ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃತ್ತಿರಂಗಭೂಮಿ ಅನ್ನದಾತ, ಸಮಾನತೆಯ ವೇದಿಕೆ

ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಅಂತರ ಕಾಲೇಜು ಯುವಜನೋತ್ಸವ
Last Updated 2 ಜನವರಿ 2019, 15:56 IST
ಅಕ್ಷರ ಗಾತ್ರ

ಶ್ರೀಕೃಷ್ಣದೇವರಾಯ ವೇದಿಕೆ (ಮುನಿರಾಬಾದ್): ಹಿಂದಿನ ಕಾಲದಲ್ಲಿ ವೃತ್ತಿರಂಗಭೂಮಿ ಲಿಂಗ, ಜಾತಿ, ವರ್ಗ ಬೇಧವಿಲ್ಲದ ಸಮಾನತೆಯ ಮತ್ತು ಹಲವರ ತುತ್ತಿನಚೀಲ ತುಂಬುವ ವೇದಿಕೆಯಾಗಿತ್ತು ಎಂದು ಹಿರಿಯ ರಂಗಕರ್ಮಿ ಕೋಗಳಿ ಪಂಪಣ್ಣ ಅಭಿಪ್ರಾಯಪಟ್ಟರು.

ಇಲ್ಲಿನ ತೋಟಗಾರಿಕೆ ಕಾಲೇಜಿನಲ್ಲಿ ಬುಧವಾರ ನಡೆದ ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ(ವಿ.ವಿ) ವ್ಯಾಪ್ತಿಯ 10ನೇ ಅಂತರ್ ಮಹಾವಿದ್ಯಾಲಯಗಳ ಯುವಜನೋತ್ಸವ, ರಂಗಸಿರಿ-2018 ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ರಂಗಭೂಮಿ ನಾಟಕ ಕಂಪೆನಿಯ ಮಾಲೀಕರು ಹಲವು ಕುಟುಂಬಗಳಿಗೆ ಅನ್ನದಾತರಾಗಿದ್ದರು. ಸ್ವಾತಂತ್ರ್ಯ ಸಂಗ್ರಾಮದ ಚಳವಳಿಯಲ್ಲಿ ಬ್ರಿಟಿಷರ ಹಿಂಸೆಯಿಂದ ತಪ್ಪಿಸಿಕೊಳ್ಳಲು ನಾಟಕ ಕಂಪೆನಿಗೆ ಬರುತ್ತಿದ್ದ ಹಲವು ಹೋರಾಟಗಾರರಿಗೆ ಆಶ್ರಯ ನೀಡಲಾಗುತ್ತಿತ್ತು. ಸಮಾಜದಲ್ಲಿ ಜಾತಿಯ ನಂಜು ಇರಬಾರದು ಎಂಬ ಸಂದೇಶವನ್ನು ರಂಗಭೂಮಿ ನೀಡಿದೆ ಎಂದರು.

ಬಾಗಲಕೋಟೆ ವಿ.ವಿ.ಆಡಳಿತ ಮಂಡಳಿಯ ಸದಸ್ಯ ಆರ್.ಎಂ.ನಾಗೇಶ್ ಮಾತನಾಡಿ, ನಾಡಿನ ಸಾಂಸ್ಕೃತಿಕ ಕಲೆ ನಶಿಸುತ್ತಿದೆ. ಹಿಂದೆ ಚರ್ಮವಾದ್ಯಗಳ ನಾದವನ್ನು ಕೇಳುತ್ತಿದ್ದೆವು. ಈಗಿನ ಗಣೇಶೋತ್ಸವದಲ್ಲಿ ಸಿದ್ಧ ಹಾಡುಗಳನ್ನು ಧ್ವನಿವರ್ಧಕದಲ್ಲಿ ಆಲಿಸುವುದು ದುರ್ದೈವ ನಮ್ಮದಾಗಿದೆ. ತಮಟೆ ವಾದ್ಯದ ನಾದ ಮಾಯವಾಗಿದೆ. ಕಲೆ ಗುರುತಿಸಿ, ಪ್ರೋತ್ಸಾಹಿಸುವ ಕೆಲಸ ಸಮಾಜ ಮಾಡಬೇಕು. ಸಂಸಾರ ಒಡೆಯುವ ಅತ್ತೆ, ಹೆಜ್ಜೆ ಹೆಜ್ಚೆಗೆ ಕಿತಾಪತಿ ಮಾಡುವ ಸೊಸೆ, ವಿಚ್ಛೇದನಕ್ಕೆ ಪ್ರಚೋದನೆ, ಸಂದೇಶ ನೀಡುವ ಟಿವಿ ಧಾರಾವಾಹಿಗಳಿಂದ ದೂರವಿರಿ ಎಂದು ಹೇಳಿದರು.

ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ ಕೆ.ರಾಘವೇಂದ್ರ ಹಿಟ್ನಾಳ ಮಾತನಾಡಿ, ಪುರಾತನ ಕಲೆ, ಸಂಗೀತ, ಸಂಸ್ಕೃತಿ ಸಮೃದ್ಧಿಗೆ ನಮ್ಮ ಹಂಪೆ ಉತ್ತಮ ಉದಾಹರಣೆ. ಕಲೆ ಕೆಲವರಿಗೆ ಹುಟ್ಟಿನಿಂದ ಬಂದರೆ, ಕೆಲವರಿಗೆ ಅಭ್ಯಾಸದಿಂದ ಸಿದ್ಧಿಸುತ್ತದೆ. ಕಾಲೇಜು ಆಡಳಿತ ಮಂಡಳಿ ಪ್ರಸ್ತುತ ಇರುವ 72 ಎಕರೆ ಜೊತೆಗೆ ಇನ್ನೂ 28 ಎಕರೆ ಜಮೀನು, ಮೂಲಸೌಕರ್ಯಕ್ಕೆ ಬೇಡಿಕೆ ಇಟ್ಟಿದ್ದು ಅದನ್ನು ಪೂರೈಸುವುದಾಗಿ ಭರವಸೆ ನೀಡಿದರು.

ರಾಜ್ಯ ಮೀಸಲು ಪೊಲೀಸ್ ತರಬೇತಿ ಶಾಲೆಯ ಪ್ರಾಚಾರ್ಯ ಡಾ.ರಾಮಕೃಷ್ಣ ಮುದ್ದೇಪಾಲ ಮಾತನಾಡಿ, ಕಲೆ, ಸಾಹಿತ್ಯ, ಸಾಂಸ್ಕೃತಿಕ ಜ್ಞಾನವಿಲ್ಲದ ಮನುಷ್ಯ ಕೋಡು, ಬಾಲವಿಲ್ಲದ ಪಶುವಿನಂತೆ ಎಂದರು.

ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎಂ.ಇಂದಿರೇಶ್ ಮಾತನಾಡಿ, ವಿದ್ಯಾರ್ಥಿಗಳಲ್ಲಿನ ಸಾಂಸ್ಕೃತಿಕ ಕಲೆ ಆತ್ಮೀಯಭಾವವನ್ನು ಮೂಡಿಸುತ್ತದೆ. ಕಲೆ ಮನೋರಂಜನೆಗಾಗಿ ಮಾತ್ರವಲ್ಲ. ಪೈಪೋಟಿಗೂ ಸಹಕಾರಿ. ಪೈಪೋಟಿ ಇಲ್ಲದಿದ್ದರೆ ಸ್ಫರ್ಧೆಗೆ ಅರ್ಥವಿಲ್ಲ ಎಂದರು.

ಸಹಾಯಕ ಕೃಷಿ ನಿರ್ದೇಶಕ ವೀರಣ್ಣ ಕಮತರ್, ಎಸ್.ಎನ್.ಮಂಜುನಾಥಗೌಡ, ಡೀನ್ ಡಾ.ಪಿ.ಎಂ.ಗಂಗಾಧರಪ್ಪ, ಡಾ.ಎಂ.ಲೋಕೇಶ್ ಮಾತನಾಡಿದರು. ವಿ.ವಿ. ಆಡಳಿತಮಂಡಳಿಯ ಶಂಕರಪ್ಪ ಮಳಲಿ, ಆರ್.ಎಂ.ನಾಗೇಶ್,ಕುಲಸಚಿವ ಡಾ.ವೈ.ಕೆ.ಕೋಟೆಕಲ್, ಆಡಳಿತಾಧಿಕಾರಿ ಡಾ.ಆರ್.ಸಿ.ಜಗದೀಶ್, ಡಾ.ಎಚ್.ಬಿ.ಪಾಟೀಲ, ಡಾ.ಟಿ.ಬಿ.ಅಲ್ಗೋಳಿ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ವಸಂತಪ್ಪ, ಡಾ.ಹೊನ್ನಭೈರಯ್ಯ, ಡಾ.ಎಂ.ಬಿ.ಪಾಟೀಲ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಾಲಚಂದ್ರನ್, ಕಿರ್ಲೋಸ್ಕರ್ ಕಾರ್ಖಾನೆಯ ಹಿರಿಯ ಉಪಾಧ್ಯಕ್ಷ ಪಿ.ನಾರಾಯಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT