ಶನಿವಾರ, ಮಾರ್ಚ್ 25, 2023
28 °C
ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ

ಪರಿಶಿಷ್ಟ ಯುವಕನ ಕೊಲೆ: ಕ್ರಮಕ್ಕೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ‘ಕಾರಟಗಿ ತಾಲ್ಲೂಕಿನ ಬರಗೂರು ಗ್ರಾಮದಲ್ಲಿ ಅನ್ಯಜಾತಿಯ ಯುವತಿಯನ್ನು ಪ್ರೀತಿಸಿದ ಕಾರಣಕ್ಕೆ ಪರಿಶಿಷ್ಟ ಜಾತಿಗೆ ಸೇರಿದ ಯುವಕನನ್ನು ಕೊಲೆ ಮಾಡಲಾಗಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಬರಗೂರು ಗ್ರಾಮದ ಪರಿಶಿಷ್ಟ ಯುವಕ ದಾನಪ್ಪನ ಕೊಲೆಗೆ ಕಾರಣರಾದ ಎಲ್ಲ ದುಷ್ಕರ್ಮಿಗಳನ್ನು ಬಂಧಿಸಬೇಕು. ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಆಗ್ರಹಿಸಿದರು. ಸಂಘಟನೆಯ ನೂರಾರು ಕಾರ್ಯಕರ್ತ
ರು ಮೆರವಣಿಗೆ ಮೂಲಕ ಬಂದು ‘ಅನ್ಯಜಾತಿಯ ಹುಡುಗಿಯನ್ನು ಪ್ರೀತಿಸುತ್ತಿದ್ದ ಎನ್ನುವ ಕಾರಣಕ್ಕೆ ದಾನಪ್ಪ ಅವರನ್ನು ಕೊಲೆ ಮಾಡಲಾಗಿದೆ. ಅವರ ಕುಟುಂಬ ಯಾವ ತಂಟೆ, ತಕರಾರುಗಳಿಲ್ಲದೆ ಜೀವನ ಸಾಗಿಸುತ್ತಿದ್ದುದ್ದು ಎಲ್ಲರಿಗೂ ತಿಳಿದ ವಿಷಯ. ಜಾತಿ ದೌರ್ಜನ್ಯಕ್ಕೆ ಬಲಿಯಾದ ಈ ಯುವಕನಿಗೆ ನ್ಯಾಯ ಒದಗಿಸಬೇಕು. ಕೊಲೆ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕು. ಅವರ ಕುಟುಂಬಕ್ಕೆ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.

ಯಲಬುರ್ಗಾ ತಾಲ್ಲೂಕಿನ ಹೊಸಳ್ಳಿ ಗ್ರಾಮದಲ್ಲಿ ಕ್ಷೌರ ಮಾಡಲು ನಿರಾಕರಿಸಿ ನಿಂದನೆ ಮಾಡಿದ ಕಾರಣ ಇಬ್ಬರು ಪರಿಶಿಷ್ಟ ಯುವಕರು ವಿಷ ಸೇವಿಸಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಗಂಗಾವತಿ ಗ್ರಾಮೀಣ ಠಾಣೆ ಸಿಪಿಐ ಉದಯ ರವಿ ಸಂಘಟನೆ ಮುಖಂಡರಿಗೆ ಬೆದರಿಕೆ ಹಾಕಿದ್ದಾರೆ. ಈ ಎಲ್ಲದರ ಕುರಿತು ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಪೂಜಾರ, ರಾಜ್ಯ ಘಟಕದ ಅಧ್ಯಕ್ಷ ಪರಶುರಾಮ್ ನೀಲನಾಯಕ್ ಅವರು ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಪ್ರಗತಿಪರ ಸಂಘಟನೆಯ ಮುಖಂಡರಾದ ವಿಠ್ಠಪ್ಪ ಗೋರಂಟ್ಲಿ, ಬಸವರಾಜ ಶೀಲವಂತರ, ಮಹಾಂತೇಶ ಕೊತಬಾಳ ಮಾತನಾಡಿದರು. 

ಸಂಘಟನೆಯ ಪದಾಧಿಕಾರಿಗಳಾದ ಗ್ಯಾನಪ್ಪ ಬಡಿಗೇರ, ರೇಣುಕಮ್ಮ ಹಾವುಲ್, ಹನುಮಂತಪ್ಪ ಮ್ಯಾಗಳಮನಿ, ಯಲ್ಲಪ್ಪ ಹಳೆಮನೆ, ನಿಂಗಜ್ಜ ಶಹಾಪುರ, ದ್ಯಾಮಣ್ಣ ಚಾಮಲಾಪುರ, ಡಿ.ಎಚ್.ಪೂಜಾರ ಹಾಗೂ ಗಾಳೆಪ್ಪ ಕೂಕನಪಲ್ಲಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು