ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ ಜಿಲ್ಲಾ ಕ್ರೀಡಾಂಗಣಕ್ಕೆ ಸಿಂಥೆಟಿಕ್ ಟ್ರ್ಯಾಕ್

ಕೇಂದ್ರ ಸರ್ಕಾರದ ಖೇಲೋ ಇಂಡಿಯಾದಿಂದ ₹ 15 ಕೋಟಿ ಅನುದಾನ; ದಶಕದ ಬೇಡಿಕೆಗೆ ಸ್ಪಂದನೆ
Last Updated 7 ನವೆಂಬರ್ 2019, 10:10 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲಾ ಕೇಂದ್ರವಾಗಿ 2 ದಶಕ ಕಳೆದರೂ ಅಭಿವೃದ್ಧಿ ಹೊಂದದ ಜಿಲ್ಲಾ ಕ್ರೀಡಾಂಗಣಕ್ಕೆ ಕೇಂದ್ರ ಸರ್ಕಾರ ಖೇಲೋ ಇಂಡಿಯಾ ಯೋಜನೆ ಅಡಿ ₹ 15 ಕೋಟಿ ಮಂಜೂರು ಮಾಡಿದ್ದು, ಕ್ರೀಡಾ ಪ್ರೇಮಿಗಳಲ್ಲಿ ಸಂತಸ ತಂದಿದೆ.

18 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಕ್ರೀಡಾಂಗಣದಲ್ಲಿ ಈಜುಕೊಳ, ಒಳಾಂಗಣ ಕ್ರೀಡಾಂಗಣ, ಸ್ಕೇಟಿಂಗ್ ಮೈದಾನ, ವಸತಿ ನಿಲಯ ಮತ್ತು ಸಂಬಂಧಿಸಿದ ಕಚೇರಿಗಳು ಕಾರ್ಯನಿರ್ವಹಿಸುತ್ತದೆ. ಬೃಹತ್ ಮೈದಾನ ಇನ್ನೂ ಪೂರ್ಣ ಪ್ರಮಾಣದಲ್ಲಿ ನಿರ್ಮಾಣಗೊಂಡಿಲ್ಲ. ಪ್ರೇಕ್ಷಕರ ಗ್ಯಾಲರಿ ಶೇ 30ರಷ್ಟು ಮಾತ್ರ ಆಗಿದೆ. ಇನ್ನೂ ಒಂದು ಬದಿ ನಿರ್ಮಾಣ ಕಾಮಗಾರಿ ಹಾಗೆಯೇ ಉಳಿದಿದೆ. ಅಲ್ಲದೆ ಗ್ಯಾಲರಿ ಮೇಲೆ ಛಾವಣಿ ಹಾಕಿಸುವ ಕಾರ್ಯ ಆರಂಭವಾಗಿಯೇ ಇಲ್ಲ.

ಇಷ್ಟೆಲ್ಲ ಕೊರತೆಗಳ ಮಧ್ಯೆಯೂ, ಹೋಬಳಿ, ತಾಲ್ಲೂಕು, ಜಿಲ್ಲಾ, ವಿಭಾಗ ಮಟ್ಟದ ಕ್ರೀಡೆಗಳು ಇಲ್ಲಿ ನಡೆದಿವೆ. ಈ ಕುರಿತು ಕ್ರೀಡಾಪ್ರೇಮಿಗಳು, ಆಸಕ್ತರು, ಸಂಘಟನೆಯ ಮುಖಂಡರು ಸಂಬಂಧಿಸಿದ ಸಚಿವಾಲಯಕ್ಕೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರು. ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಪ್ರಸ್ತಾವ ಸಲ್ಲಿಸಿತ್ತು. ಈಗ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಿರುವುದರಿಂದ ಅಲ್ಪ ನೆಮ್ಮದಿ ಮೂಡಿಸಿದೆ.

ಕ್ರೀಡಾಂಗಣದಲ್ಲಿ 400 ಮೀಟರ್ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣಕ್ಕೆ₹ 7 ಕೋಟಿ, ಬಹುಉದ್ದೇಶದ ಕ್ರೀಡಾ ಸಭಾಂಗಣಕ್ಕೆ ₹ 8 ಕೋಟಿ ಹಣವನ್ನು ಖೇಲೋ ಇಂಡಿಯಾ ಯೋಜನೆ ಅಡಿ ಅನುದಾನ ನೀಡಲು ಒಪ್ಪಿಕೊಂಡಿದೆ.

ಕ್ರೀಡಾಂಗಣದಲ್ಲಿ ಒಳಾಂಗಣ ಕ್ರೀಡೆಗೆ ಬಹುಉದ್ಧೇಶಿತ ಕ್ರೀಡಾ ಸಂಕೀರ್ಣ, 4 ಸಿಂಥೆಟಿಕ್ ಟ್ರ್ಯಾಕ್, ಶೆಟಲ್ ಕೋರ್ಟ್, ಬ್ಯಾಡ್ಮಿಂಟನ್ ಹಾಲ್, ಟೇಬಲ್ ಟೆನ್ನಿಸ್, ಬಾಸ್ಕೆಟ್ ಬಾಲ್ ಹಾಲ್, ಫುಟ್‌ಬಾಲ್ ಕ್ರೀಡಾಂಗಣ, ಚೆಸ್, ಕೇರಂ ಪೋರಂ, ಅರೋಬಿಕ್ಸ್, ಮಹಿಳೆ ಮತ್ತು ಪುರುಷರ ಜಿಮ್ ಕೇಂದ್ರ ನಿರ್ಮಾಣಕ್ಕೆ ಅನುದಾನ ನೀಡುವಂತೆ ಜಿಲ್ಲಾ ಅಥ್ಲೆಟಿಕ್ ಸಂಸ್ಥೆ ಕೂಡಾ ಸರ್ಕಾರಕ್ಕೆ ಮನವಿ ಮಾಡಿತ್ತು. ಈ ಎಲ್ಲ ಮನವಿಯನ್ನು ಪುರಸ್ಕರಿಸಿದ ಕೇಂದ್ರ ಸರ್ಕಾರ ಹಿಂದುಳಿದ ಭಾಗದ ಕ್ರೀಡಾಳುಗಳ ಅನುಕೂಲಕ್ಕೆ ಅನುದಾನ ಬಿಡುಗಡೆ ಮಾಡಿದ್ದು, ಕಾಮಗಾರಿಯೊಂದೇ ಬಾಕಿ ಉಳಿದಿದೆ.

ಕಾಮಗಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ನೀಡಲಾಗಿದೆ.ಕ್ರೀಡಾ ಇಲಾಖೆ ರಾಜ್ಯ ಆಯುಕ್ತರು ಜಿಲ್ಲಾಧಿಕಾರಿಗೆಪತ್ರ ಬರೆದುಒಂದು ವರ್ಷದ ನಿಗಧಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊ ಳ್ಳುವಂತೆ ತಿಳಿಸಿದೆ. ಜಿಲ್ಲೆಯ ನಾಗರಿಕರ ಒತ್ತಾಯದ ಮೇರೆಗೆ ಸಂಸದ ಸಂಗಣ್ಣ ಕರಡಿ ಕೇಂದ್ರ ಯುವಜನ ಸೇವಾ ವ್ಯವಹಾರಗಳ ಸಚಿವಾಲಯ ಸಂಪರ್ಕಿಸಿ ರಾಜ್ಯ ಕ್ರೀಡಾ ಇಲಾಖೆಯ ಮೂಲಕ ಹಣ ಬಿಡುಗಡೆ ಮಾಡಿಸುವಲ್ಲಿ ಶ್ರಮಿಸಿದ್ದಾರೆ.

ಹಲವು ಮೂಲಸೌಕರ್ಯ ಕೊರತೆಯಿಂದ ನರಳುತ್ತಿರುವ ಈ ಕ್ರೀಡಾಂಗಣಕ್ಕೆ ಕೇಂದ್ರ ಅನುದಾನ ನೀಡಿದ್ದು, ಅದನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಕ್ರೀಡಾಪಟುಗಳನ್ನು ತಯಾರಿಸಬೇಕು ಎಂಬುವುದೇ ಇಲ್ಲಿನ ಕ್ರೀಡಾಪ್ರೇಮಿಗಳ ಆಶಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT