ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂಗಣ್ಣರಿಂದಾಗಿ ಜಯದ ಅಂತರ ಹೆಚ್ಚಲಿದೆ’

ಕಾಂಗ್ರೆಸ್‌ ಗೆಲುವಿನ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿಕೆ
Published 27 ಏಪ್ರಿಲ್ 2024, 15:27 IST
Last Updated 27 ಏಪ್ರಿಲ್ 2024, 15:27 IST
ಅಕ್ಷರ ಗಾತ್ರ

ಕುಷ್ಟಗಿ: ಮಾಜಿ ಸಂಸದ ಸಂಗಣ್ಣ ಕರಡಿ ಬರದಿದ್ದರೂ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವಿಗೆ ಯಾವ ಅಡ್ಡಿಯೂ ಇರುತ್ತಿರಲ್ಲ. ಆದರೆ ಅವರು ಬಂದಿದ್ದರಿಂದ ಪಕ್ಷಕ್ಕೆ ಒಂದಷ್ಟು ಶಕ್ತಿ ಬಂದಿದ್ದು ಗೆಲುವಿನ ಅಂತರ ಹೆಚ್ಚಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಏ.29ರಂದು ಪಟ್ಟಣಕ್ಕೆ ಆಗಮಿಸುತ್ತಿರುವ ಕಾರಣಕ್ಕೆ ಸಮಾವೇಶದ ಸ್ಥಳ ಪರಿಶೀಲನೆ ನಡೆಸಲು ಬಂದಿದ್ದ ಅವರು ಶನಿವಾರ ಇಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.

‘ಸಂಗಣ್ಣ ಯಾವುದೇ ಸ್ಥಾನಮಾನ ಅಥವಾ ಇತರೆ ಆಸೆ, ಆಮಿಷ ಅಥವಾ ಒಪ್ಪಂದದಿಂದ ಪಕ್ಷಕ್ಕೆ ಬಂದಿಲ್ಲ, ಅವರು ಹಿರಿಯ ರಾಜಕಾರಣಿಯಾಗಿದ್ದು ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದರಿಂದ ಬಿಜೆಪಿ ತ್ಯಜಿಸಿ ಬಂದಿದ್ದಾರೆ’ ಎಂದರು.

‘ಹಿಂದಿನ ಎರಡು ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿನ ಅಂತರ ದೊಡ್ಡದೇನೂ ಇರಲಿಲ್ಲ. ಈ ಬಾರಿ ಜಿಲ್ಲೆ ಸೇರಿ ರಾಜ್ಯದಾದ್ಯಂತ ಕಾಂಗ್ರೆಸ್‌ ಅಲೆ ಇದೆ. ಚುನಾವಣೆ ಗೆಲುವಿಗೆ ಪಕ್ಷ ತಮಗೆ ಯಾವುದೇ ಟಾಸ್ಕ್‌ ನೀಡಿಲ್ಲ, ಸಚಿವ ಸ್ಥಾನಕ್ಕೆ ಧಕ್ಕೆಯೂ ಇಲ್ಲ ಎಂದು ಸ್ಷಪ್ಟಪಡಿಸಿದರು.

ಮಾಧ್ಯಮದ ಮುಂದೆ ಬೆತ್ತಲು ಮಾಡಲಿ ಎಂದು ಶಾಸಕ ಜನಾರ್ದನ ರೆಡ್ಡಿ ಸವಾಲಿಗೆ ಪ್ರತಿಕ್ರಿಯಿಸಿದ ತಂಗಡಗಿ, ಕಾಲ ಬಂದಾಗ ಉತ್ತರಿಸುತ್ತೇನೆ ಎಂದಷ್ಟೇ ಹೇಳಿದರು. ಆದರೆ ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಮರೇಗೌಡ ಬಯ್ಯಾಪುರ ಸಂಗಣ್ಣ ಅವರನ್ನು ಬೆಂಬಲಿಸಿದ್ದರು ಎಂದು ಶಾಸಕ ದೊಡ್ಡನಗೌಡ, ಜನಾರ್ದನ ರೆಡ್ಡಿ ಹೇಳಿಕೆಗೆ ತಂಗಡಗಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ‘ಬಾಯಿ ಚಪಲಕ್ಕೆ ರೆಡ್ಡಿ ಏನೇನೋ ಮಾತನಾಡುತ್ತಿದ್ದಾರೆ, ಜಿಲ್ಲೆಯ ಸ್ಥಿತಿಗತಿ ಏನೂ ಗೊತ್ತಿಲ್ಲ, ಜಿಲ್ಲೆಗೆ ಅವರ ಕೊಡುಗೆಯೂ ಇಲ್ಲ. ಒಂದಷ್ಟು ಮತ ತರುವ ಶಕ್ತಿಯೂ ಇಲ್ಲದ ರೆಡ್ಡಿ ಬಿಜೆಪಿಗೆ ಬಂದಿದ್ದಕ್ಕೆ ನಮ್ಮ ತಲೆ ಏಕೆ ಕೆಡಬೇಕು’ ಎಂದು ತಿರುಗೇಟು ನೀಡಿದರು. ಅಲ್ಲದೆ ಸುಳ್ಳು ಹೇಳುವುದರಲ್ಲಿ ರೆಡ್ಡಿ ಪ್ರಧಾನಿ ನರೇಂದ್ರ ಮೋದಿಯವರನ್ನೂ ಮೀರಿಸುತ್ತಾರೆ ಎಂದು ಲೇವಡಿ ಮಾಡಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಮರೇಗೌಡ ಬಯ್ಯಾಪುರ, ಕಾಡಾ ಅಧ್ಯಕ್ಷ ಹಸನಸಾಬ್ ದೋಟಿಹಾಳ, ಮಾಜಿ ಶಾಸಕ ಬಸವರಾಜಪ್ಪ ಹಿಟ್ನಾಳ, ಮಾಲತಿ ನಾಯಕ, ಮೈನುದ್ದೀನ್‌ ಮುಲ್ಲಾ ಇತರರು ಹಾಜರಿದ್ದರು.

ಸಿದ್ದು ಸಿಎಂ: ತಂಗಡಗಿ ಸಮರ್ಥನೆ

ಚುನಾವಣೆ ನಂತರವೂ ಸಿದ್ದರಾಮಯ್ಯ ಪೂರ್ಣ ಅವಧಿಗೂ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಶಾಸಕ ಬಸವರಾಜ ರಾಯರಡ್ಡಿ ಮತ್ತು ತಮ್ಮ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿವರಾಜ ತಂಗಡಗಿ, ‘ಸಮರ್ಥ ನಾಯಕತ್ವ ಇರುವ ಸಿದ್ದರಾಮಯ್ಯ ಅವರ ಮೇಲಿನ ಅಭಿಮಾನದಿಂದ ಹಾಗೆ ಹೇಳಿರಬಹುದು’ ಎಂದು ಪರೋಕ್ಷವಾಗಿ ಸಮರ್ಥಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT