ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆಯಿಂದ ನೆರೆ ವೀಕ್ಷಣೆ ಬಿಜೆಪಿ ಮುಖಂಡರ ತಂಡ

ಶಾಸಕ ಕೆ.ಎಸ್.ಈಶ್ವರಪ್ಪ ಮಾಹಿತಿ
Last Updated 8 ಆಗಸ್ಟ್ 2019, 13:41 IST
ಅಕ್ಷರ ಗಾತ್ರ

ಶಿವಮೊಗ್ಗ: ರಾಜ್ಯದ ಹಲವೆಡೆ ಜಲಪ್ರಳಯವಾಗಿದೆ. ಸಂಕಷ್ಟಕ್ಕೆ ಸಿಲುಕಿರುವ ಪ್ರದೇಶಗಳ ಪರಿಸ್ಥಿತಿ ಅವಲೋಕಿಸಲು ಬಿಜೆಪಿ ಮುಖಂಡರನ್ನು ಒಳಗೊಂಡ ನಾಲ್ಕು ತಂಡ ರಚಿಸಲಾಗಿದೆ. ಆ.9ರಿಂದ ಮೂರು ದಿನ ಈ ತಂಡಗಳು ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ ಸರ್ಕಾರಕ್ಕೆ ವರದಿ ನೀಡಲಿವೆ ಎಂದು ಶಾಸಕ ಕೆ.ಎಸ್ ಈಶ್ವರಪ್ಪ ಹೇಳಿದರು.

ಮಳೆ, ಪ್ರವಾಹದ ಪರಿಣಾಮ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಬಿಜೆಪಿ ಶಾಸಕರು ತಮ್ಮ ಕ್ಷೇತ್ರಗಳ ಪರಿಸ್ಥಿತಿಯ ಮೇಲೆ ನಿಗಾವಹಿಸಿದ್ದಾರೆ. ತಾವು, ಸಿ.ಟಿ ರವಿ ಅವರನ್ನು ಒಳಗೊಂಡ ತಂಡ ಕೊಡಗು, ಹಾಸನ, ಶಿವಮೊಗ್ಗ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಪೂಜಾರಿ ನೇತೃತ್ವದ ತಂಡಗಳು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಚರಿಸುವರು. ಆಯಾ ಕ್ಷೇತ್ರಗಳ ಜನಪ್ರತಿನಿಧಿಗಳು, ಅಧಿಕಾರಿಗಳ ಜತೆ ಚರ್ಚಿಸಿ, ವರದಿ ಸಿದ್ಧಪಡಿಸಲಾಗುವುದು ಎಂದರು.

ಸಚಿವ ಸಂಪುಟ ಅಸ್ತಿತ್ವದಲ್ಲಿ ಇಲ್ಲದಿರುವುದು ಹಿನ್ನಡೆ ಎಂದು ಒಪ್ಪಿಕೊಂಡ ಈಶ್ವರಪ್ಪ ಅವರು, ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಇದು ಅನಿವಾರ್ಯ. ಹಿಂದೆ ಬರಪರಿಸ್ಥಿತಿ ಪರಿಶೀಲಿಸಲು ಸರ್ಕಾರವೇ ಇತ್ತೇ? ಈಗ ಸಚಿವ ಸಂಪುಟ ಇಲ್ಲದಿದ್ದರೂ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ನಡೆದಿದೆ. ವಾರದ ಒಳಗೆ ಸಚಿವರ ಸಂಪುಟ ರಚನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಂಭವನೀಯ ಸಚಿವರನ್ನೇ ರಾಜ್ಯದ ಪ್ರವಾಹ ಪರಿಸ್ಥಿತಿ ಅಧ್ಯಯನಕ್ಕೆ ನೇಮಕ ಮಾಡಲಾಗಿದೆಯೇ ಎಂಬ ಪ್ರಶ್ನೆಗೆ, ತಂಡದಲ್ಲಿ ಹಿರಿಯ ನಾಯಕರು ಇದ್ದಾರೆ. ಸಂಭವನೀಯ ಸಚಿವರು ಇರಬಹುದು. ಇಲ್ಲದೆಯೂ ಇರಬಹುದು ಎಂದು ಪ್ರತಿಕ್ರಿಯಿಸಿದರು.

50 ವರ್ಷಗಳ ಹಿಂದೆ ಕಂಡಂತ ಮಳೆ ಶಿವಮೊಗ್ಗದಲ್ಲಿ ಈಗ ಕಾಣುತ್ತಿದ್ದೇವೆ ಎಂದು ಹಿರಿಯರು ಹೇಳುತ್ತಿದ್ದಾರೆ. ಜಿಲ್ಲಾಡಳಿತ ಮಳೆಹಾನಿ ನಿರ್ವಹಣೆಗೆ ಎಲ್ಲಾ ಪ್ರಯತ್ನವನ್ನು ಮಾಡುತ್ತಿದೆ. ನಗರದ ನಾಲ್ಕುಕಡೆ ಗಂಜಿಕೇಂದ್ರ ತೆರೆಯಲಾಗಿದೆ. ಪರಿಹಾರ ಕೆಲಸಗಳಿಗೆ ಜಿಲ್ಲಾಧಿಕಾರಿ ಬಳಿ ಸಾಕಷ್ಟು ಹಣ ಇದೆ. ಯಾವುದೇ ತೊಂದರೆ ಇಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ, ಉಪ ಮೇಯರ್ ಎಸ್‌.ಎನ್‌.ಚನ್ನಬಸಪ್ಪ, ಬಿಜೆಪಿ ಮುಖಂಡರಾದ ದತ್ತಾತ್ರಿ, ಡಿ.ಎಸ್ ಅರುಣ್, ಎನ್‌.ಜೆ.ರಾಜಶೇಖರ್, ರುದ್ರೇಶ್, ಮಧುಸೂಧನ್, ನಾಗರಾಜ್, ಜ್ಞಾನೇಶ್ವರ್, ಅಣ್ಣಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT