ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರಿಗೆ ಪೊಲೀಸರಲ್ಲಿ ನಂಬಿಕೆ ಇದೆ

ನಿರ್ಗಮನ ಪಥ ಸಂಚಲನ: ಪೊಲೀಸ್‌ ಮಹಾನಿರೀಕ್ಷಕ ಎಸ್‌.ಮುರುಗನ್‌
Last Updated 21 ಜನವರಿ 2017, 6:42 IST
ಅಕ್ಷರ ಗಾತ್ರ

ಕೊಪ್ಪಳ:  ಪೊಲೀಸರ ಮೇಲೆ ವಿವಿಧ ಕಡೆಗಳಲ್ಲಿ ಹಲವು ಟೀಕೆ ಟಿಪ್ಪಣಿಗಳಿದ್ದರೂ ಸಹ ಜನರು ನಮ್ಮ ಮೇಲೆ ಇಟ್ಟಿರುವ ನಂಬಿಕೆ ಕಳೆದುಕೊಂಡಿಲ್ಲ ಎಂದು ಬಳ್ಳಾರಿ ವಲಯ ಪೊಲೀಸ್‌ ಮಹಾನಿರೀಕ್ಷಕ ಎಸ್‌.ಮುರುಗನ್‌ ಹೇಳಿದರು.

ನಗರದ ಪೊಲೀಸ್‌ ಕವಾಯತು ಮೈದಾನದಲ್ಲಿ ಶುಕ್ರವಾರ ನಡೆದ ಕೊಪ್ಪಳದ ತಾತ್ಕಾಲಿಕ ಪೊಲೀಸ್‌ ತರಬೇತಿ ಶಾಲೆಯ 5ನೇ ತಂಡದ ಪೊಲೀಸ್‌ ಕಾನ್‌ಸ್ಟೆಬಲ್‌ಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೆಲವು ಸಮಯದಲ್ಲಿ ನಮಗೆ ಸರಿಯಾದ ಊಟ, ವಿರಾಮ, ಕುಳಿತುಕೊಳ್ಳಲು ಸ್ಥಳ ಸಹ ಸಿಗುವುದಿಲ್ಲ. ಇಂತಹ ಕಷ್ಟದ ಪರಿಸ್ಥಿತಿಯಲ್ಲೂ ನಾವು ಕಾರ್ಯ ನಿರ್ವಹಿಸಬೇಕು. ಇಂಥಹ ಸಂದರ್ಭಗಳಲ್ಲಿ ನಾವು ದೃಢ ಮನಸ್ಸು ಮತ್ತು ದೇಹ ಹೊಂದಿರುವುದು ಅವಶ್ಯಕ. ಪೊಲೀಸ್‌ ಇಲಾಖೆಯ ಶಿಸ್ತು ಆರಂಭವಾಗುವುದೇ ಕವಾಯತು ಮೈದಾನದಲ್ಲಿ.

ಯಶಸ್ವಿ ಕೆಲಸಕ್ಕೆ ಶಿಸ್ತು ಅತಿ ಮುಖ್ಯ. ನಮ್ಮ ಜವಾಬ್ದಾರಿ, ಕರ್ತವ್ಯದ ಬಗ್ಗೆ ಪರಿಪೂರ್ಣವಾಗಿ ತಿಳಿದು, ಕೊನೆವರೆಗೂ ಶ್ರಮಿಸಬೇಕು. ಅವಶ್ಯಕತೆ ಇದ್ದಲ್ಲಿ ಜೀವದ ಹಂಗನ್ನು ತೊರೆದು ಕೆಲಸ ಮಾಡುವುದೇ ಶಿಸ್ತು ಎಂದರು.

ಇಲಾಖೆಯಲ್ಲಿ ಕೆಲಸ ಮಾಡಬೇಕಾದರೆ ಸಾರ್ವಜನಿಕರ ನಿಕಟ ಸಂಪರ್ಕದಲ್ಲಿರಬೇಕಾಗುತ್ತದೆ. ಅವರ ಕಷ್ಟಕ್ಕೆ ಸ್ಪಂದಿಸುವ ನಿರೀಕ್ಷೆಯಲ್ಲಿ ಜನ ನಮ್ಮ ಬಳಿ ಬರುತ್ತಾರೆ. ಇಲ್ಲಿ ಸೇವಾ ಮನೋಭಾವನೆ ಕೂಡ ಮುಖ್ಯ. ನಾವು ನೀಡುವ ವಿವಿಧ ವಿಶಿಷ್ಟ ಸೇವೆಯನ್ನು ಬೇರೆ ಯಾವುದೇ ಇಲಾಖೆಯೂ ನೀಡುವುದಿಲ್ಲ. ಇಲ್ಲಿ ಕಲಿತ ದೈಹಿಕ ಮತ್ತು ಮಾನಸಿಕ ತರಬೇತಿಯನ್ನು ಜೀವನದಲ್ಲೂ ಸಹ ಅಳವಡಿಸಿಕೊಳ್ಳಿ. ನೀವು ಶ್ರಮ ವಹಿಸಿ ಹೆಚ್ಚು ಬೆಳೆದು, ಕುಟುಂಬಕ್ಕೆ, ಇಲಾಖೆಗೆ ಹಾಗೂ ತರಬೇತಿ ಶಾಲೆಗೆ ಕೀರ್ತಿ ತನ್ನಿ ಎಂದರು.

ಜಿಲ್ಲಾ ಪೊಲೀಸ್‌ ಅಧೀಕ್ಷಕ ಡಾ.ಕೆ.ತ್ಯಾಗರಾಜನ್‌ ಸ್ವಾಗತಿಸಿದರು. ಕೊಪ್ಪಳ ಡಿವೈಎಸ್‌ಪಿ ಶ್ರೀಕಾಂತ ಕಟ್ಟಿಮನಿ ಶಿಕ್ಷಣಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಗಂಗಾವತಿ ಡಿವೈಎಸ್‌ಪಿ ಸಂಧಿಗವಾಡ ವಂದಿಸಿದರು.

*
ನಮ್ಮ ಜವಾಬ್ದಾರಿ, ಕರ್ತವ್ಯದ ಬಗ್ಗೆ ಪೂರ್ಣವಾಗಿ ತಿಳಿದು, ಕೊನೆವರೆಗೂ ಶ್ರಮಿಸಬೇಕು. ಅಗತ್ಯವಿದ್ದಲ್ಲಿ ಜೀವದ ಹಂಗನ್ನು ತೊರೆದು ಕೆಲಸ ಮಾಡಬೇಕಾಗುತ್ತದೆ.
-ಎಸ್‌.ಮುರುಗನ್‌,
ಪೊಲೀಸ್‌ ಮಹಾನಿರೀಕ್ಷಕ, ಬಳ್ಳಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT