ಕೊಪ್ಪಳ: ಜಿಲ್ಲೆಯ ಜನರ ಜೀವನಾಡಿ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ಗೇಟ್ ಮುರಿದು ಹೋಗಿ ರೈತರಲ್ಲಿ ಮೂಡಿದ್ದ ಆತಂಕ ದೂರವಾಗಿದೆ. ಗೇಟ್ ದುರಸ್ತಿ ಬಳಿಕ ಬಂದ ಉತ್ತಮ ಒಳಹರಿವಿನಿಂದಾಗಿ ಜಲಾಶಯ ತುಂಬುವ ಹಂತದಲ್ಲಿದೆ. ನೀರಿಲ್ಲದೆ ಬಣಗುಟ್ಟಿದ್ದ ಜಲಾಶಯಕ್ಕೆ ಈಗ ಜೀವ ಕಳೆ ಬಂದಿದೆ.
ಕಳೆದ ವರ್ಷ ಮಳೆಯ ಕೊರತೆ ಕಾಡಿದ್ದರಿಂದ ಅಣೆಕಟ್ಟು ಭರ್ತಿಯಾಗಿರಲಿಲ್ಲ. ಈ ಬಾರಿ ಶಿವಮೊಗ್ಗ ಜಿಲ್ಲೆ ಹಾಗೂ ಮಲೆನಾಡಿನ ಭಾಗದಲ್ಲಿ ಸುರಿದ ಉತ್ತಮ ಮಳೆಯಿಂದಾಗಿ ಬೇಗನೆ ತುಂಗಭದ್ರಾ ಭರ್ತಿಯಾಗಿ ರೈತರ ಮೊಗದಲ್ಲಿ ಸಂಭ್ರಮ ನಲಿದಾಡುವಂತೆ ಮಾಡಿತ್ತು. ಆದರೆ, ನೀರಿನ ರಭಸಕ್ಕೆ ಆಗಸ್ಟ್ 10ರಂದು ಕ್ರಸ್ಟ್‌ಗೇಟ್ ಮುರಿದು, ಕೊಚ್ಚಿಕೊಂಡು ಹೋಗಿತ್ತು. ಐದು ದಿನಗಳ ನಿರಂತರ ಕಾರ್ಯಾಚರಣೆ ಬಳಿಕ ಹೊಸ ಗೇಟ್ ಅಳವಡಿಸಲಾಗಿತ್ತು.
ಈ ಬಾರಿ ಉತ್ತಮ ಮಳೆಯಾಗಿದ್ದರಿಂದ ಜಲಾಶಯ ಭರ್ತಿಯಾಗಿತ್ತು. 105.78 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದಲ್ಲಿ ಜಲಾಶಯದ ಗೇಟ್ ಅಳವಡಿಕೆ ಕಾಮಗಾರಿ ಪೂರ್ಣಗೊಂಡಾಗ 71 ಟಿಎಂಸಿ ಅಡಿ ನೀರು ಉಳಿದಿತ್ತು. ಈಗ ಜಲಾಶಯ ಭರ್ತಿಯಾಗುತ್ತಿರುವ ಕಾರಣ ಒಂದು ಬೆಳೆಗೆ ನೀರು ಸಿಗುವುದು ನಿಶ್ಚಿತವಾಗಿದೆ. ಈಗ ಇದೇ ರೀತಿಯ ಒಳಹರಿವು ಮುಂದಿನ ದಿನಗಳಲ್ಲಿಯೂ ಮುಂದುವರಿದರೆ ಎರಡನೇ ಬೆಳೆಗೂ ನೀರು ಲಭಿಸುವ ಆಶಾವಾದ ಮೂಡಿದೆ.
ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳು ತುಂಗಭದ್ರಾ ಜಲಾಶಯದ ನೀರು ಹಂಚಿಕೆಯ ಅಧಿಕಾರ ಹೊಂದಿದ್ದು, ರಾಜ್ಯದ ಕೊಪ್ಪಳ, ಬಳ್ಳಾರಿ, ವಿಜಯನಗರ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಭತ್ತ ಬೆಳೆಯಲು ಈ ನೀರು ಅನುಕೂಲವಾಗಿದೆ. ಜಿಲ್ಲೆಯ ಕೊಪ್ಪಳ, ಗಂಗಾವತಿ ಹಾಗೂ ಕಾರಟಗಿ ತಾಲ್ಲೂಕುಗಳ ’ಅನ್ನದಾತರಿಗೆ’ ಇದೇ ನೀರು ಆಧಾರವಾಗಿದೆ.
ಸೋಮವಾರದ ವೇಳೆಗೆ 98.023 ಟಿಎಂಸಿ ಅಡಿ ನೀರು ಜಲಾಶಯದಲ್ಲಿ ಸಂಗ್ರಹವಿದ್ದು, 30,370 ಕ್ಯುಸೆಕ್ ಒಳಹರಿವು ಇದೆ. ಮಲೆನಾಡಿನ ಭಾಗದಲ್ಲಿ ಮುಂದಿನ ದಿನಗಳಲ್ಲಿಯೂ ಮಳೆ ವಾತಾವರಣವಿರುವ ಕಾರಣ ಜಲಾಶಯ ಸಂಪೂರ್ಣವಾಗಿ ಭರ್ತಿಯಾದರೆ ರೈತರಿಗೆ ಮತ್ತಷ್ಟು ಅನುಕೂಲವಾಗಲಿದೆ.
ನಿತ್ಯ ಒಳಹರಿವು ಬರುತ್ತಿರುವ ಕಾರಣ ಜಲಾಶಯ ಮೈದುಂಬಿದ್ದು ಜನರ ಗಮನ ಸೆಳೆಯುವಂತಿದೆ. ಜನ ಮುನಿರಾಬಾದ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುವ ಸಂಭ್ರಮ ಕಂಡುಬಂದಿತು.
‘ಗೇಟ್ ಮುರಿದಾಗ ಒಂದು ಬೆಳೆಗೆ ನೀರಿನ ಕೊರತೆ ಆಗುವುದಿಲ್ಲ ಎಂದು ಹೇಳಿದ್ದೆವು. ಈಗಲೂ ಅದೇ ಮಾತನ್ನು ಹೇಳುತ್ತಿರುವೆ. ಉತ್ತಮ ಒಳಹರಿವು ಬಂದು ಜಲಾಶಯ ತುಂಬುವ ಸಮೀಪದಲ್ಲಿದೆ. ಮುಂಬರುವ ದಿನಗಳಲ್ಲಿಯೂ ಇದೇ ರೀತಿಯ ಒಳಹರಿವು ಇದ್ದರೆ ಎರಡನೇ ಬೆಳೆಗೂ ನೀರು ಲಭಿಸುತ್ತದೆ’ ಎಂದು ಮುನಿರಾಬಾದ್ ಕಾಡಾ ಅಧ್ಯಕ್ಷ ಹಸನಸಾಬ್ ದೋಟಿಹಾಳ್ ತಿಳಿಸಿದರು.
ಮುನಿರಾಬಾದ್ ಸಮೀಪದಲ್ಲಿಯೇ ಭೂಮಿ ಹೊಂದಿರುವ ರೈತ ಯೂಹಾನ್ ‘ಜಲಾಶಯ ಮತ್ತೆ ಭರ್ತಿಯಾಗುತ್ತಿರುವುದು ಖುಷಿ ನೀಡಿದೆ. ಗೇಟ್ ಒಡೆದು ಹೋದಾಗ ಆಗಿದ್ದ ಆತಂಕ ಈಗಿಲ್ಲ. ಒಂದು ಬೆಳೆಗಂತೂ ನೀರು ಸಿಕ್ಕೇ ಸಿಗುತ್ತದೆ’ ಎಂದರು.
ನಮ್ಮ ನಿರೀಕ್ಷೆಯಂತೆ ತುಂಗಭದ್ರಾ ಜಲಾಶಯ ಭರ್ತಿಯಾಗುತ್ತಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಬಾಗಿನ ಅರ್ಪಿಸಲು ಆಹ್ವಾನ ನೀಡಲಿದ್ದೇವೆ.ಹಸನಸಾಬ್ ದೋಟಿಯಾಳ್, ಮುನಿರಾಬಾದ್ ಕಾಡಾ ಅಧ್ಯಕ್ಷ
Cut-off box - ಹಿಂದೆ ಆಗಸ್ಟ್ 21ರಿಂದ 31ರ ವರೆಗೆ ಬಂದ ಒಳಹರಿವು ವರ್ಷ;ನೀರು (ಟಿಎಂಸಿ ಅಡಿಗಳಲ್ಲಿ) 2013;25.267 2014;30.870 2015;6.366 2016;6.940 2017;15.471 2018;44.377 2019;14.211 2020;22.232 2021;11.652
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.