ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನ ಬದಲಿಸುವವರಿಗೆ ತಕ್ಕ ಪಾಠ ಕಲಿಸಬೇಕು: ಮಲ್ಲಿಕಾ ಘಂಟಿ ಆಕ್ರೋಶ

ಹಾಲುಮತ ಧರ್ಮ ಪ್ರಚಾರ ಯಾತ್ರೆಯ ಸಮಾರೋಪ
Last Updated 4 ಸೆಪ್ಟೆಂಬರ್ 2022, 14:21 IST
ಅಕ್ಷರ ಗಾತ್ರ

ಬೇವಿನಹಳ್ಳಿ (ಕೊಪ್ಪಳ): ‘ಸಂವಿಧಾನ ಬದಲಿಸುವ ಬಗ್ಗೆ ಪದೇ ಪದೇ ಮಾತುಗಳನ್ನಾಡುತ್ತಿರುವ ಸರ್ಕಾರಗಳಿಗೆ ಮುಂಬರುವ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸಬೇಕು’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಮಲ್ಲಿಕಾ ಘಂಟಿ ಆಕ್ರೋಶ ವ್ಯಕ್ತಪಡಿಸಿದರು.

ಕೊಪ್ಪಳ ತಾಲ್ಲೂಕಿನ ಬೇವಿನಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದ ಹಾಲುಮತ ಧರ್ಮ ಪ್ರಚಾರ ಯಾತ್ರೆಯ ಸಮಾರೋಪ ಮತ್ತು ಕಲಬುರಗಿ ವಿಭಾಗದ ತಿಂಥಿಣಿ ಬ್ರಿಡ್ಜ್‌ ಕನಕಗುರು ಪೀಠದ ಸಿದ್ದರಾಮನಂದ ಸ್ವಾಮೀಜಿ ಅವರ ತುಲಾಭಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇತ್ತೀಚೆಗಿನ ವರ್ಷಗಳಲ್ಲಿ ಅಂಬೇಡ್ಕರ್‌ ಅವರ ವಿಚಾರಧಾರೆಗಳಿಗೆ ಅಪಚಾರ ನಡೆಯುತ್ತಿದೆ. ಈಗಿನ ಸರ್ಕಾರ ಎಲ್ಲವನ್ನೂ ಖಾಸಗೀಕರಣ ಮಾಡುತ್ತಿದೆ. ಎಂಟು ವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರ ದೇಶವನ್ನೇ ಹಾಳು ಮಾಡಿದೆ. ಮುಂದೆಯೂ ಅಧಿಕಾರ ಕೊಟ್ಟರೆ ನಮ್ಮೆಲ್ಲರನ್ನೂ ಮಾರಾಟ ಮಾಡುತ್ತದೆ. ಆದ್ದರಿಂದ ಮುಂಬರುವ ಚುನಾವಣೆಯಲ್ಲಿ ಯಾರನ್ನಾದರೂ ಆಯ್ಕೆಮಾಡಿ; ಆದರೆ, ನಾಗಪುರದ ಶಾಲೆಯಿಂದ ಬಂದವರ ಕೈಗೆ ಮಾತ್ರ ಅಧಿಕಾರ ಕೊಡಬೇಡಿ. ಬೈಠಕ್‌ ಹೆಸರಿನಲ್ಲಿ ನಿಮ್ಮ ಊರು ಪ್ರವೇಶಿಸಿ ಅಲ್ಲಿಯೇ ಠಿಕಾಣಿ ಹೂಡುವವರಿಗೆ ಅವಕಾಶ ನೀಡಲೇಬೇಡಿ’ ಎಂದರು.

‘ಧರ್ಮಯಾತ್ರೆಯಿಂದ ರಾಜಕೀಯ ಜಾಗೃತಿಯೂ ಮೂಡಬೇಕು. ಹಾಲುಮತ ಸಮಾಜದ ಹೆಣ್ಣುಮಕ್ಕಳು ಸಾಮಾಜಿಕ ಹಾಗೂ ರಾಜಕೀಯ ಜೀವನದಲ್ಲಿ ತೊಡಗಿಕೊಳ್ಳಬೇಕು ಬಸವಣ್ಣ, ಅಂಬೇಡ್ಕರ್‌, ಕನಕದಾಸರು ಹೀಗೆ ಹಲವರನ್ನು ಪುರೋಹಿತಶಾಯಿಗಳು ಒಂದು ವರ್ಗಕ್ಕೆ ಸೀಮಿತ ಮಾಡಿದ್ದಾರೆ. ಬಡತನ, ಅಜ್ಞಾನ ಹಾಗೂ ಅನಕ್ಷರತೆ ಮೆಟ್ಟಿನಿಂತರೆ ಮಾತ್ರ ಅಭಿವೃದ್ಧಿ ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

ಮಾಜಿ ಸಚಿವ ಎಚ್‌.ಎಂ. ರೇವಣ್ಣ ಮಾತನಾಡಿ ‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನೀಡಿದ ಕೊಡುಗೆಗಳಿಂದ ಕುರುಬರಿಗೆ ಸಾಕಷ್ಟು ಅನುಕೂಲಗಳಾಗಿವೆ. ಶೂದ್ರರನ್ನು ಒಡೆದು ಆಳುವವರಿಗೆ ತಕ್ಕ ಪಾಠ ಕಲಿಸಬೇಕು’ ಎಂದರು.

ಕನಕಗುರು ಪೀಠದ ಮೈಸೂರು ವಿಭಾಗದ ಕೆ.ಆರ್‌. ನಗರದ ಶಿವಾನಂದಪುರಿ ಸ್ವಾಮೀಜಿ, ಕೊಪ್ಪಳದ ಹಾಲವರ್ತಿ ಜಡೇಶ್ವರ ಶಾಖಾಮಠದ ಶಿವಸಿದ್ದೇಶ್ವರ ಸ್ವಾಮೀಜಿ, ಮಾಜಿ ಶಾಸಕ ಕೆ. ಬಸವರಾಜ ಹಿಟ್ನಾಳ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ. ರಾಜಶೇಖರ ಹಿಟ್ನಾಳ, ವಿಧಾನ ಪರಿಷತ್‌ ಮಾಜಿ ಸದಸ್ಯ ಕರಿಯಣ್ಣ ಸಂಗಟಿ, ಹಾಲುಮತ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತಪ್ಪ ಕೌದಿ, ಸಮಾಜದ ಪ್ರಮುಖರಾದ ಭರಮಣ್ಣ ಹಟ್ಟಿ, ಜಡಿಯಪ್ಪ ಬಂಗಾಳಿ, ವೀರನಗೌಡ ಬಳೂಟಗಿ, ಮಲ್ಲಣ್ಣ ಪಲ್ಲೇದ, ಅಮರೇಶ ಉಮಲಾಪುರ, ಶಿವಲಿಂಗಪ್ಪ ತಿಪ್ಪವನವರ, ಶಿವಲಿಂಗಪ್ಪ ತಿಪ್ಪವನವರ, ಹೇಮಣ್ಣ ದೇವರಮನಿ, ಬೀರಪ್ಪ ಅಂಡಗಿ, ಮೂರ್ತೆಪ್ಪ ಗಿಣಗೇರಿ, ಬಸವರಾಜ ಪದ್ಲಾ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಜಾಗೃತಗೊಳ್ಳದಿದ್ದರೆ ಬೀದಿಗೆ ಬರುತ್ತೇವೆ: ಹಿಟ್ನಾಳ

ಈಗಿನ ಸರ್ಕಾರಗಳು ಎಲ್ಲವನ್ನೂ ಖಾಸಗೀಕರಣ ಮಾಡುತ್ತಿವೆ. ಮುಂಬರುವ ಚುನಾವಣೆಯಲ್ಲಿ ನಮ್ಮ ಜನ ಜಾಗೃತಗೊಳ್ಳದಿದ್ದರೆ ಬೀದಿಗೆ ಬರಬೇಕಾಗುತ್ತದೆ’ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಅವರು ‘ಎಲ್ಲರೂ ಸಮಾನತೆಯಿಂದ ಬಾಳಬೇಕು ಎನ್ನುವುದು ನಮ್ಮೆಲ್ಲರ ಆಶಯ. ಸಿದ್ದರಾಮಯ್ಯನವರ ಉದ್ದೇಶವೂ ಇದೆ ಆಗಿದೆ. ಧಾರ್ಮಿಕ ಕಾರ್ಯಕ್ರಮಗಳು ನಡೆದಾಗ ಜನ ಜಾಗೃತಗೊಳ್ಳುತ್ತಾರೆ’ ಎಂದರು.

‘ಒಂದೆರೆಡು ತಿಂಗಳಲ್ಲಿ ಕೊಪ್ಪಳದಲ್ಲಿ ಕನಕದಾಸ ಮೂರ್ತಿ ಪ್ರತಿಷ್ಠಾಪನೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳುತ್ತದೆ. ಆಗ ಸಿದ್ದರಾಮಯ್ಯ ಅವರನ್ನು ಕರೆಯಿಸಲಾಗುತ್ತದೆ’ ಎಂದು ತಿಳಿಸಿದರು.

ಧರ್ಮ ಪ್ರಚಾರ ಯಾತ್ರೆಯಲ್ಲಿ ಮತಬೇಟೆ

ಹಾಲುಮತ ಸಮಾಜದ ಧರ್ಮ ಪ್ರಚಾರ ಯಾತ್ರೆ ಸಮಾರೋಪ ಮುಂಬರುವ ಚುನಾವಣೆಯ ಮತಬೇಟೆಗೂ ವೇದಿಕೆಯಾಯಿತು.

ಹಾಲುಮತ ಸಮಾಜದ ಚಿಂತಕ ನಿಖಿತ್‌ರಾಜ್‌ ಮೌರ್ಯ ‘ಚುನಾವಣೆ ಸಮೀಪಿಸುತ್ತಿದೆ. ರಾಘವೇಂದ್ರ ಹಿಟ್ನಾಳ ಅವರ ಗೆಲುವಿಗಾಗಿ ನೀವೆಲ್ಲರೂ ಕೆಲಸ ಮಾಡಿ’ ಎಂದರು. ಎಚ್‌.ಎಂ. ರೇವಣ್ಣ ಮಾತನಾಡಿ ‘ಚುನಾವಣೆಯಲ್ಲಿ ರಾಘವೇಂದ್ರ ಹಿಟ್ನಾಳ ಬೆಂಬಲಕ್ಕೆ ನಿಲ್ಲಬೇಕು. ಹಿಟ್ನಾಳ ಕ್ಷೇತ್ರಕ್ಕೆ ಮಾತ್ರ ಸೀಮಿತರಾಗದೆ ರಾಜ್ಯ ರಾಜಕಾರಣದಲ್ಲಿಯೂ ಸಕ್ರಿಯರಾಗಬೇಕು’ ಎಂದು ಹೇಳಿದರು. ಮಲ್ಲಿಕಾ ಘಂಟಿ ಅವರೂ ‘ನಮ್ಮ ಮನೆಯವರಿಗೇ ಮತ ನೀಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT