ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗಂಗಾವತಿ: ಕಾಲುವೆಯಲ್ಲಿ ತ್ಯಾಜ್ಯ- ಸರಾಗವಾಗಿ ಹರಿಯದ ನೀರು

ವಿಜಯನಗರದ ಉಪಕಾಲುವೆ: ನೀರಿಗಾಗಿ ರೈತರ ಪರದಾಟ
ವಿಜಯ ಎನ್.
Published 14 ಜೂನ್ 2024, 7:22 IST
Last Updated 14 ಜೂನ್ 2024, 7:22 IST
ಅಕ್ಷರ ಗಾತ್ರ

ಗಂಗಾವತಿ: ಭತ್ತದ ನಾಡಿನ ರೈತರ ಜೀವನಾಡಿ ತುಂಗಭದ್ರಾ ಜಲಾಶಯದ ಎಡದಂಡೆ ಕಾಲುವೆ ವ್ಯಾಪ್ತಿಗೆ ಬರುವ ವಿಜಯನಗರ ಕಾಲದ ಉಪಕಾಲುವೆಗಳ ಆಧುನೀಕರಣ ಕಾಮಗಾರಿ ಕಳಪೆಯಾಗಿದೆ. ಕಾಲುವೆ ಮಧ್ಯದಲ್ಲಿ ಗಿಡಗಂಟಿ, ಹುಲ್ಲು ಬೆಳೆದು ನೀರು ಹರಿಯದಂತಾಗಿದೆ.

ಈ ಹಿಂದೆ ಬಿಜೆಪಿ ಸರ್ಕಾರ ವಿಜಯನಗರ ಕಾಲದ 16 ಉಪ ಕಾಲುವೆಗಳ ಆಧುನೀಕರಣಕ್ಕೆ ಏಷ್ಯನ್ ಡೆವಲಪ್‌ಮೆಂಟ್‌ ಬ್ಯಾಂಕಿನಿಂದ ₹371.01ಕೋಟಿ ಸಾಲ ಪಡೆದು, ನೀರಾವರಿ ಇಲಾಖೆ ಮೂಲಕ ಟೆಂಡರ್ ಆಹ್ವಾನಿಸಿ, ಹುಬ್ಬಳ್ಳಿಯ ಆರ್‌ಎನ್‌ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಅವರಿಗೆ ಕಾಮಗಾರಿ ಕೆಲಸ ನೀಡಿತ್ತು.

2019 ಮಾರ್ಚ್‌ನಲ್ಲಿ ಕಾಮಗಾರಿ ಆರಂಭಿಸಿ, 2024 ಜೂನ್ ಕಳೆಯುತ್ತಿದ್ದರೂ ಇನ್ನೂ ಕಾಮಗಾರಿ ಪ್ರಗತಿಯಲ್ಲಿದೆ. ಆರಂಭದಲ್ಲಿ ಕಾಲುವೆ ಕಾಮಗಾರಿ ಉತ್ತಮವೆಂದು ಖುಷಿಪಟ್ಟ ರೈತರು, ಕಂಪನಿಯ ಅರೆಬರೆ, ಕಳಪೆಗುಣಮಟ್ಟ ಕಾಮಗಾರಿ ನೋಡಿ ಇದೀಗ ಕಾಮಗಾರಿ ನಡೆಸದಿದ್ದರೇನೆ ಕಾಲುವೆಗಳು ಚಂದ ಇರ್ತಿದ್ದವು ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಅಪೂರ್ಣ ಕಾಮಗಾರಿ: ಸಾಣಾಪುರ ಗ್ರಾಮದಿಂದ ಸಂಗಾಪುರ ಗ್ರಾಮದವರೆಗೆ ಈಗಾಗಲೇ ಕಾಲುವೆ ಆಧುನೀಕರಣ ಕಾಮಗಾರಿ ಮುಗಿಸಿದ್ದು, ಇದರಲ್ಲಿ ಕಿಷ್ಕಿಂದಾ, ಅಂಜನಾದ್ರಿ, ಚಿಕ್ಕ ರಾಂಪುರ, ರಾಂಪುರ, ಬಸವನದುರ್ಗಾ ಗ್ರಾಮದ ಬಳಿ ಕೆಲವೆಡೆ ಕಾಮಗಾರಿ ಅಪೂರ್ಣವಾಗಿದೆ. ಇನ್ನೂ ಕೆಲವಡೆ ಕಾಲುವೆ ವಿಸ್ತೀರ್ಣ ಏರುಪೇರು ಮಾಡಲಾಗಿದೆ. ಇದರಿಂದ ಕಾಲುವೆ ರೂಪುರೇೆಷೆ ಬದಲಾಗಿ, ನೀರು ಹರಿಯುವಿಕೆ ಪ್ರಮಾಣ ಏರಿಳಿತದಲ್ಲಿದೆ.

ಕಾಲುವೆಯಲ್ಲಿ ಹೂಳು: ಕಾಮಗಾರಿ ನಂತರ ಕಾಲುವೆ ಭದ್ರವಾಗಲು ನೀರುಣಿಸಲು ಕೆಲಸಗಾರರು ಕಾಲುವೆ ಮಧ್ಯೆ ಅಲ್ಲಲ್ಲಿ ಮಣ್ಣು ಸಂಗ್ರಹಿಸಿ, ನೀರು ನಿಲ್ಲುವಂತೆ ಮಾಡಿದ್ದಾರೆ. ಪ್ರಕ್ರಿಯೆ ನಂತರ ಮಣ್ಣು ಹೊರ ಹಾಕದೇ, ಅಲ್ಲಿಯೇ ಬಿಟ್ಟಿದ್ದು ಆ ಮಣ್ಣಿನಲ್ಲಿ ಮತ್ತು ಕಾಮಗಾರಿ ನಡೆಸದ ಭಾಗದಲ್ಲಿ ಹುಲ್ಲು, ಸಸಿಗಳು ದಟ್ಟವಾಗಿ ಬೆಳೆದು ನೀರು ಸಂಚರಿಸದಂತಾಗಿದ್ದು, ಕೃಷಿ ಚಟುವಟಿಕೆ ವೇಳೆ ರೈತರು ನೀರಿಗಾಗಿ ಪರದಾಟ ನಡೆಸಬೇಕಾಗಿದೆ.

ಸ್ವಚ್ಛತೆಗೆ ಆಸಕ್ತಿ ಇಲ್ಲ: ಈ ಹಿಂದೆ ಪ್ರತಿವರ್ಷ ಮುಂಗಾರಿಗೂ ಮುನ್ನ ನೀರಾವರಿ ಇಲಾಖೆ ಸಿಬ್ಬಂದಿ ವಿಜಯನಗರ ಉಪಕಾಲುವೆಯಲ್ಲಿನ ಕಸ, ಹಲ್ಲು, ಗಿಡಗಳನ್ನು ತೆರುವುಗೊಳಿಸಿ, ಸ್ವಚ್ಛಚಗೊಳಿಸುತ್ತಿದ್ದರು. ಕಾಲುವೆ ಆಧುನೀಕರಣ ಕಾಮಗಾರಿ ಆರಂಭದಿಂದ ಈವರೆಗೆ ನೀರಾವರಿ ಇಲಾಖೆ ಕೆಲಸಗಾರರು ಕಾಲುವೆಯನ್ನು ಸ್ವಚ್ಛವೇ ಮಾಡಿಲ್ಲ. ಈ ಬಗ್ಗೆ ಆಧಿಕಾರಿಗಳು ಸಹ ತಲೆ ಕೆಡಿಸಿಕೊಳ್ಳುತ್ತಿಲ್ಲ ಎನ್ನುತ್ತಾರೆ ಆನೆಗೊಂದಿ ಭಾಗದ ಗ್ರಾಮಸ್ಥರು.

ಕಾಲುವೆಯಲ್ಲಿನ ಹೂಳು, ಹುಲ್ಲು, ಗಿಡಗಂಟಿಗಳ ತೆರವಿನ ಕುರಿತು ನೀರಾವರಿ ಇಲಾಖೆ ಎಇಇ ಎಂ.ಎಸ್ ಗೋಡೆಕರ್ ಅವರಿಗೆ ಹಲವು ಬಾರಿ ಫೋನ್ ಮೂಲಕ ಸಂಪರ್ಕಿಸಿದರೂ, ಕರೆಗೆ ಸ್ಪಂದಿಸಲಿಲ್ಲ.

ವಿಜಯನಗರ ಉಪಕಾಲುವೆಗಳ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು ಎಲ್ಲೆಂದರಲ್ಲಿ ನೀರು ಸೋರಿಕೆ ಆಗುತ್ತಿದೆ. ಕಾಲುವೆ ಕಾಮಗಾರಿ ಸಮತಟ್ಟು ರೀತಿಯಲ್ಲಿಯೂ ಮಾಡಿಲ್ಲ.

ಬಾಲು ಹನುಮನಹಳ್ಳಿ ಗ್ರಾಮ ರೈತ

Quote - ಬಸವನದುರ್ಗಾ ಗ್ರಾಮದ ಬಳಿಯ ಉಪಕಾಲುವೆ ಕಾಮಗಾರಿ ಕಳಪೆಯಾಗಿದೆ. ಹುಲ್ಲು ಗಿಡ ಕಸ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹವಾಗಿದೆ. ನೀರು ಸಂಚರಿಸದ ಕಾರಣ ಸೊಳ್ಳೆಗಳು ಹೆಚ್ಚಾಗಿ ರೋಗಗಳು ಹರಡುವ ಸ್ಥಿತಿ ಏರ್ಪಟ್ಟಿದೆ. ನೀರಾವರಿ ಇಲಾಖೆ ಅಧಿಕಾರಿಗಳು ಕಾಲುವೆ ಸ್ವಚ್ಛ ಮಾಡಿಸಬೇಕು.

ಡಾ.ವೆಂಕಟೇಶಬಾಬು ಬಸವದುರ್ಗಾ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT