ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: 305 ಶಾಲೆಗಳಿಗೆ ಉತ್ತಮ ಫಲಿತಾಂಶ

ಎಸ್ಸೆಸ್ಸೆಲ್ಸಿ ಪರೀಕ್ಷೆ: ಶೇ 100ಕ್ಕೆ 100 ಪಡೆದವರು ಜಿಲ್ಲೆಯಲ್ಲಿ ಒಬ್ಬರೂ ಇಲ್ಲ
Last Updated 10 ಆಗಸ್ಟ್ 2021, 4:01 IST
ಅಕ್ಷರ ಗಾತ್ರ

ಕೊಪ್ಪಳ: ಹತ್ತನೇ ತರಗತಿ ಪರೀಕ್ಷಾ ಫಲಿತಾಂಶ ಸೋಮವಾರ ಹೊರಬಿದ್ದಿದ್ದು, ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಎ ಗ್ರೇಡ್ ಹೆಚ್ಚು ಪಡೆದಿರುವುದು ಸಮಾಧಾನದ ಸಂಗತಿಯಾದರೆ, ಶೇ 100ಕ್ಕೆ 100 ಅಂಕ ಪಡೆದು ಸಾಧನೆ ಮಾಡಿದ ವಿದ್ಯಾರ್ಥಿಗಳು ಇಲ್ಲ.

ಕೋವಿಡ್ ಆತಂಕದ ಮಧ್ಯೆಯೂ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ 10ನೇ ತರಗತಿ ಪರೀಕ್ಷೆ ನಡೆಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಿಸಿದ ಫಲಿತಾಂಶದಲ್ಲಿ ಪರೀಕ್ಷೆಗೆ ಹಾಜರಾದ 20,605 ವಿದ್ಯಾರ್ಥಿಗಳೆಲ್ಲರೂ ಉತ್ತೀರ್ಣರಾಗಿದ್ದಾರೆ.

ಕೋವಿಡ್ ಉಲ್ಭಣದಿಂದಾಗಿ ರಾಜ್ಯ ಶಿಕ್ಷಣ ಇಲಾಖೆಯು ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ನಡೆಸಬೇಕೋ? ಬೇಡವೋ ಎನ್ನುವ ಗೊಂದಲದಲ್ಲಿಯೇ ಮುಳುಗಿತ್ತು.

ಕೊನೆಗೂ ವಿದ್ಯಾರ್ಥಿಗಳ-ಪಾಲಕರಿಂದ ಆಂತರಿಕವಾಗಿ ಅಭಿಪ್ರಾಯ ಸಂಗ್ರಹಿಸಿ ಕಳೆದ ಜುಲೈ ತಿಂಗಳಲ್ಲಷ್ಟೇ ಎರಡು ದಿನ ಪರೀಕ್ಷೆ ನಡೆಸಿತ್ತು. ಕೋವಿಡ್ ಕುರಿತಂತೆಯೂ ಎಚ್ಚರಿಕೆ ವಹಿಸಿ ನಿರಾಳವಾಗಿ ಪರೀಕ್ಷಾ ಪ್ರಕ್ರಿಯೆ ಪೂರ್ಣಗೊಳಿಸಿತು.

ಜಿಲ್ಲೆಯಲ್ಲಿ ಸರ್ಕಾರಿ, ಖಾಸಗಿ ಶಾಲೆಗಳಲ್ಲಿ 20605 ವಿದ್ಯಾರ್ಥಿಗಳು ಆನ್‌ಲೈನ್ ಕ್ಲಾಸ್ ಕೇಳಿ ಪರೀಕ್ಷೆಗೆ ನೊಂದಾಯಿಸಿಕೊಂಡಿದ್ದರು. ಶಿಕ್ಷಣ ಇಲಾಖೆಯು ಮೊದಲೇ ಪರೀಕ್ಷೆಯಲ್ಲಿ ಅನುತ್ತೀರ್ಣ ಇರುವುದಿಲ್ಲ ಎನ್ನುವ ಅಂಶವನ್ನೂ ಸ್ಪಷ್ಟಪಡಿಸಿತ್ತು.

ಜಿಲ್ಲೆಯಲ್ಲಿ ಎ+ ಗ್ರೇಡ್‌ನಲ್ಲಿ ಅಂದರೆ ಶೇ.90 ರಿಂದ 100 ರ ಒಳಗೆ 4522 ವಿದ್ಯಾರ್ಥಿಗಳು ಉತ್ತೀರ್ಣರಾದರೆ ಎ ಗ್ರೇಡ್‌ನಲ್ಲಿ ಅಂದರೆ ಶೇ.80 ರಿಂದ 90ರ ಫಲಿತಾಂಶದ ಒಳಗೆ 8212 ವಿದ್ಯಾರ್ಥಿಗಳು ಹಾಗೂ ಬಿ ಗ್ರೇಡ್ ನಲ್ಲಿ ಶೇ.60 ರಿಂದ 80ರ ಒಳಗೆ 6812 ವಿದ್ಯಾರ್ಥಿಗಳು, ಸಿ ಗ್ರೇಡ್‌ನಲ್ಲಿ ಶೇ.35 ರಿಂದ 60ರಷ್ಟು 1059 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಶೇ 100 ಫಲಿತಾಂಶ: ಜಿಲ್ಲೆಯಲ್ಲಿ ಒಟ್ಟಾರೆ 305 ಸರ್ಕಾರಿ, ಖಾಸಗಿ ಪ್ರೌಢ ಶಾಲೆಗಳಿದ್ದು, ಈ ಪೈಕಿ 186 ಸರ್ಕಾರಿ ಶಾಲೆಗಳು, 26 ಅನುದಾನಿತ ಶಾಲೆಗಳು, 93 ಅನುದಾನ ರಹಿತ ಶಾಲೆಗಳು ಶೇ.100 ರಷ್ಟು ಫಲಿತಾಂಶವನ್ನು ಪಡೆದಿವೆ.

ಅಂಗವಿಕಲ 28 ವಿದ್ಯಾರ್ಥಿಗಳು, ಕೊರೊನಾ ಸೋಂಕಿತ ಒಬ್ಬ ವಿದ್ಯಾರ್ಥಿ 14 ಅಂಗವಿಕಲ ಬಾಲಕಿಯರು ಉತ್ತೀರ್ಣರಾಗಿದ್ದಾರೆ.

ಕನ್ನಡ ಮಾಧ್ಯಮದಲ್ಲಿ ಬಾಲಕರು 8880, ಬಾಲಕಿಯರು, 7662 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಾಯಿಸಿಕೊಂಡಿದ್ದರು. ಅವರೆಲ್ಲರೂ ಉತ್ತೀರ್ಣರಾಗಿದ್ದಾರೆ. ಇನ್ನೂ ಇಂಗ್ಲಿಷ್‌ ಮಾಧ್ಯಮದಲ್ಲಿ ಬಾಲಕರು-1880, ಬಾಲಕಿಯರು 1860 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಡಿಡಿಪಿಐ ಕಚೇರಿ ಸಿಬ್ಬಂದಿ ತಿಳಿಸಿದರು. ಕುಕನೂರು ಪಟ್ಟಣದ ವಿದ್ಯಾಶ್ರೀ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಪುಟ್ಟರಾಜ ಚಂದ್ರಶೇಖರಯ್ಯ ಬಿಡನಾಳಮಠ 625/609 ಅಂಕ ಪಡೆದಿದ್ದಾನೆ. ಈ ಮೂಲಕ ಜಿಲ್ಲೆಯಲ್ಲಿಯೇ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT