ಸೋಮವಾರ, ಸೆಪ್ಟೆಂಬರ್ 27, 2021
21 °C
ಪುಣ್ಯಾರಾಧನೆ ಸ್ಮರಣೋತ್ಸವ ಕಾರ್ಯಕ್ರಮ

ಗೋರಂಟ್ಲಿ ಪರಿಪೂರ್ಣತೆಯ ವಿಶಿಷ್ಟ ವ್ಯಕ್ತಿತ್ವ: ಗವಿಸಿದ್ಧೇಶ್ವರ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ’ಹಿರಿಯ ಹೋರಾಟಗಾರ ವಿಠ್ಠಪ್ಪ ಗೋರಂಟ್ಲಿ ಅವರು ತಮ್ಮ ಬದುಕಿನುದ್ದಕ್ಕೂ ಎಲ್ಲ ರಂಗಗಳಲ್ಲಿ ತೊಡಗಿಸಿಕೊಂಡವರಾಗಿದ್ದರು. ಎಲ್ಲದರಲ್ಲೂ ಪರಿಪೂರ್ಣತೆ ಹೊಂದಿದ್ದರು. ಅಧ್ಯಾತ್ಮ ಸಾಧನೆಯಲ್ಲೂ ಪರಿಪೂರ್ಣತೆ ಹೊಂದಿದ್ದ ಅಪರೂಪದ ಹೋರಾಟಗಾರರಾಗಿದ್ದರು‘ ಎಂದು ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ಇತ್ತೀಚೆಗೆ ನಿಧನರಾದ ಭಾಗ್ಯನಗರದ ಹಿರಿಯ ಸಾಹಿತಿ, ಪತ್ರಕರ್ತ, ಹೋರಾಟಗಾರ ಅನುಭಾವಿ ವಿಠ್ಠಪ್ಪ ಗೋರಂಟ್ಲಿ ಅವರ ಪುಣ್ಯಾರಾಧನೆ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

’ಇಷ್ಟು ವರ್ಷಗಳ ಕಾಲ ಸದಾನಂದ ಜ್ಞಾನಯೋಗಾಶ್ರಮದಲ್ಲಿ ಸತ್ಸಂಗ ಪರಂಪರೆಯನ್ನು ಗೋರಂಟ್ಲಿ ಮುನ್ನಡೆಸಿಕೊಂಡು ಬಂದಿದ್ದಾರೆ. ಅದು ಇಲ್ಲಿಗೆ ನಿಲ್ಲಬಾರದು. ನಿರಂತರವಾಗಿ ಮುಂದುವರೆಯಬೇಕು. ಬದುಕಿನಲ್ಲಿ ಇವತ್ತು ಇದ್ದದ್ದು ನಾಳೆ ಇರುವುದಿಲ್ಲ. ಬದಲಾವಣೆ ನಿರಂತರ. ಕಂಡದ್ದು ಕಾಣೆಯಾಗುತ್ತೆ, ಕಾಣದ್ದು ಯಾವತ್ತೂ ಇರುತ್ತೆ ಅದು ಶಾಶ್ವತ‘ ಎಂದು ಹೇಳಿದರು.

ಸದಾನಂದ ಜ್ಞಾನಯೋಗಾಶ್ರಮದಲ್ಲಿ ನಿರ್ಮಿಸಿರುವ ಗದ್ದುಗೆಗೆ ಶ್ರೀಗವಿಸಿದ್ಧೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಪೂಜೆ ಸಲ್ಲಿಸಲಾಯಿತು.

ಹಿರಿಯ ಅನುಭಾವಿ ಸಾಧಕ ಚಂದ್ರಾಮಪ್ಪ ಕಣಗಾಲ್ ಮಾತನಾಡಿ, ‘ವಿಠ್ಠಪ್ಪನವರು ಜ್ಞಾನಯೋಗ ಮಾರ್ಗದ ಸಾಧಕರಾಗಿದ್ದರು. ಸದಾನಂದ ಯೋಗಿಗಳ ಮಾರ್ಗದಲ್ಲಿ ಅವರು ವೇದ, ಉಪನಿಷತ್ತುಗಳನ್ನು ಆಳವಾಗಿ ಅಧ್ಯಯನ ಮಾಡಿ ಅವುಗಳನ್ನು ಗುರುಮುಖೇನವಾಗಿ ಗ್ರಹಿಸಿದ್ದರು. ನಿರಂತರವಾಗಿ ಸತ್ಸಂಗಗಳನ್ನು ನಡೆಸುವ ಮೂಲಕ ತತ್ವ, ಸಾಮರಸ್ಯಪೂರ್ಣವಾದ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿದ್ದರು. ವಿಠ್ಠಪ್ಪನವರು ಭೌತಿಕವಾಗಿ ಅಗಲಿದ್ದರೂ ಕೂಡ ಚಿಂತನೆಗಳು, ಸಾಧನೆಗಳ ಮೂಲಕ ಸದಾಕಾಲ ಮಾರ್ಗದರ್ಶನ ಮಾಡುತ್ತಿರುತ್ತಾರೆ‘ ಎಂದರು.

ಪ್ರೊ.ಅಲ್ಲಮಪ್ರಭು ಬೆಟ್ಟದೂರ ಮಾತನಾಡಿ, ’ವಿಠ್ಠಪ್ಪನವರ ಹೋರಾಟದ ಬದುಕು , ಗೀತೆಯ ಕುರಿತು ಅವರಿಗಿದ್ದ ತಿಳಿವಳಿಕೆ ವಿಶಿಷ್ಟವಾಗಿತ್ತು. ಆರ್ಥಿಕ ಸಂಕಷ್ಟಗಳ ನಡುವೆಯೂ ಅವರು ಮಾಡಿದ ಸಾಧನೆ ಅನನ್ಯವಾದುದು. ಜೀವಪರ ಆಲೋಚನೆಗಳನ್ನು ಹೊಂದಿದ್ದ ವಿಠ್ಠಪ್ಪನವರನ್ನು ಕಳೆದುಕೊಂಡಿರುವ ಹೋರಾಟಗಳು, ಕಲೆ, ಸಾಹಿತ್ಯ, ಸಾಂಸ್ಕೃತಿಕ ಹಾಗೂ ಅವರ ನಂಬುಗೆಯ ಆಧ್ಯಾತ್ಮ ವಲಯಕ್ಕೆ ಅಪಾರ ನಷ್ಟವಾಗಿದೆ‘ ಎಂದರು.

ಭಾಗ್ಯನಗರ ಶಂಕರಮಠದ ಶಿವಪ್ರಕಾಶಾನಂದ ಸ್ವಾಮೀಜಿ, ದದೇಗಲ್ ಸಿದ್ಧಾರೂಢ ಮಠದ ಆತ್ಮಾನಂದ ಸ್ವಾಮೀಜಿ ಇದ್ದರು.

ಜಿಪಂ ಮಾಜಿ ಅಧ್ಯಕ್ಷ ಯಮನಪ್ಪ ಕಬ್ಬೇರ, ಶೇಖರಗೌಡ ಮಾಲಿಪಾಟೀಲ,ಕೊಟ್ರಪ್ಪ ತೋಟದ, ಸಿ.ವಿ.ಚಂದ್ರಶೇಖರ, ಶ್ರೀನಿವಾಸ ಗುಪ್ತಾ, ವೀರಣ್ಣ ನಿಂಗೋಜಿ, ವೀರಣ್ಣ ಹುರಕಡ್ಲಿ, ಅನ್ನಪೂರ್ಣ ಮನ್ನಾಪುರ, ವೆಂಕನಗೌಡ ಎಲ್.ಪಾಟೀಲ, ಮಂಜುನಾಥ ಡೊಳ್ಳಿನ, ಎಸ್.ಶರಣೇಗೌಡ ಮತ್ತಿತರರು ನುಡಿನಮನ ಸಲ್ಲಿಸಿದರು.

ಡಿ.ಎಚ್.ಪೂಜಾರ, ಮಹಾಂತೇಶ ಕೊತಬಾಳ, ಶಿ.ಕಾ.ಬಡಿಗೇರ, ಸಿರಾಜ್ ಬಿಸರಳ್ಳಿ, ಅರುಣಾ ನರೇಂದ್ರ ಮಾತನಾಡಿದರು. ಅಕ್ಷತಾ ಬಣ್ಣದಬಾವಿ ಮತ್ತು ಸಂಗಡಿಗರು ವಚನಗಾಯನ ನಡೆಸಿಕೊಟ್ಟರು. ರಾಜಶೇಖರ ಅಂಗಡಿ ನಿರೂಪಿಸಿದರು. ಹೊಸಪೇಟೆಯ ಮಹಾಂತೇಶ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು