ಯಲಬುರ್ಗಾ: ಸ್ಥಳೀಯ ಸಂಸ್ಥಾನ ಹಿರೇಮಠದ ಪೀಠಾಧಿಕಾರಿ ಸಿದ್ದರಾಮೇಶ್ವರ ಸ್ವಾಮೀಜಿ ವರ್ತನೆ ವಿರುದ್ಧ ಭಕ್ತರು ಆಕ್ರೋಶ ಮುಂದುವರೆದಿದ್ದು, ಭಕ್ತರು ಹೊಸ ಟ್ರಸ್ಟ್ ರಚಿಸಿಕೊಂಡು, ಪದಾಧಿಕಾರಿಗಳ ಆಯ್ಕೆಯನ್ನು ಮಾಡಿದ್ದಾರೆ.
ಭಕ್ತರು ದೇಣಿಗೆ ನೀಡಿದ ಹಣದ ದುರ್ಬಳಕೆ, ಭಕ್ತರಿಗೆ ಆರ್ಥಿಕ ಕಿರುಕುಳ, ಪೂರ್ವಾಶ್ರಮದ ಕುಟುಂಬದ ಸದಸ್ಯರ ಹಸ್ತಕ್ಷೇಪ, ಮಠದ ಆಸ್ತಿ ಪರಾಭಾರೆ ಹೀಗೆ ಮಠದಲ್ಲಿ ನಡೆದಿದೆ ಎನ್ನಲಾದ ಕೆಲ ಅಕ್ರಮಗಳಲ್ಲಿ ಶ್ರೀಗಳ ಕೈವಾಡವಿದೆ ಎಂದು ಭಕ್ತರು ಆರೋಪಿಸಿದ್ದಾರೆ.
ಈ ಬಗ್ಗೆ ಭಕ್ತರ ಎದುರಲ್ಲಿಯೇ ಬಹಿರಂಗವಾಗಿ ಶ್ರೀಗಳು ಚರ್ಚೆಗೆ ಮುಂದಾಗಬೇಕು ಎಂದು ಪಟ್ಟು ಹಿಡಿದಿದ್ದರೂ, ಸ್ವಾಮೀಜಿ ಮಾತ್ರ ಸ್ಥಳೀಯ ಭಕ್ತರ ತುರ್ತು ಸಭೆಗೆ ಹಾಜರಾಗಲು ನಿರಾಕರಿಸಿದ್ದಾರೆ.
ಭಕ್ತರ ನಿರ್ಣಯ: ಮಠದ ಒಟ್ಟು ಆಸ್ತಿ ಬಹಿರಂಗಪಡಿಸುವುದು, ಕೆಲಸದಿಂದ ತೆಗೆದುಹಾಕಿದ್ದ ಸಿದ್ಧಯ್ಯ ಗಡ್ಡಿಮಠ ಅವರನ್ನು ಮರು ನೇಮಕ ಮಾಡಿಕೊಳ್ಳುವುದು, ಮಠದ ಆಡಳಿತ ನಿರ್ವಹಣೆಗೆ ಕಾನೂನುಬದ್ಧ ಹೊಸ ಟ್ರಸ್ಟ್ ರಚಿಸಿ ಜವಾಬ್ದಾರಿ ವಹಿಸುವುದು, ಮಠದ ಯಾವುದೇ ವ್ಯವಹಾರದಲ್ಲಿ ಕುಟುಂಬದ ಸದಸ್ಯರು ಭಾಗಿಯಾಗದಂತೆ ನೋಡಿಕೊಳ್ಳುವುದು ಸೇರಿ ವಿವಿಧ ಬೇಡಿಕೆಗಳಿಗೆ ಬದ್ಧರಾಗಿ ಶ್ರೀಗಳು ನಡೆದುಕೊಳ್ಳಬೇಕು. ಇಲ್ಲದಿದ್ದರೆ ಪೀಠ ತ್ಯಾಗ ಮಾಡಬೇಕು ಎಂಬ ನಿರ್ಣಯಗಳನ್ನು ಕೈಗೊಂಡು ಭಕ್ತರು ಸಿಪಿಐ ಮೌನೇಶ್ವರ ಮಾಲಿಪಾಟೀಲ ಅವರ ಮೂಲಕ ಶ್ರೀಗಳಿಗೆ ತಲುಪಿಸಿದ್ದಾರೆ.
ಭದ್ರತೆ:
ಕಳೆದ ಎರಡು ದಿನಗಳಿಂದ ಸ್ವಾಮೀಜಿ ಹಾಗೂ ಭಕ್ತರ ನಡುವೆ ಏರ್ಪಟ್ಟಿರುವ ಭಿನ್ನಾಭಿಪ್ರಾಯ ಹಾಗೂ ತುರ್ತು ಬೆಳವಣಿಗೆಯ ಹಿನ್ನೆಲೆಯಲ್ಲಿ ಶ್ರೀಗಳು ಮತ್ತು ಮಠಕ್ಕೆ ಪೊಲೀಸರು ಸೂಕ್ತ ಭದ್ರತೆ ಒದಗಿಸಿದ್ದಾರೆ. ಮಠದ ಆವರಣದಲ್ಲಿ ಡಿ.ಆರ್ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಪಿಎಸ್‍ಐ ವಿಜಯಪ್ರತಾಪ ತಿಳಿಸಿದ್ದಾರೆ.
ನೂತನ ಟ್ರಸ್ಟ್ ರಚನೆ: ಸಂಸ್ಥಾನ ಹಿರೇಮಠದ ಆಡಳಿತ ನಿರ್ವಹಣೆಗಾಗಿ ಭಕ್ತರು ಒಮ್ಮತದಿಂದ ಸಿದ್ದರಾಮೇಶ್ವರ ಸಂಸ್ಥಾನ ಹಿರೇಮಠ ಟ್ರಸ್ಟ್ ರಚಿಸಿದ್ದಾರೆ. ಅಧ್ಯಕ್ಷರಾಗಿ ವೀರನಗೌಡ ಬನ್ನಪ್ಪಗೌಡ್ರ, ಗೌರವಾಧ್ಯಕ್ಷರನ್ನಾಗಿ ಅಂದಯ್ಯ ಕಳ್ಳಿಮಠ, ಪ್ರಧಾನ ಕಾರ್ಯದರ್ಶಿಗಳಾಗಿ ದಾನನಗೌಡ ತೊಂಡಿಹಾಳ, ಉಪಾಧ್ಯಕ್ಷರಾಗಿ ಸಿದ್ದಪ್ಪ ದಂಡಿನ, ಶಿವಪ್ಪ ಶಾಸ್ತ್ರಿ, ಕುಬೇಗೌಡ ಮಾಲಿಪಾಟೀಲ್, ಶರಣಪ್ಪ ಅರಕೇರಿ, ಉಪಕಾರ್ಯದರ್ಶಿಯಾಗಿ ಸುರೇಶಗೌಡ ಶಿವನಗೌಡ್ರ, ಸಂಘಟನಾ ಕಾರ್ಯದರ್ಶಿಯಾಗಿ ಸಂಗಪ್ಪ ಕೊಪ್ಪಳ, ಮಲ್ಲಿಕಾರ್ಜುನ ಪೊಲೀಸ್‍ಪಾಟೀಲ, ಸಹಕಾರ್ಯದರ್ಶಿಯಾಗಿ ಬಸವರಾಜ ಅಧಿಕಾರಿ, ವಿಜಯಕುಮಾರ ಕರಂಡಿ, ರುದ್ರಮುನಿ ಹಿರೇಕುರುಬರ, ಕಳಕಪ್ಪ ಹೂಗಾರ, ಖಜಾಂಚಿಯಾಗಿ ಸಿದ್ರಾಮೇಶ ಬೇಲೇರಿ, ಸಹ ಖಜಾಂಚಿಯಾಗಿ ಶರಣಪ್ಪ ಓಜನಹಳ್ಳಿ, ಕಾನೂನು ಸಲಹೆಗಾರರಾಗಿ ಪ್ರಕಾಶ ಬೇಲೇರಿ, ಅಕ್ಕಮಹಾದೇವಿ ಪಾಟೀಲ, ಪ್ರಭುರಾಜ ಕಲಬುರ್ಗಿ ಹಾಗೂ 20ಕ್ಕೂ ಅಧಿಕ ಸಂಖ್ಯೆಯಲ್ಲಿ ಸದಸ್ಯರನ್ನಾಗಿ ನೇಮಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.