ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ: ಭೂಮರಡ್ಡಿಗೆ ಜೆಡಿಎಸ್‌ ಜಿಲ್ಲಾಧ್ಯಕ್ಷ ಸ್ಥಾನ

ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಜೆಡಿಎಸ್‌ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಹೊಸಬರ ನೇಮಕ
Published 7 ಫೆಬ್ರುವರಿ 2024, 5:01 IST
Last Updated 7 ಫೆಬ್ರುವರಿ 2024, 5:01 IST
ಅಕ್ಷರ ಗಾತ್ರ

ಕೊಪ್ಪಳ: ಪ್ರಥಮ ದರ್ಜೆ ಗುತ್ತಿಗೆದಾರರಾಗಿ ಹಾಗೂ ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷರೂ ಆಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ಸುರೇಶ ಭೂಮರಡ್ಡಿ ಅವರಿಗೆ ಲೋಕಸಭಾ ಚುನಾವಣೆಯ ಹೊತ್ತಿನಲ್ಲಿ ’ತೆನೆ’ಯನ್ನು ಗಟ್ಟಿಯಾಗಿ ಹೊತ್ತು ಜೆಡಿಎಸ್‌ ಪಕ್ಷ ಕಟ್ಟುವ ಮಹತ್ವದ ‘ಗುತ್ತಿಗೆ’ ಲಭಿಸಿದೆ.

ಎರಡು ವರ್ಷಗಳ ಕಾಲ ಪಕ್ಷದ ಜಿಲ್ಲಾಧ್ಯಕ್ಷರಾಗಿ ಮತ್ತು ರಾಜ್ಯ ಕಾರ್ಯದರ್ಶಿಯಾಗಿ ವೀರೇಶ ಮಹಾಂತಯ್ಯನಮಠ ಕಾರ್ಯನಿರ್ವಹಿಸಿದ್ದರು. ಈಗ ಭೂಮರಡ್ಡಿ ಅವರಿಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಲಾಗಿದ್ದು, ಹಿಂದೆ ಭೂಮರಡ್ಡಿ ಅವರು ಕಾಂಗ್ರೆಸ್‌ ಪಕ್ಷದಲ್ಲಿ ಬ್ಲಾಕ್‌ ಘಟಕದ ಅಧ್ಯಕ್ಷರಾಗಿದ್ದರು. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಚ್‌.ಡಿ. ಕುಮಾರಸ್ವಾಮಿ ಪಕ್ಷದ ಧ್ವಜ ನೀಡುವ ಮೂಲಕ ಜಿಲ್ಲಾಧ್ಯಕ್ಷ ಸ್ಥಾನ ವಹಿಸಿದರು.

ಕಾಂಗ್ರೆಸ್‌ನಲ್ಲಿದ್ದ ಭೂಮರಡ್ಡಿ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ ತೊರೆದು ಹಿಂದಿನ ವಿಧಾನಸಭಾ ಚುನಾವಣೆ ವೇಳೆ ಜೆಡಿಎಸ್‌ ಸೇರ್ಪಡೆಯಾಗಿದ್ದರು. ಇವರ ಬೀಗರಾದ ಜೆಡಿಎಸ್‌ ರಾಜ್ಯ ಕೋರ್‌ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್‌ ಕೊಪ್ಪಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದಾಗ ತೆರೆಯಲ್ಲಿ ನಿಂತು ಬೀಗರ ಗೆಲುವಿಗಾಗಿ ಪ್ರಯತ್ನಿಸಿದ್ದರು. ಜೊತೆಗೆ ಪಕ್ಷ ಸಂಘಟನೆಗೂ ಒತ್ತು ಕೊಟ್ಟಿದ್ದರು. 

ಸವಾಲು: ಕೆಲ ತಿಂಗಳಲ್ಲಿಯೇ ಲೋಕಸಭಾ ಚುನಾವಣೆ ನಡೆಯಲಿದೆ. ಹಿಂದಿನ ವಿಧಾನಸಭಾ ಚುನಾವಣೆ ವೇಳೆ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಒಂದಷ್ಟು ಪಕ್ಷ ಸಂಘಟನೆಯಾಗಿದೆ. ಜಿಲ್ಲೆಯ ಇನ್ನುಳಿದ ಗಂಗಾವತಿ, ಕನಕಗಿರಿ, ಯಲಬುರ್ಗಾ ಮತ್ತು ಕುಷ್ಟಗಿ ಕ್ಷೇತ್ರಗಳಲ್ಲಿ ಪಕ್ಷದ ಸಾಧನೆ ಶೂನ್ಯಕ್ಕೆ ಕುಸಿದಿದೆ. ಹೀಗಾಗಿ ಅಲ್ಲಿ ಪಕ್ಷ ಸಂಘಟನೆ ಮಾಡಬೇಕಾದ ಸವಾಲು ಹೊಸ ಅಧ್ಯಕ್ಷರ ಮುಂದಿದೆ.

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್‌ ಸಿಗದ ಕಾರಣಕ್ಕೆ ಬೇಸತ್ತು ಸಿ.ವಿ. ಚಂದ್ರಶೇಖರ್‌ ಬಿಜೆಪಿ ತೊರೆದು ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದ್ದರು. ಲೋಕಸಭಾ ಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ಮಾಡಿಕೊಂಡಿವೆ.

ಅಭ್ಯರ್ಥಿಗಳನ್ನು ಅಂತಿಮಗೊಳಿಸಬೇಕಿದ್ದು ಹಾಲಿ ಸಂಸದ ಬಿಜೆಪಿಯ ಸಂಗಣ್ಣ ಕರಡಿ ಮೂರನೇ ಬಾರಿಗೆ ಟಿಕೆಟ್‌ ನೀಡುವಂತೆ ಕೇಳುತ್ತಿದ್ದಾರೆ. ಚಂದ್ರಶೇಖರ್‌ ಕೂಡ ಸ್ಪರ್ಧೆಯ ಇಂಗಿತ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಎರಡೂ ಪಕ್ಷಗಳ ವರಿಷ್ಠರ ನಡುವೆ ಹೈಕಮಾಂಡ್‌ ಮಟ್ಟದಲ್ಲಿ ಆಗುವ ಟಿಕೆಟ್‌ ಹಂಚಿಕೆ ಕುರಿತ ಒಪ್ಪಂದ ಕೊಪ್ಪಳ ಲೋಕಸಭಾ ಕ್ಷೇತ್ರದ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದ ಈ ಕ್ಷೇತ್ರದ ಟಿಕೆಟ್‌ ಯಾರಿಗೆ ಸಿಗುತ್ತವೆ ಎನ್ನುವ ಕುತೂಹಲವೂ ಇದೆ.

ವೀರೇಶ ಮಹಾಂತಯ್ಯನಮಠ
ವೀರೇಶ ಮಹಾಂತಯ್ಯನಮಠ

‘ಬಯಸದೇ ಬಂದ ಭಾಗ್ಯ’

ಜಿಲ್ಲಾಧ್ಯಕ್ಷ ಸ್ಥಾನ ಬಯಸದೇ ಬಂದ ಭಾಗ್ಯವಾಗಿದ್ದು ಪಕ್ಷ ಸಂಘಟನೆ ಮಾಡುವಂತೆ ಖುದ್ದು ಎಚ್‌.ಡಿ. ಕುಮಾರಸ್ವಾಮಿ ಅವರೇ ಹೇಳಿದ್ದಾರೆ. ಆದಷ್ಟು ಬೇಗನೆ ಎಲ್ಲ ವಿಭಾಗಗಳಿಗೆ ಹೊಸ ಪದಾಧಿಕಾರಿಗಳನ್ನು ನೇಮಕ ಮಾಡಲಾಗುವುದು ಎಂದು ಸುರೇಶ ಭೂಮರೆಡ್ಡಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. ‘ಚುನಾವಣೆಯ ಹೊತ್ತಿನಲ್ಲಿಯೇ ಅವಕಾಶ ಲಭಿಸಿದ್ದು ಖುಷಿಯ ವಿಚಾರ. ಎಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷವನ್ನು ತಳ ಹಂತದಿಂದ ಕಟ್ಟಬೇಕಾದ ಸವಾಲು ಇದೆ ಎನ್ನುವ ವಿಚಾರ ಗೊತ್ತಿದೆ. ಆದಷ್ಟು ಬೇಗನೆ ಕಾರ್ಯೋನ್ಮುಖನಾಗುವೆ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಕೆಲಸ ಮಾಡುವೆ’ ಎಂದರು. 

‘ಕೊಪ್ಪಳಕ್ಕೆ ಬಂದ ಬಳಿಕ ರಾಜಕೀಯ ನಿರ್ಧಾರ’

‘ಲೋಕಸಭಾ ಚುನಾವಣೆಯ ಸನಿಹದಲ್ಲಿ ಹೊಸ ಅಧ್ಯಕ್ಷರ ನೇಮಕ ಮಾಡಿದ ದಿಢೀರ್‌ ಬದಲಾವಣೆ ನನಗೂ ಅಚ್ಚರಿ ಮೂಡಿಸಿದೆ. ಜಿಲ್ಲಾಧ್ಯಕ್ಷರ ನೇಮಕದ ಬಗ್ಗೆ ಕೊನೆಯವರೆಗೂ ನನಗೆ ಮಾಹಿತಿ ಇರಲಿಲ್ಲ’ ಎಂದು ಪಕ್ಷದ ನಿಕಟಪೂರ್ವ ಜಿಲ್ಲಾಧ್ಯಕ್ಷ ವೀರೇಶ ಮಹಾಂತಯ್ಯಮಠ ಹೇಳಿದರು. ‘ಎಚ್‌.ಡಿ.ದೇವೇಗೌಡ ಅವರು ಸಕ್ರಿಯ ರಾಜಕಾರಣದಲ್ಲಿ ಇದ್ದ ದಿನಗಳಿಂದಲೂ ಇರುವ ಕಾರ್ಯಕರ್ತರು ಈಗಲೂ ಜಿಲ್ಲೆಯಲ್ಲಿದ್ದಾರೆ. ಪಕ್ಷಕ್ಕಾಗಿ ದುಡಿದವರಿಗೆ ಏನೂ ಸಿಗುತ್ತಿಲ್ಲ ಎನ್ನುತ್ತಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಹೊಸ ಅಧ್ಯಕ್ಷರ ನೇಮಕ ಮಾಡಬೇಕಿತ್ತು. ಪ್ರಸ್ತುತ ಬೆಂಗಳೂರಿನಲ್ಲಿದ್ದು ಕೊಪ್ಪಳಕ್ಕೆ ಬಂದ ಬಳಿಕ ರಾಜಕೀಯ ಬಗ್ಗೆ ಮುಂದಿನ ನಿರ್ಧಾರ ಕೈಗೊಳ್ಳುವೆ’ ಎಂದರು.

ಉಸ್ತುವಾರಿ ನಾಯಕರ ನೇಮಕ

ಲೋಕಸಭಾ ಚುನಾವಣೆಯಲ್ಲಿ ಪ್ರತಿ ಕ್ಷೇತ್ರಕ್ಕೆ ಉಸ್ತುವಾರಿಗಳನ್ನು ನೇಮಿಸಿ ಎಚ್‌.ಡಿ. ಕುಮಾರಸ್ವಾಮಿ ಆದೇಶ ಹೊರಡಿಸಿದ್ದಾರೆ. ಕೊಪ್ಪಳ ಕ್ಷೇತ್ರಕ್ಕೆ ಉಸ್ತುವಾರಿ ನಾಯಕರಾಗಿ ಮಾಜಿ ಸಚಿವ ವೆಂಕಟರಾವ್‌ ನಾಡಗೌಡ ಸಹ ನಾಯಕರಾಗಿ ಹಗರಿಬೊಮ್ಮನಹಳ್ಳಿ ಶಾಸಕ ಕೆ. ನೇಮಿರಾಜ್‌ ನಾಯಕ ಮತ್ತು ರಾಜ್ಯ ಕೋರ್‌ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್‌ ಅವರನ್ನು ನೇಮಕ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT