ಶುಕ್ರವಾರ, ಡಿಸೆಂಬರ್ 4, 2020
23 °C
ಬಹುಬೀಜ ಬಿತ್ತನೆ ಕೂರಿಗೆ ಅಭಿವೃದ್ಧಿಪಡಿಸಿದ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು

ಕೃಷಿ ಮೇಳ 2020: ಮಳೆ ಬಾರದಿದ್ದರೂ ಬರಲಿದೆ ಮೊಳಕೆ

ಗುರು ಪಿ.ಎಸ್‌. Updated:

ಅಕ್ಷರ ಗಾತ್ರ : | |

ಡಾ. ದೇವರಾಜ್ ಅವರು ಅಭಿವೃದ್ಧಿಪಡಿಸಿರುವ ಬಹುಬೆಳೆಗಳ ಬಿತ್ತನೆ ಕೂರಿಗೆ

ಬೆಂಗಳೂರು: ಏಕ ಬೆಳೆಯೊಂದಿಗೆ ಅಂತರ ಬೆಳೆ ಬಿತ್ತನೆಗೂ ಅನುಕೂಲವಾಗುವ, ತಕ್ಷಣಕ್ಕೆ ಮಳೆ ಬಾರದಿದ್ದರೂ ಬೀಜ ಮೊಳಕೆ ಬಿಡುವ ರೀತಿಯಲ್ಲಿ ಬಿತ್ತನೆ ಮಾಡುವ ಟ್ರ್ಯಾಕ್ಟರ್‌ಚಾಲಿತ ಕೂರಿಗೆಯನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಅಭಿವೃದ್ಧಿ ಪಡಿಸಿದ್ದಾರೆ. ಕೃಷಿ ಮೇಳಕ್ಕೆ ಭೇಟಿ ನೀಡುವ ರೈತರಿಗೆ ಈ ಕುರಿತು ಅರಿವನ್ನೂ ಮೂಡಿಸುತ್ತಿದ್ದಾರೆ.

‘ರಾಗಿ, ತೊಗರಿ, ಜೋಳ, ಅವರೆ ಯಾವುದಾದರೂ ಬೆಳೆಯ ಬೀಜವನ್ನು ಈ ಕೂರಿಗೆ ಸಹಾಯದಿಂದ ಬಿತ್ತಬಹುದು. ಎಂಟು ಸಾಲು ಶೇಂಗಾ, ಎರಡು ಸಾಲು ತೊಗರಿ, ಒಂದು ಸಾಲು ಮುಸುಕಿನ ಜೋಳ ಈ ಮಾದರಿಯಲ್ಲಿ ವಿವಿಧ ಬೆಳೆಗಳ ಬಿತ್ತನೆಯನ್ನು ಇದರಿಂದ ಮಾಡಬಹುದಾಗಿದೆ’ ಎಂದು ಕೂರಿಗೆ ಅಭಿವೃದ್ಧಿ ಪಡಿಸಿದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಹಿರಿಯ ವಿಜ್ಞಾನಿ ಡಾ. ಕೆ. ದೇವರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈಗ ಮಾರುಕಟ್ಟೆಯಲ್ಲಿರುವ ಕೂರಿಗೆಗಳ ಗುಳ (ಟೈನ್) ಒಂದೇ ಮಟ್ಟದಲ್ಲಿ ಇರುತ್ತವೆ. ಅಂದರೆ, ಬೀಜ ಭೂಮಿಯಲ್ಲಿ ಒಂದೇ  ಆಳಕ್ಕೆ ಬೀಳುವಂತಿರುತ್ತದೆ. ಆದರೆ, ಈ ಕೂರಿಗೆಯಲ್ಲಿ ಟ್ರ್ಯಾಕ್ಟರ್‌ನ ಚಕ್ರ ಹೋಗುವ ಕಡೆಯಲ್ಲಿ ಗುಳಗಳನ್ನು ಒಂದು ಇಂಚು ಉದ್ದ ಮಾಡಲಾಗಿದೆ. ಚಕ್ರ ಮುಂದೆ ಹೋದಂತೆ, ಒಂದು ಇಂಚು ಮಣ್ಣು ಕೂಡ ಒಳಗೆ ಹೋಗುತ್ತದೆ. ಬಿತ್ತನೆ ಬೀಜ ಬೀಳುವ ಹಿಂಭಾಗವೇ ಟೈರ್‌ಗಳನ್ನು ಅಳವಡಿಸಲಾಗಿದ್ದು, ಈ ಟೈರ್‌ಗಳು ಮಣ್ಣನ್ನು ಮುಚ್ಚಿಕೊಂಡು ಬರುತ್ತವೆ’ ಎಂದು ಹೇಳಿದರು.


ನಗರದ ಜಿಕೆವಿಕೆ ಆವರಣದಲ್ಲಿ ಗುರುವಾರ ಕೃಷಿ ವಿಶ್ವವಿದ್ಯಾನಿಲಯ ಆಯೋಜಿಸಿದ್ದ ಕೃಷಿ ಮೇಳ 2020 ಪ್ರದರ್ಶನದಲ್ಲಿ ಸ್ಯಾನಿಟೈಜರ್ ಸಿಂಪಡಿಸುತ್ತಿದ್ದ ಗರುಡ ಸಿಕೆ 700 ಟ್ಯಾಂಕ್ ಜನರ ಗಮನ ಸೆಳೆಯಿತು -ಪ್ರಜಾವಾಣಿ ಚಿತ್ರ/ಎಂ.ಎಸ್. ಮಂಜುನಾಥ್

‘ಬೀಜ ಬಿತ್ತಿದ ಕೂಡಲೇ ಮಣ್ಣನ್ನು ಒತ್ತಿ ಪ್ಯಾಕ್‌ ಮಾಡುವುದರಿಂದ, ಬಿತ್ತನೆನಂತರದ ದಿನಗಳಲ್ಲಿ ಮಳೆ ಬಾರದಿದ್ದರೂ ನೀರು ಆವಿಯಾಗುವುದು ಇದರಿಂದ ತಪ್ಪುತ್ತದೆ. ನೀರು ಆವಿಯಾಗದಿದ್ದಾಗ ತೇವಾಂಶ ಹಾಗೆಯೇ ಇರುತ್ತದೆ. ಆಗ ಬೀಜ ಮೊಳಕೆ ಬಿಡುತ್ತದೆ. ಬೇರೆ ಕೂರಿಗೆಗಳಲ್ಲಿ ಬಿತ್ತನೆ ವೇಳೆ ಮಣ್ಣು ಸಡಿಲಗೊಂಡಿರುತ್ತದೆ. ನೀರು ಆವಿಯಾಗಿ ತೇವಾಂಶವೂ ಹೋಗುವುದರಿಂದ ಮೊಳಕೆ ಬಾರದೆ ಬೀಜ ಸರಿಯಾಗಿ ಹುಟ್ಟುವುದಿಲ್ಲ’ ಎಂದು ಅವರು ವಿವರಿಸಿದರು.

‘ಒಂದೊಂದು ಬೆಳೆಯ ಬೀಜಗಳನ್ನು ಒಂದೊಂದು ಆಳದಲ್ಲಿ ಬಿತ್ತಬೇಕಾಗುತ್ತದೆ. ಕೂರಿಗೆಯ ಗುಳಗಳು ಒಂದೇ ಆಳದಲ್ಲಿ ಇದ್ದರೆ ಬಿತ್ತನೆ ಸರಿಯಾಗುವುದಿಲ್ಲ. ಉದಾಹರಣೆಗೆ, ರಾಗಿಯ ಬೀಜ ಎರಡು ಇಂಚು ಆಳಕ್ಕೆ ಹೋದರೆ ಅದು ಹುಟ್ಟುವುದಿಲ್ಲ. ಈ ಕೂರಿಗೆಯ ಗುಳಗಳ ಉದ್ದವನ್ನು ಹೆಚ್ಚು ಕಡಿಮೆ ಮಾಡಿರುವುದರಿಂದ ಆಯಾ ಬೀಜದ ಅಗತ್ಯಕ್ಕೆ ಬೇಕಾದ ಆಳದಲ್ಲಿ ಬಿತ್ತನೆ ಮಾಡಲು ಸಾಧ್ಯವಾಗುತ್ತದೆ’ ಎಂದರು.

ಬೀಜ–ಗೊಬ್ಬರ ಅಂತರ

‘ಮಾರುಕಟ್ಟೆಯಲ್ಲಿ ಈಗ ಚಾಲ್ತಿಯಲ್ಲಿರುವ ಸಂಯುಕ್ತ ಕೂರಿಗೆಗಳು ಬೀಜ ಮತ್ತು ಗೊಬ್ಬರವನ್ನು ಒಂದರ ಮೇಲೆ ಒಂದು ಬೀಳುವಂತೆ ಬಿತ್ತನೆ ಮಾಡುತ್ತವೆ. ಆದರೆ, ಈ ಕೂರಿಗೆಯಲ್ಲಿ ಎರಡು ಇಂಚು ಅಂತರದಲ್ಲಿ ಬೀಳುವಂತೆ ಮಾಡಲಾಗಿದೆ. ಬೀಜದ ಮೇಲೆ ಗೊಬ್ಬರ ಬಿದ್ದರೆ ಮಳೆ ಕಡಿಮೆ ಇದ್ದಾಗ ಅಥವಾ ತೇವಾಂಶ ಇರದಿದ್ದರೆ ಗೊಬ್ಬರದಿಂದ ಬೀಜ ಸುಟ್ಟಂತಾಗುತ್ತದೆ. ಬೀಜ ಮೊಳಕೆ ಬರುವುದೇ ಇಲ್ಲ. ಆದರೆ, ಎರಡು ಇಂಚು ಅಂತರದಲ್ಲಿ ಬೀಳುವುದರಿಂದ ಮಳೆ ಬಾರದಿದ್ದರೂ ಗೊಬ್ಬರದಿಂದ ಬೀಜಕ್ಕೆ ಹಾನಿಯಾಗುವುದಿಲ್ಲ. ಮಳೆ ಬಂದು ಮೊಳಕೆ ಬಂದ ನಂತರ ಪಕ್ಕದಲ್ಲಿನ ಗೊಬ್ಬರವನ್ನು ಮೊಳಕೆ ಹೀರಿಕೊಳ್ಳುತ್ತದೆ. ಆಗ ಮೊಳಕೆಯೂ ಉತ್ತಮವಾಗಿ ಬೆಳೆಯುತ್ತದೆ. ಈ ಕೂರಿಗೆ ಅಭಿವೃದ್ಧಿ ಕಾರ್ಯ ಸಾಗಿದ್ದು, ಇನ್ನೂ ಸಂಶೋಧನಾ ಹಾದಿಯಲ್ಲಿದೆ’ ಎಂದು ದೇವರಾಜ್ ತಿಳಿಸಿದರು.


ಕೃಷಿ ಮೇಳ 2020 ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ರಾಗಿ ತಳಿಯನ್ನು ಕುತೂಹಲದಿಂದ ವೀಕ್ಷಿಸಿದರು

‘ಸಮಗ್ರ ಕೃಷಿ; ಹೆಚ್ಚು ಖುಷಿ’

ಬೆಂಗಳೂರು: ನಗರದ ಗಾಂಧಿ ಕೃಷಿವಿಜ್ಞಾನ ಕೇಂದ್ರದ (ಜಿಕೆವಿಕೆ) ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಎರಡನೇ ದಿನವೂ ಹೆಚ್ಚು ಜನ ಕಂಡು ಬರಲಿಲ್ಲ. ಕೋವಿಡ್‌ ಮಾರ್ಗಸೂಚಿ ಅಡಿಯ ನಿರ್ಬಂಧಗಳು ಮತ್ತು ಆನ್‌ಲೈನ್‌ ಮೂಲಕವೇ ಅನ್ನದಾತರೊಂದಿಗೆ ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿರುವುದರಿಂದ ಹೆಚ್ಚು ರೈತರು ಮೇಳದತ್ತ ಸುಳಿಯಲಿಲ್ಲ.

‘ಸಮಗ್ರ ಕೃಷಿಗೆ ಆದ್ಯತೆ ನೀಡುವ ಮೂಲಕ ಕೃಷಿಕರು ಆರ್ಥಿಕವಾಗಿ ಸಬಲರಾಗಬೇಕಾದ ಅಗತ್ಯವಿದೆ’ ಎಂದು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎನ್. ಕಟ್ಟಿಮನಿ ಹೇಳಿದರು.

ಮೇಳದಲ್ಲಿ ಗುರುವಾರ ಸಾಧಕ ರೈತರನ್ನು ಸನ್ಮಾನಿಸಿ ಮಾತನಾಡಿದ ಅವರು, ‘ಹೊಸ ತಂತ್ರಜ್ಞಾನಗಳನ್ನು, ವಿಭಿನ್ನ ಮಾದರಿಗಳನ್ನು ಅನುಸರಿಸಿ ಯಶಸ್ವಿಯಾದವರು, ತಮ್ಮ ಯಶಸ್ಸಿನ ಗುಟ್ಟನ್ನು ತಮ್ಮ ನೆರೆಹೊರೆಯ ರೈತರಿಗೂ ಹೇಳಿಕೊಡಬೇಕು’ ಎಂದು ಮನವಿ ಮಾಡಿದರು.

ವಿಡಿಯೊ ಸಂವಾದದ ಮೂಲಕ ಮಾತನಾಡಿದ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ.ಮಂಜುನಾಥ ಕೆ.ನಾಯಕ್‌, ‘ಕೃಷಿ ವಲಯದಲ್ಲಿ ಮಾರುಕಟ್ಟೆೆ ವ್ಯವಸ್ಥೆೆ ಸೇರಿದಂತೆ ಹಲವು ನ್ಯೂನತೆಗಳಿದ್ದು ಅವುಗಳನ್ನು ಸರಿಪಡಿಸುವತ್ತ ಸರ್ಕಾರ ಆಲೋಚಿಸಬೇಕಾಗಿದೆ’ ಎಂದರು.

‘ರೈತರನ್ನು ಮಧ್ಯವರ್ತಿಗಳ ಹಾವಳಿಯಿಂದ ಮುಕ್ತಗೊಳಿಸಬೇಕಾಗಿದೆ. ರೈತರು ಕೂಡ ಎಪಿಎಂಸಿಗಳಿಗೆ ಬಂದು ತಮ್ಮ ಬೆಳೆಗಳನ್ನು ಮಾರಾಟ ಮಾಡಬೇಕು’ ಎಂದು ಸಲಹೆ ನೀಡಿದರು.

ರೈತರಿಗೆ ಪ್ರಶಸ್ತಿ ಸಂಭ್ರಮ: ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌ನ ಆರ್. ರೇಖಾ, ಕೆ.ಎಸ್. ಗಿರಿರಾಜು, ಮಂಡ್ಯದ ಎಚ್.ಎಸ್. ನಿರಂಜನ್, ಮೈಸೂರಿನ ಸುಪ್ರೀತ್‌ ಅವರಿಗೆ ಜಿಲ್ಲಾಮಟ್ಟದ ಪ್ರಗತಿಪರ ರೈತ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಮೂರು ಜಿಲ್ಲೆಗಳ ರೈತರಿಗೆ ತಾಲ್ಲೂಕು ಮಟ್ಟ ಯುವ ರೈತ, ಯುವ ರೈತ ಮಹಿಳಾ ಪ್ರಶಸ್ತಿಗಳನ್ನೂ ವಿತರಿಸಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು