ಗುರುವಾರ , ಜನವರಿ 23, 2020
20 °C
ಮೂರು ಎಕರೆಯಲ್ಲಿ ಕೃಷಿ; ₹2 ರಿಂದ 3 ಲಕ್ಷ ಲಾಭ

ಪಪ್ಪಾಯಿ ಕೃಷಿಯಲ್ಲಿ ಸಂತೃಪ್ತ ಬದುಕು

ಸಿದ್ದು ತ.ಹತ್ತಳ್ಳಿ Updated:

ಅಕ್ಷರ ಗಾತ್ರ : | |

Prajavani

ತಾಂಬಾ: ಕೆಲ ವರ್ಷಗಳಿಂದ ಮಳೆರಾಯನ ಮುನಿಸಿನಿಂದ ಜಿಲ್ಲೆಯ ರೈತರು ಬಸವಳಿದಿದ್ದಾರೆ. ಆದರೆ, ಇಲ್ಲೊಬ್ಬ ರೈತ ಬರಗಾಲದ ಬವಣೆಯ ಮಧ್ಯೆಯೇ ಬರಡು ಭೂಮಿಯಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡು, ಲಾಭದಾಯಕ ಪಪ್ಪಾಯಿ ಬೆಳೆಯುವ ಮೂಲಕ ಸೈ ಎನ್ನಿಸಿಕೊಂಡಿದ್ದಾರೆ.

ತಾಂಬಾ ಗ್ರಾಮದ ಪ್ರಗತಿಪರ ರೈತ ಗುರಲಿಂಗಪ್ಪ (ಬಾಬು) ಸಂಗಪ್ಪ ಅವಟಿ ಈ ಸಾಧನೆ ಮಾಡಿದವರು. ಇವರ ಈ ದುಡಿಮೆ ಯುವ ರೈತರಿಗೆ ಮಾದರಿಯಾಗಿದೆ.

ಬರಡು ಭೂಮಿಯಲ್ಲಿ ಏನೂ ಬೆಳೆಯಲಾಗದು ಎಂದು ಅರಿತು ಕೂಲಿ ಕೆಲಸದತ್ತ ಮುಖ ಮಾಡಿದ್ದೆ. ಆದರೆ, ಬದಲಾದ ಕಾಲಘಟ್ಟದಲ್ಲಿ ಬರಡು ಭೂಮಿಯಲ್ಲೇ ಕೃಷಿ ಕೈಗೊಂಡು, ಇದೀಗ ಬಂಪರ್ ಫಸಲು ಪಡೆಯುತ್ತಿದ್ದೇನೆ’ ಎಂದು ಹೇಳಿದಾಗ ಅವರ ಮೊಗದಲ್ಲಿ ಸಾಧನೆ ಎದ್ದು ಕಾಣುತ್ತಿತ್ತು.

ಮೂರು ಎಕರೆ ಜಮೀನಿನಲ್ಲಿ ಇವರು ಪಪ್ಪಾಯಿ ಬಳೆದಿದ್ದಾರೆ. ಈಗಾಗಲೇ ಅದರಲ್ಲಿ ಸಂತೃಪ್ತಿ ಎನ್ನುವಷ್ಟು ಲಾಭ ಪಡೆದಿದ್ದಾರೆ. ಮೊದಲು ಒಂದು ಟನ್‌ಗೆ ₹8ರಿಂದ 12 ಸಾವಿರ ದರ ಇತ್ತು. ಆದರೆ, ಈಗ ಒಂದು ಟನ್‌ಗೆ ₹20ರಿಂದ ₹23ಸಾವಿರ ದರ ಇದೆ.

ಪಪ್ಪಾಯಿ ಬೆಳೆಗಾಗಿ ಇದೇ ಗ್ರಾಮದಲ್ಲಿರುವ ಇನ್ನೊಂದು ಭೂಮಿಯಲ್ಲಿ ಕೊಳವೆ ಬಾವಿ ಕೊರಸಿ, ಅಲ್ಲಿಂದ ಪೈಪ್‌ಲೈನ್‌ ಮಾಡಿಕೊಂಡಿದ್ದಾರೆ. ಒಂದು ಸಲ ಸಸಿಗಳನ್ನು ನೆಟ್ಟರೆ ಅಂದಾಜು ನೂರು ಟನ್ ಫಸಲು ಕೈಸೇರುತ್ತದೆ. ಹೀಗಾಗಿ ಧಾರಣಿ ಕುಸಿದರೂ ತೊಡಗಿಸಿದ ಬಂಡವಾಳಕ್ಕೆ ಮೋಸವಿಲ್ಲ.

‘ಒಂದೊಂದು ಹಣ್ಣು 2 ರಿಂದ 3 ಕೆ.ಜಿ ತೂಗುತ್ತವೆ. ಪ್ರಸ್ತುತ ಮಾರುಕಟ್ಟಿಯಲ್ಲಿ ಒಂದು ಕೆ.ಜಿ.ಗೆ ₹15 ಧಾರಣೆ ಇದೆ. ಎಕರೆಗೆ ಕನಿಷ್ಠ ₹20 ರಿಂದ 24 ಸಾವಿರ ಖರ್ಚಾಗುತ್ತದೆ. ಇದನ್ನು ತೆಗೆದು ₹2 ರಿಂದ 3 ಲಕ್ಷ ಲಾಭ ಪಡೆಯಬಹುದು’ ಎಂದು ಖುಷಿಯಿಂದಲೇ ಹೇಳಿದರು.

ತಡವಲಗಾದ ಪ್ರಗತಿಪರ ರೈತ ಮಳಸಿದ್ದಪ್ಪ ಇಂಡಿ ಅವರ ಸಲಹೆ ಪಡೆದಿರುವ ಗುರಲಿಂಗಪ್ಪ, ಮೊದಲ ಯತ್ನದಲ್ಲೇ ಲಾಭ ಗಳಿಸಿದ್ದಾರೆ. ಈ ಭಾಗದಲ್ಲಿ ಅಪರೂಪವಾಗಿರುವ ಪಪ್ಪಾಯಿ ವೀಕ್ಷಿಸಲು ಸುತ್ತಲಿನ ಹಳ್ಳಿಗಳ ರೈತರು ಭೇಟಿ ನೀಡಿ, ಮಾಹಿತಿ ಪಡೆಯುತ್ತಿದ್ದಾರೆ.

‘ನನ್ನ ಸಂಬಂಧಿಕರೊಬ್ಬರು ಪಪ್ಪಾಯಿ ಬೆಳೆದಿದ್ದರು. ನನಗೆ ಕೃಷಿಯಲ್ಲಿ ಹೆಚ್ಚು ಆಸಕ್ತಿ ಇರುವುದರಿಂದ ನಾನೂ ಪಪ್ಪಾಯಿ ಕೃಷಿ ಕೈಗೊಂಡೆ. ಕೃಷಿಯಿಂದ ವಿಮುಖರಾಗುತ್ತಿರುವ ಯುವಕರು ನನ್ನಂತೆ ಸ್ವಾವಲಂಬಿ ಬದುಕು ರೂಪಿಸಿಕೊಂಡರೆ ಖುಷಿಯಾಗುತ್ತದೆ’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು