ಬುಧವಾರ, ನವೆಂಬರ್ 25, 2020
24 °C
ಯಲಬುರ್ಗಾ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ

ಗೈರಾದ ಅಧಿಕಾರಿಗಳ ವಿರುದ್ಧ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಲಬುರ್ಗಾ: ‘ಅಧಿಕಾರಿಗಳು ಸರಿಯಾಗಿ ಹಾಜರಾಗದಿದ್ದರೆ ಯಾವ ಪುರುಷಾರ್ಥಕ್ಕೆ ಸಭೆ ಆಯೋಜಿಸಬೇಕು. ಪ್ರಗತಿ ಕುರಿತು ಮಾಹಿತಿ ನೀಡಬೇಕಾದವರೆ ಇಲ್ಲದಿದ್ದರೆ ನಾವುಗಳಾದರೂ ಸಭೆಗೆ ಬರುವುದ್ಯಾಕೆ’ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಶರಣಪ್ಪ ಈಳಿಗೇರ ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಈಚೆಗೆ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.

ಮೂರು ತಿಂಗಳಿಗೊಮ್ಮೆ ನಡೆಯುವ ಈ ಸಾಮಾನ್ಯ ಸಭೆಗೆ ಅನುಷ್ಠಾನ ಅಧಿಕಾರಿಗಳು ಗೈರು ಹಾಜರಾದರೆ ವಿವಿಧ ಯೋಜನೆಗಳ ಪ್ರಗತಿಯನ್ನು ಹೇಗೆ ತಿಳಿದುಕೊಳ್ಳಬೇಕು. ದೂರವಾಣಿಯಲ್ಲಿಯೂ ಸಿಗುವುದಿಲ್ಲ. ಸಭೆಗೂ ಹಾಜರಾಗುವುದಿಲ್ಲ. ತಾಲ್ಲೂಕಿನಲ್ಲಿ ಅಧಿಕಾರಿಗಳಿಗೆ ಹೇಳುವವರು ಕೇಳುವವರು ಇಲ್ಲದಾಗಿದೆ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಇದಕ್ಕೆ ಪ್ರತಿಕ್ರಿಯಿಸಿದ ತಾಲ್ಲೂಕು ಪಂಚಾಯಿತಿ ಇಒ ಜಯರಾಂ ಚವ್ಹಾಣ,‘ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಮೇಲಧಿಕಾರಿಗಳಿಗೆ ಮನವಿ ಮಾಡಲಾಗುವುದು. ಕೆಲ ಇಲಾಖೆಯ ಅಧಿಕಾರಿಗಳು ಹಾಜರಾಗದೇ ಸಿಬ್ಬಂದಿಯನ್ನು ಕಳುಹಿಸಿದ್ದು, ಕೂಡ ಸರಿಯಾದ ಧೋರಣೆಯಲ್ಲ. ಅಂಥ ಅಧಿಕಾರಿಗಳಿಗೂ ನೋಟಿಸ್ ಜಾರಿ ಮಾಡಲಾಗುವುದು’ ಎಂದು ತಿಳಿಸಿದರು.

ಸಸಿ ನೆಡುವ ನೆಪದಲ್ಲಿ ಅರಣ್ಯ ಇಲಾಖೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ. ಅದರ ಕುರಿತು ಮೇಲಧಿಕಾರಿಗಳು ಹೆಚ್ಚಿನ ಗಮನ ಹರಿಸಿ ತನಿಖೆ ಕೈಗೊಳ್ಳಬೇಕು ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ರುದ್ರಪ್ಪ ಮರಕಟ್ ಆಗ್ರಹಿಸಿದರು.

ತಾಲ್ಲೂಕಿನಾದ್ಯಂತ ಒಟ್ಟು 49 ಶಾಲೆಗಳಿಗೆ ಡೆಸ್ಕ್‌ಗಳು ಬಂದಿವೆ. ಶೀಘ್ರದಲ್ಲಿಯೇ ಅವುಗಳನ್ನು ವಿತರಿಸಲಾಗುತ್ತದೆ. ಹಾಗೆಯೇ ಶಾಲೆಗಳು ಪ್ರಾರಂಭಗೊಳ್ಳುವ ಮುನ್ನ ಪಠ್ಯಪುಸ್ತಕ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಹಳೆ ಕಟ್ಟಡಗಳ ದುರಸ್ಥಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ ಬಡಿಗೇರ ಸಭೆಗೆ ತಿಳಿಸಿದರು.

ಕುಕನೂರು ಹಾಗೂ ಯಲಬುರ್ಗಾ ತಾಲ್ಲೂಕಿನಲ್ಲಿ 45 ಸಾವಿರ ಹೆಕ್ಟೇರ್ ಹಿಂಗಾರು ಬಿತ್ತನೆ ಮಾಡಲಾಗಿದೆ. ಪ್ರಸಕ್ತ ವರ್ಷದಲ್ಲಿ ಆತ್ಮಹತ್ಯೆ ಮಾಡಿಕೊಂಡ ಮೂವರು ರೈತರ ಕುಟುಂಬಗಳಿಗೆ ಸರ್ಕಾರದ ವತಿಯಿಂದ ತಲಾ ₹5 ಲಕ್ಷ ಪರಿಹಾರ ನೀಡಲಾಗಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ನಿಂಗಣ್ಣ ಬಿರಾದಾರ ತಿಳಿಸಿದರು.

ಅಧ್ಯಕ್ಷೆ ಲಕ್ಷ್ಮಿ ಗೌಡ್ರ, ಉಪಾಧ್ಯಕ್ಷೆ ಕವಿತಾ ಉಳ್ಳಾಗಡ್ಡಿ, ವಿವಿಧ ಇಲಾಖೆಯ ಅಧಿಕಾರಿಗಳು ಪ್ರಗತಿ ವರದಿ ಓದಿದರು. ತಾ.ಪಂ ಸದಸ್ಯರು, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.