ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡಾನ್:ವಿಮಾನ ಹಾರಾಟಕ್ಕೆ ಗರಿಗೆದರಿದ ಕನಸು

ಕೊಪ್ಪಳ ತಾಲ್ಲೂಕಿನ ಟಣಕನಕಲ್ಲ ಗ್ರಾಮದ ಬಳಿ ಜಮೀನು ಗುರುತು
Last Updated 23 ಸೆಪ್ಟೆಂಬರ್ 2021, 15:08 IST
ಅಕ್ಷರ ಗಾತ್ರ

ಕೊಪ್ಪಳ: ಜನಸಾಮಾನ್ಯರೂ ವಿಮಾನದಲ್ಲಿ ಹಾರಾಟ ನಡೆಸಬೇಕು ಎಂಬ ಆಶಯದೊಂದಿಗೆ ಆರಂಭವಾದ ಉಡಾನ್‌ ಯೋಜನೆಯು ಜಿಲ್ಲೆಯಲ್ಲಿ ಐದಾರು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಈಗ ಜಮೀನು ಗುರುತಿಸಿ ಪ್ರಸ್ತಾವ ಸಲ್ಲಿಸಿದ್ದು, ತಾಂತ್ರಿಕ ತಂಡದ ಒಪ್ಪಿಗೆ ನೀಡಿದರೆ ಯೋಜನೆ ಸಾಕಾರಕ್ಕೆ ಮುನ್ನುಡಿ ಬರೆಯಲಿದೆ.

ಉಡಾನ್‌ ಯೋಜನೆಯಡಿ ವಿಮಾನ ನಿಲ್ದಾಣ ಮಂಜೂರಿಯಾಗಿ ನಾಲ್ಕು ವರ್ಷ ಕಳೆದರೂ ಯಾವುದೇ ಪ್ರಗತಿ ಕಂಡಿಲ್ಲ. ಈಗ ತಾಲ್ಲೂಕಿನಟಣಕನಕಲ್ ಗ್ರಾಮದ ಬಳಿ ಜಿಲ್ಲಾಡಳಿತ ಹೊಸ ವಿಮಾನ ನಿಲ್ದಾಣಕ್ಕೆ 605 ಎಕರೆ ಜಮೀನು ಗುರುತಿಸಿದೆ. ಈ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಜಿಲ್ಲಾಡಳಿತ ಕಳೆದ ತಿಂಗಳು ಬೆಂಗಳೂರಿನಲ್ಲಿ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದೆ. ಇದರ ಜೊತೆಗೆ ಈಗಾಗಲೇ ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆಗೆ ಪ್ರಸ್ತಾವ ಕೂಡಾ ಸಲ್ಲಿಸಿದೆ.

ಮುಂದಿನ ವಾರ ಈ ಕುರಿತು ಸಂಬಂಧಿಸಿದ ಇಲಾಖೆ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಯಲಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಕೊಪ್ಪಳಕ್ಕೆ ವಿಮಾನ ಸೇವೆಯ ಕನಸು ಮುಂಬರುವ ವರ್ಷಗಳಲ್ಲಿ ನನಸಾಗಲಿದೆ.

ನಾಗರಿಕ ವಿಮಾನಯಾನ ಮಹಾನಿರ್ದೇಶಕರು (ಡಿಜಿಸಿಆರ್) ಸ್ಥಳ ಪರಿಶೀಲಿಸಿ, ವಿಮಾನ ಹಾರಾಟಕ್ಕೆ ಸೂಕ್ತ ಜಾಗ ಎಂದು ಸಮ್ಮತಿ ನೀಡಬೇಕಾಗಿದೆ. ಇದಾದ ಬಳಿಕ ಗುರುತಿಸಿರುವ ಭೂಮಿ ಸ್ವಾಧೀನ ಕಾರ್ಯ ನಡೆಯಲಿದೆ. ಇದಕ್ಕಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದಲೂ ಅನುದಾನ ದೊರಕಲಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಸಹಯೋಗದಲ್ಲಿ ನೂತನ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ ಎನ್ನುತ್ತಾರೆ ಅಧಿಕಾರಿಗಳು.

ಸತತ ಪ್ರಯತ್ನ: ಸಂಸದ ಸಂಗಣ್ಣ ಕರಡಿ ಅವರು ಜಿಲ್ಲೆಗೆ ವಿಮಾನ ನಿಲ್ದಾಣ ತರಬೇಕು ಎಂಬ ಸತತ ಪ್ರಯತ್ನದಲ್ಲಿ ತೊಡಗಿದ್ದಾರೆ. 605ಎಕರೆ ಸ್ಥಳಕ್ಕೆ ಸಂಬಂಧಿಸಿದ ಇಲಾಖೆ, ಸರ್ಕಾರ ಒಪ್ಪಿದರೆ ಹುಬ್ಬಳ್ಳಿ, ಮೈಸೂರು, ಕಲ್ಬುರ್ಗಿ, ಶಿವಮೊಗ್ಗ, ವಿಜಯಪುರ ಮಹಾನಗರದಂತೆ ಸುಸಜ್ಜಿತ ನೂತನ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ.

ಕೈಗಾರಿಕೆ, ಪ್ರವಾಸೋದ್ಯಮ, ಆಟಿಕೆ ಕ್ಲಸ್ಟರ್ ಸೇರಿ ವಿವಿಧ ರೀತಿಯಲ್ಲಿ ಅಭಿವೃದ್ಧಿ ಪಥದಲ್ಲಿ ಸಾಗಿರುವ ಕೊಪ್ಪಳಕ್ಕೆ ವಿಮಾನ ನಿಲ್ದಾಣ ಅಗತ್ಯ ಇದೆ. ಜಿಲ್ಲೆಯಲ್ಲಿ ನೂರಾರು ವಿವಿಧ ರೀತಿಯ ಕೈಗಾರಿಕೆಗಳು ಇವೆ. ಐತಿಹಾಸಿಕ ಆನೆಗೊಂದಿ, ಅಂಜನಾದ್ರಿ ಪರ್ವತ, ಹುಲಿಗೆಮ್ಮ ದೇವಸ್ಥಾನ, ಗವಿಸಿದ್ದೇಶ್ವರ ಮಠ, ತುಂಗಭದ್ರಾ ಜಲಾಶಯ, ಹಂಪಿ ಸೇರಿ ಹಲವು ಪ್ರವಾಸಿ ತಾಣಗಳು ಇವೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಿದೆ. ಇದಲ್ಲದೆ ಜಿಲ್ಲೆಯ ತೋಟಗಾರಿಕೆ ಬೆಳೆಗಳಾದ ಪೇರಲ, ಮಾವು, ದ್ರಾಕ್ಷಿ, ದಾಳಿಂಬೆ, ಭತ್ತ ಸೇರಿದಂತೆ ಅನೇಕ ವಾಣಿಜ್ಯ ಬೆಳೆಗಳ ರಫ್ತಿಗೂ ವಿಮಾನ ಸೇವೆ ಅನುಕೂಲವಾಗಲಿದೆ.

ಖಾಸಗಿ ನಿಲ್ದಾಣ ಬಳಕೆಗೆ ದುಬಾರಿ ಷರತ್ತು

ತಾಲ್ಲೂಕಿನಬಸಾಪುರ ಬಳಿ ಬಲ್ಡೋಟಾ ಕಂಪನಿಗೆ ಸೇರಿದ ಖಾಸಗಿ ವಿಮಾನ ನಿಲ್ದಾಣ ಇದೆ. ಇದೇ ನಿಲ್ದಾಣ ಬಳಸಿಕೊಳ್ಳುವ ಚಿಂತನೆ ಜಿಲ್ಲಾಡಳಿತದ ಮುಂದೆ ಇತ್ತು. ಆದರೆ ಅತಿಯಾದ ಷರತ್ತುಗಳನ್ನು ಈ ಕಂಪನಿ ಮುಂದಿಟ್ಟ ಕಾರಣ ಆ ನಿಲ್ದಾಣ ಬಳಸಿಕೊಳ್ಳದೇ ಸರ್ಕಾರದಿಂದಲೇ ನಿರ್ಮಿಸಲು ಮುಂದಾಗಿದೆ.

ನಿಲ್ದಾಣದ ನಿರ್ವಹಣೆಗೆಹಣ ನೀಡುವುದು, ವಿಮಾನ ಇಳಿಯಲು ಬಾಡಿಗೆ, ಸಂಚರಿಸುವ ಪ್ರತಿ ಪ್ರಯಾಣಿಕರಿಗೂ ಇಂತಿಷ್ಟು ಹಣ ನೀಡಬೇಕು ಸೇರಿದಂತೆ ಕಂಪನಿಯು ಅನೇಕ ಷರತ್ತುಗಳನ್ನು ವಿಧಿಸಿತ್ತು. ಇದು ಸರ್ಕಾರಕ್ಕೆ ದುಬಾರಿಯಾಗುವ ಕಾರಣಕ್ಕೆ ಆ ಪ್ರಸ್ತಾವ ಕೈ ಬಿಡಲಾಗಿದೆ.

**

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಉಡಾನ್‌ ಯೋಜನೆ ಅನುಷ್ಠಾನಕ್ಕೆ ಟಣಕನಕಲ್ಲ ಗ್ರಾಮದಲ್ಲಿ ನೂತನ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ
ಸಂಗಣ್ಣ ಕರಡಿ, ಸಂಸದ ಕೊಪ್ಪಳ

ವಿಮಾನ ನಿಲ್ದಾಣ ನಿರ್ಮಾಣ ಕುರಿತು ಐಡಿಡಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಡಿಜಿಸಿಆರ್ ತಂಡ ಸ್ಥಳ ಪರಿಶೀಲನೆ ನಡೆಸಿ ಸರ್ಕಾರ ಒಪ್ಪಿಗೆ ಸೂಚಿಸಿದರೆ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಲಿದೆ
ವಿಕಾಸ್ ಕಿಶೋರ್, ಜಿಲ್ಲಾಧಿಕಾರಿ, ಕೊಪ್ಪಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT