ಮಂಗಳವಾರ, ಡಿಸೆಂಬರ್ 7, 2021
24 °C
ಸಮಾಜದ ಮುಖಂಡರ ಸಭೆಯಲ್ಲಿ ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿಕೆ

ಫೆ. 8, 9ರಂದು ವಾಲ್ಮೀಕಿ ಜಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನಕಗಿರಿ: ಫೆ. 8 ಮತ್ತು 9ರಂದು ಹರಿಹರದ ರಾಜನಳ್ಳಿಯಲ್ಲಿ ವಾಲ್ಮೀಕಿ ಜಾತ್ರೆ ನಡೆಯಲಿದೆ. ಜಾತ್ರೆಯ ಯಶಸ್ವಿಗಾಗಿ ವಾಲ್ಮೀಕಿ ಸಮಾಜದ ಬಾಂಧವರು ಸಹಾಯ, ಸಹಕಾರ ನೀಡಬೇಕು ಎಂದು ಹರಿಹರದ ರಾಜನಳ್ಳಿಯ ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ತಿಳಿಸಿದರು.

ಇಲ್ಲಿನ ತೊಂಡೆತೇವರಪ್ಪ ದೇವಸ್ಥಾನ ಸಮುದಾಯ ಭವನದಲ್ಲಿ ಬುಧವಾರ ವಾಲ್ಮೀಕಿ ಜಾತ್ರೆಯ ನಿಮಿತ್ತ ನಡೆದ ನಾಯಕ ಸಮಾಜದ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ವಾಲ್ಮೀಕಿ ಸಮಾಜದವರು ಹಿಂದುಳಿದಿದ್ದಾರೆ, ಈಗಿನ ಜನಸಂಖ್ಯೆಗೆ ಅನುಗುಣವಾಗಿ ಶೇ 3ರಷ್ಟು ಮೀಸಲಾತಿ ಸಾಕಾಗುವುದಿಲ್ಲ. ಶಿಕ್ಷಣ, ಸಂಘಟನೆ ಹಾಗೂ ಹೋರಾಟದ ಮೂಲಕ ಸಂವಿಧಾನ ಬದ್ಧವಾದ ಮೀಸಲಾತಿಯನ್ನು ಪಡೆದುಕೊಳ್ಳಬೇಕು’ ಎಂದು ಹೇಳಿದರು.

ಸಮಾಜದ ಜಾಗೃತಿಗಾಗಿ ವಾಲ್ಮೀಕಿ ಜಾತ್ರೆ ನಡೆಸಲಾಗುತ್ತಿದೆ, ರಾಜ್ಯದಲ್ಲಿ ನಾಲ್ಕನೆಯ ದೊಡ್ಡ ಜನಸಂಖ್ಯೆ ಹೊಂದಿರುವ ವಾಲ್ಮೀಕಿ ನಾಯಕ ಸಮಾಜದವರು ಇಲ್ಲಿಯವರೆಗೆ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿಲ್ಲ. ಪರಿಶಿಷ್ಟ ಪಂಗಡದ ಮೀಸಲಾತಿ ಸೌಲಭ್ಯದಿಂದ ಆಯ್ಕೆಯಾದ ಎಲ್ಲ ಶಾಸಕರು ಒಂದೆಡೆ ಕುಳಿತು ಮೀಸಲಾತಿ ಹೆಚ್ಚಳ ಮಾಡುವ ಕುರಿತು ಚಿಂತನೆ ನಡೆಸಿಲ್ಲ ಎಂದು ವಿಷಾದಿಸಿದರು.

‘ಯಾವುದೇ ಸರ್ಕಾರ ಇರಲಿ ಮೀಸಲಾತಿ ಹೆಚ್ಚಳವಾಗುವವರೆಗೂ ಬಿಡುವುದಿಲ್ಲ’ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹನುಮೇಶ ನಾಯಕ ಮಾತನಾಡಿ ‘ಶಿಕ್ಷಣದಿಂದ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯವಿದೆ. ಈ ನಿಟ್ಟಿನಲ್ಲಿ ಸಮಾಜದವರು ಶಿಕ್ಷಣಕ್ಕೆ ಒತ್ತು ನೀಡಬೇಕು. ಮೀಸಲಾತಿ ಹೆಚ್ಚಳದ ಹೋರಾಟದಲ್ಲಿ ಒಗ್ಗಟ್ಟು ಪ್ರದರ್ಶನ ಮಾಡಬೇಕು’ ಎಂದರು.

ವಾಲ್ಮೀಕಿ ಸಮಾಜದ ಅಧ್ಯಕ್ಷ ನಾಗೇಶ ಮಲ್ಲಾಪುರ, ಮಹಾಸಭಾದ ತಾಲ್ಲೂಕು ಘಟಕದ ಶರಣಪ್ಪ ಸೋಮಸಾಗರ , ಗ್ರಾಮ ಪಂಚಾಯಿತಿ ಸದಸ್ಯರಾದ ಬೆಟ್ಟಪ್ಪ ಜೀರಾಳ, ಪಂಪಾಪತಿ ತರ್ಲಕಟ್ಟಿ ಪ್ರಮುಖರಾದ ಶಿವಮೂರ್ತೆಪ್ಪ ಬಸರಿಹಾಳ, ನರಸಪ್ಪ ಪೂಜಾರ, ಶರಣೆಗೌಡ ಹುಲಸನಹಟ್ಟಿ, ವೀರಬಸನಗೌಡ, ಮಾರುತಿ ತೋಟಗಂಟಿ, ರಾಮನಗೌಡ ಬುನ್ನಟ್ಟಿ, ಈಶಪ್ಪ ಹೊಸ್ಗೇರ, ಮುದಿಯಪ್ಪ ಖ್ಯಾಡೆದ , ಗ್ಯಾನಪ್ಪ ಗಾಣದಾಳ, ಶೇಖರಗೌಡ ಪಾಟೀಲ, ಹುಲಿಗೆಮ್ಮ ನಾಯಕ, ರಂಗಪ್ಪ ಕೊರಗಟಗಿ, ಮಂಜುನಾಥ ಹೊಸಳ್ಳಿ, ಮಂಜುನಾಥ ನಾಯಕ ಇದ್ದರು.

‘ಮೀಸಲಾತಿ: ಹೋರಾಟ ಅನಿವಾರ್ಯ’

ಕನಕಗಿರಿ: ‘ಪರಿಶಿಷ್ಟ ಪಂಗಡಕ್ಕೆ ಶೇ 7.5ರಷ್ಟು ಮೀಸಲಾತಿ ಕೊಡುವ ವಿಷಯದಲ್ಲಿ ರಾಜ್ಯದ ಬಿಜೆಪಿ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ. ಮಾತಿಗೆ ತಕ್ಕಂತೆ ನಡೆದುಕೊಳ್ಳುತ್ತಿಲ್ಲ’ ಎಂದು ಹರಿಹರದ ರಾಜನಳ್ಳಿಯ ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಆರೋಪಿಸಿದರು.

ಇಲ್ಲಿನ ತೊಂಡೆತೇವರಪ್ಪ ದೇವಸ್ಥಾನದ ಸಮುದಾಯ ಭವನದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಾಲ್ಮೀಕಿ ಸಮಾಜದಲ್ಲಿ ಒಗ್ಗಟ್ಟು ಇಲ್ಲ ಎಂಬ ಭಾವನೆ ಮೂಡಿದೆ. ಸ್ವಾಭಿಮಾನಕ್ಕೆ ಧಕ್ಕೆಯಾದಾಗ, ಸಮಾಜ ಬಾಂಧವರು ಪಕ್ಷ, ಪಂಗಡವೆಂದು ಎಣಿಸದೆ ಒಂದಾಗಿ ಹೋರಾಟ ನಡೆಸಬೇಕು’ ಎಂದರು.

‘ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಉಪ ಸಮಿತಿ ರಚಿಸಲಾಗಿದೆ. ಬಸವರಾಜ ಬೊಮ್ಮಾಯಿ ಅವರೂ ಸದಸ್ಯರಾಗಿದ್ದರು. ಈಗ ಅವರೇ ಮುಖ್ಯಮಂತ್ರಿಯಾಗಿರುವ ಕಾರಣ ಉತ್ತಮ ಸಂದೇಶ ನೀಡುವ ನಿರೀಕ್ಷೆ ಇದೆ’ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹನುಮೇಶ ನಾಯಕ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ವೆಂಕನಗೌಡ ಪಾಟೀಲ, ಶರಣಪ್ಪ ಸೋಮಸಾಗರ ಮತ್ತು ಶರಣೆಗೌಡ ಪಾಟೀಲ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.