ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆ ಮಕ್ಕಳಿಗೂ ಬೇಸಿಗೆ ಶಿಬಿರ

'ಬೇಸಿಗೆ ಸಂಭ್ರಮ' ಕಾರ್ಯಕ್ರಮ: ಕುಣಿದು ಕುಪ್ಪಳಿಸಲಿರುವ ಚಿಣ್ಣರು
Last Updated 25 ಏಪ್ರಿಲ್ 2019, 20:15 IST
ಅಕ್ಷರ ಗಾತ್ರ

ಕೊಪ್ಪಳ: ಶಾಲಾ ಪಠ್ಯ, ಅಭ್ಯಾಸದ ಒತ್ತಡದಲ್ಲಿರುವ ಮಕ್ಕಳ ಮನೋವಿಕಾಸಕ್ಕಾಗಿ ರಾಜ್ಯದಾದ್ಯಂತ 'ಬೇಸಿಗೆ ಸಂಭ್ರಮ' ಎಂಬ ಶಿಬಿರ ಹಮ್ಮಿಕೊಂಡಿದ್ದು, ಜಿಲ್ಲೆಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇದುವರೆಗೂ ಖಾಸಗಿ ಶಾಲೆಗಳಲ್ಲಿ ಕಲಿಯುತ್ತಿದ್ದ ಹಣವಂತರ ಮಕ್ಕಳಿಗೆ ಸೀಮೀತವಾಗಿದ್ದಬೇಸಿಗೆ ಶಿಬಿರ ಇದೀಗ ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೂ ದೊರೆಯುವಂತಾಗಿದೆ. ಸರ್ಕಾರಿ ಶಾಲೆಗಳಲ್ಲಿ 6ಮತ್ತು 7ನೇ ತರಗತಿ ಓದುವ ಮಕ್ಕಳಿಗಾಗಿ ಬೇಸಿಗೆ ಸಂಭ್ರಮ ಶಿಬಿರಶುಕ್ರವಾರದಿಂದ ಹಮ್ಮಿಕೊಳ್ಳಲಾಗಿದೆ.

ಮಕ್ಕಳಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಿ ಖಾಸಗಿ ಶಾಲೆಗಳಲ್ಲಿ ಕಲಿಯುವ ಮಕ್ಕಳೊಂದಿಗೆ ಪೈಪೋಟಿ ನಡೆಸಲು ಅನುಕೂಲ ಕಲ್ಪಿಸಲಾಗಿದೆ. ಈ ನಿಟ್ಟಿನಲ್ಲಿ ಒಂದು ತಿಂಗಳ ಕಾಲ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ 150 ಮಕ್ಕಳಿರುವ ಶಾಲೆಗಳಲ್ಲಿ ಏ. 25ರಿಂದ ಈ ಶಿಬಿರ ಆರಂಭವಾಗಲಿದೆ. ಈ ಶಿಬಿರವು ಮೇ 25ರ ವರೆಗೆ ನಡೆಯಲಿದ್ದು, ನುರಿತ, ತರಬೇತಿ ಪಡೆದ ಶಿಕ್ಷಕರು ವಿವಿಧ ವಿಷಯದಲ್ಲಿ ತರಬೇತಿ ನೀಡುವರು.

ವಿನೂತನ ಮಾರ್ಗದರ್ಶಿ:ಒಂದು ತಿಂಗಳ ಬೇಸಿಗೆ ಸಂಭ್ರಮದಲ್ಲಿ ಮಕ್ಕಳಿಗೆ ಒಟ್ಟು 5 ವಿಷಯಗಳ ಕುರಿತು ಮಾಹಿತಿ, ತಿಳಿವಳಿಕೆ, ತರಬೇತಿ ನೀಡಲಾಗುತ್ತದೆ. ಮೊದಲಿಗೆ ಕುಟುಂಬ, ನೀರು, ಆಹಾರ, ಆರೋಗ್ಯ ಮತ್ತು ನೈರ್ಮಲ್ಯ ಹಾಗೂ ಕೊನೆಯ ವಾರ ನಿಸರ್ಗದ ಕುರಿತು ತರಬೇತಿ ನೀಡಲಾಗುತ್ತದೆ. ಶಿಬಿರದಲ್ಲಿ 25 ಮಕ್ಕಳಿಗೆ ಒಬ್ಬ ಶಿಕ್ಷಕರನ್ನು ನಿಯೋಜಿಸಲಾಗಿದೆ.

ಈಗಾಗಲೇ ಇದಕ್ಕಾಗಿಜಿಲ್ಲೆಯ 212 ಶಿಕ್ಷಕರಿಗೆ ವಿಶೇಷ ತರಬೇತಿ ಸಹ ನೀಡಲಾಗಿದೆ. ಈ ಎಲ್ಲ ಶಿಕ್ಷಕರು ಮಕ್ಕಳಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಈ ವಿಷಯದ ಕುರಿತು ಒಂದು ವಾರ ತರಬೇತಿ ನೀಡಲಿದ್ದಾರೆ. ಮಕ್ಕಳಲ್ಲಿ ಕೌಶಲ ತುಂಬುವ, ಸ್ಪರ್ಧಾತ್ಮಕ ಜಗತ್ತಿನೊಂದಿಗೆ ಪೈಪೋಟಿ ನೀಡುವ ಹಲವಾರು ವಿಷಯಗಳನ್ನು ಶಿಬಿರದಲ್ಲಿ ಹೇಳಿಕೊಡಲಾಗುತ್ತದೆ. ಈ ಶಿಬಿರದಿಂದ ಮಕ್ಕಳಲ್ಲಿ ಕೀಳರಿಮೆ ತೊರೆದು, ಆತ್ಮವಿಶ್ವಾಸ ಹೆಚ್ಚಿಸುವ ವ್ಯಕ್ತಿತ್ವ ವಿಕಸನದ ತರಬೇತಿಯೂ ದೊರೆಯಲಿದೆ.

ಬೇಸಿಗೆಯಲ್ಲಿ ರಜೆಯ ವಿರಾಮ ಕಳೆಯುವ ಶಿಕ್ಷಕರನ್ನು ಶಿಬಿರಕ್ಕೆ ನಿಯೋಜಿಸಲಾಗಿದ್ದು, ಅವರಿಗೆ ಪ್ರೋತ್ಸಾಹಧನ ಕೂಡಾ ನೀಡಲಾಗುತ್ತಿದೆ. ಶಿಬಿರದ ಯಶಸ್ಸು ಶಿಕ್ಷಕರ ಮೇಲೆ ಇದೆ.

ಶಿಬಿರದಿಂದ ಗ್ರಾಮೀಣ ಭಾಗದ ಮಕ್ಕಳಲ್ಲಿ ಉಲ್ಲಾಸ ಮೂಡಿಸಲು ಈ ಯೋಜನೆ ಜಾರಿಗೆ ತಂದಿದ್ದು, ಶಿಕ್ಷಕರು ಸಮರ್ಪಕವಾಗಿ ಕಾರ್ಯ ನಿರ್ವಹಿಸಿದರೆ ಯೋಜನೆಯ ಉದ್ದೇಶ ಸಾಕಾರಗೊಳ್ಳಲಿದೆ ಎಂಬುವುದು ಶಿಕ್ಷಣ ತಜ್ಞರ ಅಭಿಮತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT