕ್ಷವಾಗಿ ಅಡ್ಡಿಪಡಿಸುತ್ತಿದ್ದಾರೆ. ಆದರೆ ಅವರ ಆರೋಪಕ್ಕೆ ಯಾವುದೇ ರೀತಿ ವೈಜ್ಞಾನಿಕ ಪುರಾವೆಗಳು ಇಲ್ಲ. ಕಾರ್ಖಾನೆಯಲ್ಲಿ ದುಡಿಯುತ್ತಿರುವ ಕಾರ್ಮಿಕರಲ್ಲಿಯೂ ಆರೋಗ್ಯ ಸಮಸ್ಯೆಯೂ ಇಲ್ಲ. ಈ ಕಾರಣಕ್ಕೆ ಗ್ರಾಮದ ಅನೇಕ ಹಿರಿಯರು ಕಾರ್ಖಾನೆ ಮುಚ್ಚಬಾರದು ಎಂದು ಗ್ರಾಮದ ಹಿರಿಯರೇ ಹೇಳುತ್ತಿದ್ದಾರೆ. ಇಷ್ಟಾದರೂ ಗ್ರಾಮ ಪಂಚಾಯಿತಿ ನಿರಪೇಕ್ಷಣಾ ಪ್ರಮಾಣಪತ್ರ ನೀಡದೆ ಸತಾಯಿಸುತ್ತಿರುವುದರಿಂದ ಕಾರ್ಖಾನೆಯ ಕಾರ್ಮಿಕರಲ್ಲಿ ಮತ್ತು ಅವರ ಕುಟುಂಬದವರಲ್ಲಿ ಆತಂಕ ಮನೆ ಮಾಡಿದೆ ಎಂದು ಅಳಲು ತೋಡಿಕೊಂಡರು.

ಕೋವಿಡ್‌ ಕಾರಣಕ್ಕೆ ಎಲ್ಲ ಕಡೆ ಜನ ಕೆಲಸ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇಂಥ ಸಂದರ್ಭದಲ್ಲಿ ಕೋರಮಂಡಲ ಕಾರ್ಖಾನೆಯೂ ಮುಚ್ಚಿದರೆ ಕಾರ್ಮಿಕರ ಕುಟುಂಬಗಳು ಅಕ್ಷರಶಃ ಬೀದಿಗೆ ಬರುತ್ತವೆ. ಹಾಗಾಗಿ ಈ ಬಗ್ಗೆ ಗಮನಹರಿಸಿ ಕಾರ್ಮಿಕರ ಭವಿಷ್ಯದ ಬದುಕಿನ ಹಿತದೃಷ್ಟಿಯಿಂದ ಮಧ್ಯಸ್ಥಿಕೆ ವಹಿಸಿ, ಗ್ರಾಮ ಪಂಚಾಯಿತಿ ಎನ್‌ಒಸಿ ನೀಡುವ ನಿಟ್ಟಿನಲ್ಲಿ ಮುತುವರ್ಜಿ ವಹಿಸಬೇಕು ಎಂದು ಸಂಘದ ಪ್ರತಿನಿಧಿಗಳು ಮನವಿ ಮಾಡಿದರು.

ಮನವಿ ಸ್ವೀಕರಿಸಿದ ಸಂಸದ ಸಂಗಣ್ಣ, ಈ ವಿಷಯದ ಬಗ್ಗೆ ಸಂಬಂಧಿಸಿದವರೊಂದಿಗೆ ಚರ್ಚಿಸಿ, ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ನೌಕರರ ಸಂಘದ ಅಧ್ಯಕ್ಷ ಎಂ.ಮುರುಘನ್, ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ ಸೇರಿ ಅನೇಕ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT