ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲ ಸೌಲಭ್ಯ ವಂಚಿತ ಕನಕಗಿರಿ; ದೊರಕದ ನೀರಾವರಿ, ರೈಲು ಸೌಲಭ್ಯ

ಹೆಸರಿಗಷ್ಟೇ ಐತಿಹಾಸಿಕ ತಾಣ, ಸೌಲಭ್ಯ ಗೌಣ
Last Updated 18 ಏಪ್ರಿಲ್ 2022, 5:53 IST
ಅಕ್ಷರ ಗಾತ್ರ

ಕನಕಗಿರಿ: ಐತಿಹಾಸಿಕ ಹಾಗೂ ಧಾರ್ಮಿಕ ಕ್ಷೇತ್ರ ಕನಕಗಿರಿಯು ನೀರಾವರಿ, ರೈಲು, ತಾಲ್ಲೂಕು ಕಚೇರಿಗಳು ಸೇರಿದಂತೆ ಇತರೆ ಸೌಲಭ್ಯಗಳಿಂದ ವಂಚಿತವಾಗಿದೆ. 1978ರಿಂದ ವಿಧಾನಸಭಾ ಕ್ಷೇತ್ರವಾಗಿದ್ದು ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದೆ.

ದೇಗುಲಗಳ ನಗರ, ಎರಡನೇಯ ತಿರುಪತಿ ಎಂದು ಕರೆಸಿಕೊಂಡರೂ ಭಕ್ತರಿಗೆ ಹೇಳಿಕೊಳ್ಳುವಷ್ಟು ಸೌಲಭ್ಯಗಳು ಇಲ್ಲಿ ಸಿಗುವುದಿಲ್ಲ ಎಂದು ಸ್ಥಳೀಯರು ದೂರುತ್ತಾರೆ. ಐತಿಹಾಸಿಕ ಕನಕಾಚಲಪತಿ ದೇವಸ್ಥಾನ, ಪುಷ್ಕರಣಿ, ವೆಂಕಟಪತಿಬಾವಿ, ತೊಂಡೆತೇವರಪ್ಪ ಸೇರಿದಂತೆ ಅನೇಕ ದೇಗುಲ, ಸ್ಮಾರಕಗಳು ಅವಸಾನದ ಅಂಚಿನಲ್ಲಿವೆ.

ಕನಕಾಚಲಪತಿ ದೇವಸ್ಥಾನ ‘ಎ’ ದರ್ಜೆಯ ಸ್ಥಾನಮಾನ ಹೊಂದಿದ್ದರೂ ದಾಸೋಹ ಭವನ, ವಸತಿ ಗೃಹ, ಕಲ್ಯಾಣ ಮಂಟಪ, ಸುಸಜ್ಜಿತ ಸ್ಥಾನ ಗೃಹ ಮತ್ತು ಶೌಚಾಲಯ ಸೌಲಭ್ಯಗಳು ಇಲ್ಲವಾಗಿವೆ.

ಸತತ ಹೋರಾಟದ ಫಲವಾಗಿ ಬಹು ವರ್ಷಗಳ ತಾಲ್ಲೂಕು ರಚನೆಯ ಕನಸು 2018ರಲ್ಲಿ ಈಡೇರಿದೆ. ಆದರೆ ಇಲ್ಲಿವರೆಗೆ ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ, ಖಜಾನೆ ಕಚೇರಿಗಳು ಮಾತ್ರ ತೆರೆಯಲಾಗಿದ್ದು, ಅವು ಸಹ ಬಾಡಿಗೆ ಕಟ್ಟಡದಲ್ಲಿವೆ.

ಕ್ಷೇತ್ರ ಶಿಕ್ಷಣಾಧಿಕಾರಿ, ಉಪ ನೋಂದಣಿ, ಕೃಷಿ, ತೋಟಗಾರಿಕೆ, ಲೋಕೋಪಯೋಗಿ, ಜಿಲ್ಲಾ ಪಂಚಾಯಿತಿ ಒಳಗೊಂಡಂತೆ ಉಳಿದ ಕಚೇರಿಗಳ ಸ್ಥಾಪನೆ ಯಾವಾಗ ಎಂದು ಗ್ರಾ.ಪಂ. ಮಾಜಿ ಸದಸ್ಯ ಕನಕರೆಡ್ಡಿ ಕೆರಿ ಪ್ರಶ್ನಿಸುತ್ತಾರೆ.

ನೀರಾವರಿ ವಂಚಿತ ತಾಲ್ಲೂಕು: ಹತ್ತಿರದಲ್ಲಿ ತುಂಗಭದ್ರಾ ಎಡದಂಡೆ (ಕೇಸರಹಟ್ಟಿ ಕಾಲುವೆ) ಕಾಲುವೆ ಹರಿದರೂ ಈ ತಾಲ್ಲೂಕು ನೀರಾವರಿ ಪ್ರದೇಶವಾಗಿಲ್ಲ. ಸಂಪೂರ್ಣವಾಗಿ ಒಣಭೂಮಿ ಹಾಗೂ ಮಳೆಯಾಧರಿತ ಪ್ರದೇಶದಿಂದ ಕೂಡಿದೆ. ಕೃಷ್ಣಾ ಬಿ ಸ್ಕೀಂ ಯೋಜನೆಯ ಲಾಭ ಈ ಭಾಗದ ರೈತರಿಗೆ ಸಿಕ್ಕಿಲ್ಲ.
ಮಳೆಯೇ ರೈತಾಪಿ ವರ್ಗದವರ ಜೀವಾಳವಾಗಿದೆ. ಪಂಪ್‌ಸೆಟ್ ನೆಚ್ಚಿಕೊಂಡಿದ್ದು ಅಂತರ್ಜಲ ಮಟ್ಟದ ಕೊರತೆಯಿಂದ ಬೆಳೆ ನಷ್ಟ ಅನುಭವಿಸುತ್ತಿದ್ದಾರೆ ಎಂದು ಹಿರೇಖೇಡ ಗ್ರಾಮದ ಯುವ ಮುಂದಾಳು ಬಾರಿಮರ್ದಪ್ಪ ತಿಳಿಸಿದರು.

ರೈಲು ಸೇವೆ ಇಲ್ಲ: ರಾಜಕಾರಣಿಗಳ ದೂರದೃಷ್ಟಿಯಿಂದ ಈ ಭಾಗ ರೈಲು ಯೋಜನೆಗಳಿಂದಲೂ ವಂಚಿತವಾಗಿದೆ. ಬಹು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದಗದಗ-ವಾಡಿ ಹಾಗೂ ಮುನಿರಾಬಾದ್ - ಮೆಹಬೂಬನಗರ ರೈಲು ಯೋಜನೆ ಅನುಷ್ಠಾನಗೊಂಡರೂ ಪಕ್ಕದ ತಾವರಗೇರಾ, ಗಂಗಾವತಿ ತಾಲ್ಲೂಕಿಗೆ ಲಾಭವಾಗಿದೆ ವಿನಾಃ ಈ ತಾಲ್ಲೂಕಿನ ಒಂದು ಹಳ್ಳಿಗೂ ರೈಲು ಹಳಿ ಹಾದು ಹೋಗಿಲ್ಲ ಎಂದು ಹಿರಿಯ ಮುಖಂಡ ದುರ್ಗಾದಾಸ ಯಾದವ ತಿಳಿಸುತ್ತಾರೆ. ತಾಲ್ಲೂಕಿನ ಸರ್ವಾಂಗೀಣ ಪ್ರಗತಿಗೆ ನೀರಾವರಿ ಹಾಗೂ ರೈಲು ಯೋಜನೆ ಅನುಷ್ಠಾನದ ಅವಶ್ಯಕತೆ ಇದೆ ಎಂದು ಪಾಮಣ್ಣ ಅರಳಿಗನೂರು, ಹುಲಿಹೈದರದ ಮುಖಂಡ ಗೋಸ್ಲೆಪ್ಪ ಗದ್ದಿ, ನವಲಿಯ ಯುವ ಮುಂದಾಳು ವಿರುಪಣ್ಣ ಕಲ್ಲೂರುತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT