ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ಇದ್ದೂ ಇಲ್ಲದಂತಾದ ಈಜುಕೊಳಗಳು

ಬೇಸಿಗೆ ಶಿಬಿರಕ್ಕೆ ಮಾತ್ರ ಸೀಮಿತವಾದ ಈಜು ಚಟುವಟಿಕೆ
Last Updated 5 ನವೆಂಬರ್ 2022, 7:27 IST
ಅಕ್ಷರ ಗಾತ್ರ

ಕೊಪ್ಪಳ: ಸ್ಥಳೀಯ ಈಜು ಪ್ರತಿಭೆಗಳಿಗೆ ಸ್ಥಳೀಯವಾಗಿಯೇ ಗುಣಮಟ್ಟದ ತರಬೇತಿ ಕೊಟ್ಟು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ನೆರವಾಗಬೇಕು ಎನ್ನುವ ಘನ ಉದ್ದೇಶದಿಂದ ರಾಜ್ಯ ಸರ್ಕಾರ ಜಿಲ್ಲೆಯಲ್ಲಿ ಈಜುಕೇಂದ್ರಗಳನ್ನು ನಿರ್ಮಿಸಿಕೊಟ್ಟರೂ ಪ್ರಯೋಜನವಾಗಿಲ್ಲ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಎರಡು ಈಜುಕೇಂದ್ರಗಳು ಜಿಲ್ಲೆಯಲ್ಲಿವೆ. ಕೊಪ್ಪಳದಲ್ಲಿರುವ ಜಿಲ್ಲಾ ಕ್ರೀಡಾಂಗಣದ ವ್ಯಾಪ್ತಿಯಲ್ಲಿ ಹಾಗೂ ಇನ್ನೊಂದು ಗಂಗಾವತಿಯಲ್ಲಿರುವ ಕನಕಗಿರಿ ರಸ್ತೆಯ ತಾಲ್ಲೂಕು ಕ್ರೀಡಾಂಗಣದಲ್ಲಿ ಈಜುಕೊಳಗಳಿವೆ. ವೈಜ್ಞಾನಿಕ ಬಳಕೆ ಮತ್ತು ನಿರ್ವಹಣೆ ಕೊರತೆಯಿಂದಾಗಿ ಎರಡೂ ಈಜುಕೊಳಗಳ ನೀರು ಹಸಿರು ಬಣ್ಣಕ್ಕೆ ತಿರುಗಿದೆ.

ಜಿಲ್ಲಾ ಕೇಂದ್ರದಲ್ಲಿರುವ ಈಜುಕೊಳವನ್ನು ಅಂದಾಜು ₹2 ಕೋಟಿ ವೆಚ್ಚದಲ್ಲಿ 2017ರಲ್ಲಿ ನಿರ್ಮಿಸಲಾಗಿತ್ತು. ಈಜು ಕಲಿಯುವ ಹಾಗೂ ವೃತ್ತಿಪರ ತರಬೇತಿ ಪಡೆಯುವ ಮಕ್ಕಳಿಗೆ ಅನುಕೂಲ ಕಲ್ಪಿಸಲು ನಿರ್ಮಾಣ ಮಾಡಲಾಗಿತ್ತು. ಎರಡು ಅಡಿಯಿಂದ ಆರು ಅಡಿಯ ತನಕ ಆಳ ನಿರ್ಮಿಸಲಾಗಿತ್ತು. ಬಳ್ಳಾರಿಯಲ್ಲಿ ನಡೆದಿದ್ದ ಕಲಬುರಗಿ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಜಿಲ್ಲೆಯ ಸೈಯದ್‌ ಇಕ್ಬಾಲ್‌, ಕುಮಾರ, ಶಿವರಾಜ್, ಈಶಪ್ಪ ಹಾಗೂ ಮಂಜುನಾಥ್‌ ಜಿಲ್ಲೆಯನ್ನು ಪ್ರತಿನಿಧಿಸಿದ್ದರು. ಆದರೆ, ರಾಜ್ಯ ಮಟ್ಟದಲ್ಲಿ ಹೋಗಿ ಸಾಧನೆ ಮಾಡಿದ ಕ್ರೀಡಾಪಟುಗಳ ಸಂಖ್ಯೆ ತೀರಾ ವಿರಳ. ಸೌಕರ್ಯಗಳ ಕೊರತೆಯ ಕಾರಣವೂ ಇಲ್ಲಿನ ಈಜುಪಟುಗಳ ಬೆಳವಣಿಗೆಗೆ ಹಿನ್ನಡೆಯಾಗಿದೆ.

ಆರು ತಿಂಗಳಿನಿಂದ ಕೊಪ್ಪಳದ ಈಜುಕೊಳ ದುರಸ್ತಿಗೆ ಕಾದಿದೆ. ಕಪ್ಪುಮಣ್ಣಿನ ಭೂಮಿಯಲ್ಲಿ ಕೊಳ ನಿರ್ಮಿಸಿರುವ ಕಾರಣ ಹಿರೇಹಳ್ಳದ ನೀರು ಕೊಳಕ್ಕೆ ಹೋಗುವ ಶುದ್ಧೀಕರಣದ ಫಿಲ್ಟರ್‌ಗೆ ನುಗ್ಗುತ್ತದೆ. ಹೀಗಾಗಿ ಮೇಲಿಂದ ಮೇಲೆ ದುರಸ್ತಿ ಮಾಡಿಸಿದರೂ ಸಮಸ್ಯೆ ಪರಿಹಾರವಾಗಿಲ್ಲ. ದುರಸ್ತಿಗಾಗಿ ಮೇಲಿಂದ ಹಲವು ಬಾರಿ ಪ್ರಯತ್ನಿಸಿದರೂ ಮಳೆಗಾಲದ ಸಮಯದಲ್ಲಿ ನೀರು ಕೊಳಗೆ ಒಳಗೆ ಬರುವುದು ನಿಂತಿಲ್ಲ.

ಗಂಗಾವತಿಯಲ್ಲಿರುವ ಈಜುಕೇಂದ್ರದ ಪರಿಸ್ಥಿತಿ ಇದಕ್ಕಿಂತಲೂ ಹೆಚ್ಚು ಭಿನ್ನವಾಗಿಲ್ಲ. ಈಜುಕೊಳದ ಸುತ್ತಲೂ ಕಸ ಬೆಳೆದಿದೆ. ನಿರ್ವಹಣೆ ಸಮಸ್ಯೆಯಿಂದಾಗಿ ಕೊಳದಲ್ಲಿ ನಿಂತಿರುವ ಸ್ವಲ್ಪ ನೀರು ಕೊಳಕಾಗಿದ್ದು, ದುರಸ್ತಿಗೆ ಕಾದಿದೆ.

ಈಜು ಕಲಿಕೆಯ ಅಭ್ಯಾಸದ ಬಳಿಕ ಬಟ್ಟೆ ಬದಲಿಸಲು ನಿರ್ಮಿಸಲಾಗಿದ್ದ ಕೊಠಡಿಗಳ ಬಾಗಿಲುಗಳು ಕಿತ್ತು ಹೋಗಿವೆ. ಹೀಗಾಗಿ ಜಿಲ್ಲೆಯಲ್ಲಿರುವ ಎರಡೂ ಈಜುಕೊಳಗಳು ಇದ್ದೂ ಇಲ್ಲದಂತಾಗಿವೆ. ಪ್ರತಿ ವರ್ಷ ರಾಜ್ಯಮಟ್ಟದ ಈಜು ಚಾಂಪಿಯನ್‌ಷಿಪ್‌, ಶಾಲಾ ಮಟ್ಟದ ಸ್ಪರ್ಧೆಗಳು ನಡೆದರೂ ಜಿಲ್ಲೆಯಿಂದ ಸ್ಪರ್ಧಿಗಳೇ ಇಲ್ಲದಂತಾಗಿದೆ. ಪ್ರತಿ ವರ್ಷ ಬೇಸಿಗೆಯ ಸಮಯದಲ್ಲಿ ನಡೆಸುವ ಶಿಬಿರಗಳಿಗೆ ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಬರುತ್ತಾರೆ. ಅವರೆಲ್ಲ ಹವ್ಯಾಸಕ್ಕಾಗಿ ಮಾತ್ರ ಈಜು ಕಲಿಯುತ್ತಾರೆ. ಹೀಗಾಗಿ ವೃತ್ತಿಪರ ಈಜುಪಟುಗಳ ಕೊರತೆ ಇನ್ನಿಲ್ಲದಂತೆ ಕಾಡುತ್ತಿದೆ.

ಇರುವ ಈಜುಕೊಳವನ್ನು ಸಮರ್ಥವಾಗಿ ಬಳಸಿಕೊಂಡು ಈಜು ಕ್ರೀಡೆಯ ಪ್ರತಿಭೆಗಳನ್ನು ಹೊರತರುವ ಕೆಲಸ ತುರ್ತಾಗಿ ಆಗಬೇಕಿದೆ.

*
ನಾವೂ ಕಾಯುತ್ತಿದ್ದೇವೆ. ಗುಣಮಟ್ಟದ ಪ್ರತಿಭಾನ್ವಿತ ಈಜುಪಟುಗಳು ಬಂದರೆ ಕಲಿಸುತ್ತೇವೆ. ಓದಿನ ಒತ್ತಡದಿಂದ ಪೋಷಕರು ಮಕ್ಕಳನ್ನು ಕ್ರೀಡೆಗೆ ಕಲಿಸಲು ಹಿಂದೇಟು ಹಾಕುತ್ತಾರೆ
–ಮಂಜುನಾಥ, ಈಜು ಕೋಚ್‌, ಕೊಪ್ಪಳ

*

ದುರಸ್ತಿಗೆ ಕಾದಿರುವ ಈಜುಕೊಳವನ್ನು ಸರಿಪಡಿಸಬೇಕು ಎಂದು ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಆದಷ್ಟು ಬೇಗನೆ ದುರಸ್ತಿ ಮಾಡಿಸಲಾಗುವುದು.
-ಗ್ರೇಸಿ, ಸಹಾಯಕ ನಿರ್ದೇಶಕ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT