ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಾದರಿ ನೀತಿ ಸಂಹಿತೆ ಅನುಷ್ಠಾನಕ್ಕೆ ಕಟ್ಟುನಿಟ್ಟಿನ ಕ್ರಮ

ಲೋಕಸಭಾ ಚುನಾವಣೆ: ರಾಜಕೀಯ ಮುಖಂಡರ ಜೊತೆ ಸಭೆ
Published 19 ಮಾರ್ಚ್ 2024, 4:26 IST
Last Updated 19 ಮಾರ್ಚ್ 2024, 4:26 IST
ಅಕ್ಷರ ಗಾತ್ರ

ಗಂಗಾವತಿ: ಕೊಪ್ಪಳ ಲೋಕಸಭಾ ಚುನಾವಣೆ ನಿಮಿತ್ತ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಜಿಲ್ಲಾ ಚುನಾವಣಾ ವಿಭಾಗ ಸಕಲ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದ್ದು, ಎರಡನೇ ಹಂತದಲ್ಲಿ ಪಾರದರ್ಶಕ ಮತದಾನಕ್ಕಾಗಿ ಕಟ್ಟುನಿಟ್ಟಿನ ಕ್ರಮವಹಿಸಲಾಗುವುದು ಎಂದು ಸಹಾಯಕ ಚುನಾವಣಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಹೇಳಿದರು.

ನಗರದ ತಹಶೀಲ್ದಾರ್‌ ಕಚೇರಿಯಲ್ಲಿ ಸೋಮವಾರ ಲೋಕಸಭಾ ಚುನಾವಣೆ ಪ್ರಯುಕ್ತ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಏ.12ರಂದು ಅಧಿಸೂಚನೆ ಪ್ರಕಟಗೊಳ್ಳಲಿದ್ದು, ಏ.19ರ ಒಳಗಾಗಿ ನಾಮಪತ್ರಗಳನ್ನು ಸಲ್ಲಿಸಬೇಕು. ಏ.20ಕ್ಕೆ ನಾಮಪತ್ರಗಳ ಪರಿಶೀಲನೆ, ನಾಮಪತ್ರ ಹಿಂಪಡೆಯುವಿಕೆಗೆ ಏ.22 ಕೊನೆಯ ದಿನವಾಗಿದೆ. ಮೇ 7ಕ್ಕೆ ಮತದಾನ ಮತ್ತು ಜೂನ್ 4ಕ್ಕೆ ಮತಗಳ ಎಣಿಕೆ ಕಾರ್ಯ ಜರುಗಲಿದೆ ಎಂದರು.

ಗಂಗಾವತಿ ಕ್ಷೇತ್ರದಲ್ಲಿ ಒಟ್ಟು 235 ಮತಗಟ್ಟೆಗಳಿದ್ದು, ಇದರಲ್ಲಿ 1,02,232 ಪುರುಷರು, 1,05,389 ಮಹಿಳೆಯರು, 57 ಲಿಂಗತ್ವ ಅಲ್ಪಸಂಖ್ಯಾತರು ಸೇರಿ ಒಟ್ಟು 2,07,635 ಮತದಾರರಿದ್ದಾರೆ. ಇದರಲ್ಲಿ 5,673 ಯುವ ಮತದಾರರು(ಮೊದಲ ಬಾರಿ ಮತದಾನ), 3,030 ಅಂಕವಿಕಲರು, 1,201 ಎಂಬತ್ತೈದು ವರ್ಷ ನಂತರದ ವಯೋಮಾನದವರು, 34 ಸೇವಾ ಮತದಾರರಿ‌ದ್ದಾರೆ ಎಂದು ಮಾಹಿತಿ ನೀಡಿದರು.

85 ನಂತರ ವಯೋಮಾನ, ಕೋವಿಡ್ ಶಂಕಿತ ಬಾಧಿತರ ಮತದಾನಕ್ಕೆ ನಮೂನೆ-‌12 ಅರ್ಜಿ ನೀಡಿ ಮನೆಗೆ ತೆರಳಿ‌ ಮತ ಪಡೆಯುವ ಕಾರ್ಯ ಮಾಡಲಾಗುತ್ತಿದೆ. ಆದ್ಯಾಗೂ ಹಿರಿಯರು, ಅಂಗವಿಕಲರು ಮತಗಟ್ಟೆಗೆ ಬಂದು ಮತದಾನ ಮಾಡಲು ಆಸಕ್ತಿ ತೋರಿದರೆ ಗಾಲಿ ಕುರ್ಚಿ, ವಾಹನ ವ್ಯವಸ್ಥೆ ಮಾಡಲಾಗುವುದು. ಈ ವ್ಯವಸ್ಥೆಗಾಗಿ ಸಕ್ಷಾಂ ಇಸಿಐ ಆ್ಯಪ್‌ನಲ್ಲಿ ಅರ್ಜಿ ಸಲ್ಲಿಸಬೇಕಿದೆ ಎಂದರು.

ಮಾ.16ರಿಂದ ಜೂ.6ರವರೆಗೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಕಟ್ಟುನಿಟ್ಟಿನ ಅನುಷ್ಠಾನಕ್ಕಾಗಿ ಕ್ಷೇತ್ರದಲ್ಲಿ 9 ಫ್ಲೈಯಿಂಗ್ ಸ್ಕ್ವಾಡ್, ಕಡೆಬಾಗಿಲು, ಚಿಕ್ಕಜಂತಕಲ್, ವಿದ್ಯಾನಗರದ ಬಳಿ ಚೆಕ್‌ಪೋಸ್ಟ್, 3 ವಿಡಿಯೊ ತಂಡ, 19 ಸೆಕ್ಟರ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ಸಿ-ವಿಜಿಲ್ ಆ್ಯಪ್ ಪರಿಚಯಿಸಿದ್ದು, ನೀತಿಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದ ದೂರುಗಳು ಇಲ್ಲಿ ಸಲ್ಲಿಸಬಹುದು ಎಂದು ತಿಳಿಸಿದರು.

ನೀತಿ ಸಂಹಿತೆ ಅವಧಿಯಲ್ಲಿ ಎಂಸಿಸಿ ತಂಡಗಳು ಜಪ್ತಿ ಮಾಡುವ ಹಣ, ಮದ್ಯ, ಸಾಮಾಗ್ರಿಗಳ ವಿವರ ದಾಖಲಿಸಲು ಇಎಸ್ಎಂಎಸ್ ಪರಿಚಯ ಮಾಡಿದೆ. ಹಾಗೇ ಚುನಾವಣೆ ಸಂಬಂಧಿತ ದೂರುಗಳ ಸಲ್ಲಿಕೆಗೆ ಜಿಲ್ಲಾಧಿಕಾರಿ ಕಚೇರಿ ಟೋಲ್ ಫ್ರೀ 1950, ಗಂಗಾವತಿ ತಹಶೀಲ್ದಾರ್‌ ಕಚೇರಿ ಸಹಾಯವಾಣಿ ಕೇಂದ್ರ 08533 230929, ಸಹಾಯಕ ಚುನಾವಣಾ ಅಧಿಕಾರಿ ದೂ.ಸಂ 8971334462 ಕರೆ ಮಾಡಬಹುದು ಎಂದರು.

ಇನ್ನು ಮತದಾರರ ಅನುಕೂಲಕ್ಕೆ ವೋಟರ್ ಹೆಲ್ಪ್‌ಲೈನ್ ಆ್ಯಪ್ ಲೈನ್ ಮತ್ತು ಕೆವೈಸಿ ಪರಿಚಯಿಸಿದ್ದು, ವೋಟರ್ ಹೆಲ್ಪ್‌ಲೈನ್ ಆ್ಯಪ್ ಮೂಲಕ ಮತದಾರರ ಗುರುತಿನ ಚೀಟಿ ಸಂಖ್ಯೆ, ಮತಗಟ್ಟೆ ತಿಳಿಯಬಹುದು. ಹಾಗೇ ಹೆಸರು, ವಿಳಾಸ ತಿದ್ದುಪಡಿ ಮಾಡಿಕೊಳ್ಳಬಹುದು. ಕೆವೈಸಿ ಆಪ್ ಮೂಲಕ ಅಭ್ಯರ್ಥಿಗಳ ವಿವಿರ ಅಫಿಡವಿಟ್ ತಿಳಿಯಬಹುದಾಗಿದೆ ಎಂದು ಮಾಹಿತಿ ನೀಡಿದರು.

ತಹಶೀಲ್ದಾರ್‌ ಯು.ನಾಗರಾಜ, ತಾ.ಪಂ ಇಒ ಲಕ್ಷ್ಮೀದೇವಿ, ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ, ಗ್ರಾಮೀಣ ಪೊಲೀಸ್ ಠಾಣೆ ಪಿಐ ಸೋಮಶೇಖರ್ ಜುತ್ತಲ್ ಭಾಗವಹಿಸಿದ್ದರು.

ಗಂಗಾವತಿ ನಗರದ ತಹಶೀಲ್ದಾರ ಕಚೇರಿಯಲ್ಲಿ ಸೋಮ ವಾರ ಸಹಾಯಕ ಚುನಾವಣಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಅವರ ನೇತೃತ್ವದಲ್ಲಿ ರಾಜಕೀಯ ಪಕ್ಷಗಳ ಮುಖಂಡರ ಲೋಕಸಭಾ ಚುನಾವಣೆ ಕುರಿತ ಸಭೆ ಜರುಗಿತು.
ಗಂಗಾವತಿ ನಗರದ ತಹಶೀಲ್ದಾರ ಕಚೇರಿಯಲ್ಲಿ ಸೋಮ ವಾರ ಸಹಾಯಕ ಚುನಾವಣಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಅವರ ನೇತೃತ್ವದಲ್ಲಿ ರಾಜಕೀಯ ಪಕ್ಷಗಳ ಮುಖಂಡರ ಲೋಕಸಭಾ ಚುನಾವಣೆ ಕುರಿತ ಸಭೆ ಜರುಗಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT