ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ | ನ್ಯಾಯಾಂಗಕ್ಕೆ ಜವಾಬ್ದಾರಿ ಉಳಿಸಿಕೊಳ್ಳುವ ಸವಾಲು: ಬಸವರಾಜ ಪಾಟೀಲ್‌

ವಕೀಲರ ದಿನಾಚರಣೆ ಕಾರ್ಯಕ್ರಮದಲ್ಲಿ ಬಸವರಾಜ ಪಾಟೀಲ ಸೇಡಂ ಹೇಳಿಕೆ
Last Updated 4 ಡಿಸೆಂಬರ್ 2022, 6:00 IST
ಅಕ್ಷರ ಗಾತ್ರ

ಕೊಪ್ಪಳ: ‘ಶಾಸಕಾಂಗ ಹಾಗೂ ಕಾರ್ಯಾಂಗ ಹಾದಿ ತಪ್ಪಿದಾಗ ಜನರಿಗೆ ನ್ಯಾಯಾಂಗ ಇದೆ ಎನ್ನುವ ಗಟ್ಟಿ ನಂಬಿಕೆಯಿದ್ದು, ಅದನ್ನು ಉಳಿಸಿಕೊಂಡು ಹೋಗುವ ಸವಾಲು ಇದೆ’ ಎಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ್‌ ಸೇಡಂ ಹೇಳಿದರು.

ಜಿಲ್ಲಾ ವಕೀಲರ ಸಂಘ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಾಂಸ್ಕೃತಿಕ ಸಂಘ, ಕೊಪ್ಪಳ ಹಾಗೂ ಗಂಗಾವತಿ ಕಾನೂನು ಮಹಾವಿದ್ಯಾಲಯಗಳ ಸಹಯೋಗದಲ್ಲಿ ಶನಿವಾರ ಇಲ್ಲಿ ನಡೆದ ವಕೀಲರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ರಾಧಾಕೃಷ್ಣನ್‌ ಜನ್ಮದಿನ ಆಚರಿಸುವ ಶಿಕ್ಷಕರು, ಡಾ. ಬಾಬು ರಾಜೇಂದ್ರ ಪ್ರಸಾದ್‌ ಜನ್ಮದಿನ ಆಚರಿಸುವ ವಕೀಲರು ತಮ್ಮ ಮನೆಗಳಲ್ಲಿ ಅವರ ಫೋಟೊಗಳನ್ನು ಹಾಕಿಕೊಳ್ಳಬೇಕು. ಸಂವಿಧಾನದ ಚೌಕಟ್ಟಿನಲ್ಲಿ ಕೆಲಸ ಮಾಡುವ ನ್ಯಾಯಾಂಗ ದಾರಿ ತಪ್ಪಿದರೆ ಸಮಾಜದ ದಿಕ್ಕು ಕೂಡ ತಪ್ಪುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ವಕೀಲರು ವೃತ್ತಿ ಗೌರವ ಪಾಲಿಸಬೇಕು, ಘನತೆ ಎತ್ತಿ ಹಿಡಿಯಬೇಕು. ಜಗತ್ತು ನಂಬಿಕೆ ಮೇಲೆ ನಡೆಯುತ್ತಿದ್ದು, ನ್ಯಾಯ ಜಗತ್ತು ಮನಸ್ಸು ಮಾಡಿದರೆ ಸುಂದರ ಜಗತ್ತಿಗೆ ಇಂಬುಕೊಡಲು ಸಾಧ್ಯವಾಗುತ್ತದೆ. ವಿಶ್ವದ ಸಮಸ್ಯೆಗಳನ್ನು ಪರಿಹರಿಸುವ ತಾಣಗಳಾಗಬೇಕಿದ್ದ ವಿಶ್ವವಿದ್ಯಾಲಯಗಳ ಗುಣಮಟ್ಟ ಹಾಳಾಗಿವೆ. ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಬಳ ಪಡೆಯುವವರು ತಿಂಗಳಿಗೆ ಸರಿಯಾಗಿ ಎರಡು ತಾಸು ವಿದ್ಯಾರ್ಥಿಗಳ ಜೊತೆ ಕಳೆಯುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಧಾನ ಜಿಲ್ಲಾ ಮತ್ತು ಸಷೆನ್ಸ್‌ ನ್ಯಾಯಾಧೀಶರಾದ ಬಿ.ಎಸ್.ರೇಖಾ ಮಾತನಾಡಿ ‘ವಕೀಲರು ಜಗತ್ತಿನ ಎಲ್ಲ ಕೆಲಸವನ್ನು ಮಾಡಬಲ್ಲರು. ಕಕ್ಷಿದಾರರು ಸತ್ಯ ಹೇಳುವುದು ವಕೀಲರ ಮುಂದೆ ಮಾತ್ರ. ವೃತ್ತಿಯನ್ನು ಪ್ರೀತಿಸಬೇಕು. ವೃತ್ತಿ ಘನತೆಯನ್ನು ಎತ್ತರಕ್ಕೆ ಕೊಂಡೊಯ್ಯಬೇಕು. ಗ್ರಂಥಾಲಯಗಳನ್ನು ಚೆನ್ನಾಗಿ ಬಳಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ. ಕಣವಿ ಮಾತನಾಡಿ ‘ಕೊಪ್ಪಳದಲ್ಲಿ ಹೊಸ ಕೋರ್ಟ್‌ ಕಟ್ಟಡ ನಿರ್ಮಾಣವಾಗಬೇಕು. ಇದಕ್ಕಾಗಿ ಭೂ ಸ್ವಾಧೀನಕ್ಕೆ ಅಗತ್ಯವಿರುವ ₹10.61 ಕೋಟಿ ಹಣವನ್ನು ಆದ್ಯತೆ ಮೇರೆಗೆ ಸರ್ಕಾರದಿಂದ ಬಿಡುಗಡೆ ಮಾಡಿಸಿಕೊಡಬೇಕು’ ಎಂದು ಮನವಿ ಮಾಡಿದರು.

ಕರ್ನಾಟಕ ವಿಶ್ವವಿದ್ಯಾಲಯದ ಕಾನೂನು ವಿಭಾಗದ ಮುಖ್ಯಸ್ಥ ಸಿ.ಎಸ್. ಪಾಟೀಲ, ಶಾಸಕ ಅಮರೇಗೌಡ ಬಯ್ಯಾಪುರ, ನಗರಸಭೆ ಅಧ್ಯಕ್ಷ ಶಿವರಡ್ಡಿ ಭೂಮಕ್ಕನವರ, ರಾಜ್ಯ ವಕೀಲರ ಪರಿಷತ್‌ ಸದಸ್ಯ ಎಸ್‌. ಆಸೀಫ್‌ ಅಲಿ, ಸಾರ್ವಜನಿಕ ಅಭಿಯೋಜಕಿ ಅಪರ್ಣಾ ಬಂಡಿ, ಜಿಲ್ಲಾ ಸರ್ಕಾರಿ ವಕೀಲ ರಾಜಶೇಖರ ಗಣವಾರಿ, ಮಹಿಳಾ ನ್ಯಾಯವಾದಿಗಳ ಒಕ್ಕೂಟದ ಅಧ್ಯಕ್ಷೆ ಸಂಧ್ಯಾ ಬಿ. ಮಾದಿನೂರ, ಬಿಜೆಪಿ ಮುಖಂಡ ನವೀನ್‌ ಗುಣಗಣ್ಣನವರ, ಕಾನೂನು ಕಾಲೇಜುಗಳ ಪ್ರಾಧ್ಯಾಪಕರಾದ ಬಿ.ಎಸ್‌. ಹನಸಿ ಹಾಗೂ ಅಶ್ವಿನಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT