ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ ಲೋಕಸಭಾ ಕ್ಷೇತ್ರ | ಟಿಕೆಟ್‌ಗಿಲ್ಲ ಗಣನೆ, ಮತಕ್ಕೆ ಮಾತ್ರ ಪರಿಗಣನೆ

ರಾಷ್ಟ್ರೀಯ ಪಕ್ಷಗಳಿಂದ ಮಹಿಳಾ ಅಭ್ಯರ್ಥಿಗಳಿಗೆ ಲೋಕಸಭಾ ಚುನಾವಣೆಯಲ್ಲಿ ಸಿಗದ ಅವಕಾಶ
Published 30 ಮಾರ್ಚ್ 2024, 7:09 IST
Last Updated 30 ಮಾರ್ಚ್ 2024, 7:09 IST
ಅಕ್ಷರ ಗಾತ್ರ

ಕೊಪ್ಪಳ: ಲೋಕಸಭಾ ಚುನಾವಣೆ ಎದುರಿಸಲು ಸಜ್ಜಾಗಿರುವ ಕೊಪ್ಪಳ ಕ್ಷೇತ್ರದಲ್ಲಿ ಇಷ್ಟು ದಿನಗಳ ಕಾಲ ಟಿಕೆಟ್‌ ಗಿಟ್ಟಿಸಲು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ನಾನಾ ಕಸರತ್ತು ನಡೆಸಿದರು. ಟಿಕೆಟ್‌ ಘೋಷಣೆಯಾದ ಬಳಿಕವೂ ಇನ್ನೂ ಕೆಲವರು ಪ್ರಯತ್ನ ಪಡುತ್ತಿದ್ದಾರೆ. ಈ ಕ್ಷೇತ್ರದ ವ್ಯಾಪ್ತಿಯಲ್ಲಿ ಮಹಿಳಾ ಮತದಾರರೇ ನಿರ್ಣಯಕರಾಗಿದ್ದರೂ ಅವರನ್ನು ಮಾತ್ರ ಟಿಕೆಟ್ ವಿಚಾರದಲ್ಲಿ ಯಾವ ಪಕ್ಷಗಳೂ ಪರಿಗಣನೆಗೆ ತೆಗೆದುಕೊಂಡಿಲ್ಲ.

1952ರಿಂದ ಲೋಕಸಭಾ ಚುನಾವಣೆಗಳು ನಡೆದಿದ್ದು, ಕೊಪ್ಪಳ ಕ್ಷೇತ್ರ ವ್ಯಾಪ್ತಿಯಲ್ಲಿ ಕೊಪ್ಪಳ, ಗಂಗಾವತಿ, ಯಲಬುರ್ಗಾ, ಕನಕಗಿರಿ, ಕುಷ್ಟಗಿ, ಸಿಂಧನೂರು, ಮಸ್ಕಿ ಮತ್ತು ಸಿರಗುಪ್ಪ ವಿಧಾನಸಭಾ ಕ್ಷೇತ್ರಗಳಿವೆ. ಆದರೆ ಇದುವರೆಗಿನ ‘ಲೋಕ’ದ ಚುನಾವಣೆಗಳಲ್ಲಿ ಯಾವ ರಾಷ್ಟ್ರೀಯ ಪಕ್ಷಗಳೂ ಮಹಿಳೆಯರಿಗೆ ಆದ್ಯತೆ ನೀಡಿಲ್ಲ. ಒಟ್ಟು ಮತದಾರರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಮಹಿಳೆಯರೇ ಇದ್ದಾರೆ. ಆದರೂ ಅವರಿಗೆ ಟಿಕೆಟ್‌ಗೆ ಪಕ್ಷಗಳು ಪರಿಗಣಿಸುತ್ತಿಲ್ಲ. ಮತಕ್ಕೆ ಮಾತ್ರ ಮಹಿಳೆಯೇ ಮುಂಚೂಣಿಯಲ್ಲಿರಬೇಕು ಎಂದು ಬಯಸುತ್ತಿವೆ.

ಸರ್ಕಾರಗಳು ತಮ್ಮ ಯೋಜನೆಗಳನ್ನು ಜನರಿಗೆ ತಲುಪಿಸಲು ಅನೇಕ ತಂಡಗಳನ್ನು ರಚಿಸಿವೆ. ಅದರಲ್ಲಿ ಮಹಿಳೆಗೆ ಅವಕಾಶ ಕೊಡಲಾಗಿದೆ. ಪ್ರತಿ ರಾಷ್ಟ್ರೀಯ ಪಕ್ಷದಲ್ಲಿಯೂ ಪ್ರತ್ಯೇಕವಾಗಿ ಮಹಿಳಾ ಘಟಕವಿದೆ. ಪದಾಧಿಕಾರಿಗಳೂ ಇದ್ದಾರೆ. ಆಡಳಿತಾರೂಢ ಪಕ್ಷಗಳ ವಿರುದ್ಧ ಹೋರಾಟ ಹಾಗೂ ಪ್ರತಿಭಟನೆಯಂಥ ಸಂದರ್ಭಗಳಲ್ಲಿಯೂ ಮಹಿಳೆಯರು ಮುಂಚೂಣಿಯಲ್ಲಿದ್ದುಕೊಂಡು ಹೋರಾಟ ಮಾಡುತ್ತಾರೆ. ಟಿಕೆಟ್‌ ವಿಚಾರದಲ್ಲಿ ದೂರವೇ ಇಡಲಾಗಿದೆ. ವಿಪರ್ಯಾಸವೆಂದರೆ ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಯಾವ ಮಹಿಳೆ ಕೂಡ ‘ನಾನೂ ಆಕಾಂಕ್ಷಿ’ ಎಂದು ಗಟ್ಟಿ ಧ್ವನಿಯಿಂದ ಹೇಳಿಲ್ಲ.

ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳಲ್ಲಿ ಹಿಂದಿನ ವಿಧಾನಸಭಾ ಚುನಾವಣೆಗಳಲ್ಲಿ ಹಲವು ಮಹಿಳೆಯರು ಸ್ಪರ್ಧೆ ಮಾಡಿದ್ದಾರೆ. 1972ರಲ್ಲಿ ಕುಷ್ಟಗಿ ಕ್ಷೇತ್ರದಿಂದ ಬಸವರಾಜೇಶ್ವರಿ, ಯಲಬುರ್ಗಾ ಕ್ಷೇತ್ರದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ 1994ರಲ್ಲಿ ಜಯಶ್ರೀ ಸುಭಾಷಚಂದ್ರ, 1994ರಲ್ಲಿ ಕಾಶಮ್ಮ ಶಂಕರಗೌಡ ಕೊಪ್ಪಳ ಕ್ಷೇತ್ರದಿಂದ ಬಿಜೆಪಿಯಿಂದ ಕಣಕ್ಕಿಳಿದಿದ್ದರು.

1952ರಲ್ಲಿ ಆಗಿನ ಹೈದರಾಬಾದ್ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಿಂದ ಮಹಾದೇವಮ್ಮ ಬಸವನಗೌಡ ಗೆಲುವು ಪಡೆದಿದ್ದರು. 1956ರಲ್ಲಿ ಭಾಷಾವಾರು ಪ್ರಾಂತ್ಯ ರಚನೆಯಾದ ಬಳಿಕ ಕರ್ನಾಟಕದ ವಿಧಾನಸಭೆಗೆ ಸೇರ್ಪಡೆಯಾದವು. ಅದಾದ ಬಳಿಕ ನಡೆದ ಯಾವ ವಿಧಾನಸಭಾ ಚುನಾವಣೆಗಳಲ್ಲಿಯೂ ಮಹಿಳೆಗೆ ಶಾಸಕಿಯಾಗುವ ಯೋಗ ಬಂದಿಲ್ಲ.  ಹಿಂದಿನ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಮಂಜುಳಾ ಕರಡಿ ಕಣಕ್ಕಿಳಿದಿದ್ದರು.

ವಿಧಾನಸಭಾ ಚುನಾವಣೆಗಳಲ್ಲಿ ರಾಷ್ಟ್ರೀಯ ಪಕ್ಷಗಳಿಂದ ಸ್ಪರ್ಧೆ ಮಾಡಿದ ಒಂದಷ್ಟು ಹೆಸರುಗಳು ಕಂಡುಬಂದರೂ ಲೋಕಸಭಾದಲ್ಲಿ ಇದಕ್ಕೆ ಅವಕಾಶವೇ ಇಲ್ಲದಂತಾಗಿದೆ. 1996ರಲ್ಲಿ ಪಕ್ಷೇತರರಾಗಿ ಸೌರಮ್ಯ ಮಳಗಿ, 2009ರಲ್ಲಿ ಪಕ್ಷೇತರರಾಗಿ ಗೌಸಿಯಾ ಬೇಗಂ, ಮಾರೆಮ್ಮ ಯಂಕಪ್ಪ ಸ್ಪರ್ಧೆ ಮಾಡಿದ್ದರೂ ಫಲಿತಾಂಶದ ಮೇಲೆ ಪರಿಣಾಮ ಬೀರುವಷ್ಟು ಮತಗಳನ್ನು ಪಡೆದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT