ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಿಶಿನ ಗಣೇಶ ಅಭಿಯಾನ

10 ಲಕ್ಷ ಕುಟುಂಬಗಳಿಗೆ ಅರಿವು ಮೂಡಿಸುವ ಗುರಿ: ಕೆಎಸ್‌ಪಿಸಿಬಿ ಯೋಜನೆ
Last Updated 5 ಆಗಸ್ಟ್ 2020, 23:10 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು (ಕೆಎಸ್‌ಪಿಸಿಬಿ) ಈ ಬಾರಿ ‘ಅರಿಶಿನ ಗಣೇಶ’ ಅಭಿಯಾನ ಕೈಗೊಂಡಿದೆ.

ಕೊರೊನಾ ಸೋಂಕು ಎಲ್ಲೆಡೆ ವ್ಯಾಪಿಸುತ್ತಿರುವ ಪರಿಣಾಮ ಈ ಸಲ ಸಾರ್ವಜನಿಕ ಗಣೇಶೋತ್ಸವ ನಡೆಸುವಂತಿಲ್ಲ. ಜನರು ಒಂದೆಡೆ ಗುಂಪಾಗಿ ಸೇರುವಂತಿಲ್ಲ.ಹೀಗಾಗಿ ಪರಿಸರಸ್ನೇಹಿ ಗಣೇಶ ವಿಗ್ರಹಗಳನ್ನು ಮನೆಗಳಲ್ಲಿಯೇ ತಯಾರಿಸಿ, ಆರಾಧಿಸುವ ಸಂಬಂಧ ಅರಿಶಿನ ಗಣೇಶ ಅಭಿಯಾನವನ್ನು ಮಂಡಳಿ ಪ್ರಾರಂಭಿಸಿದೆ.

ಆ.22ರಿಂದ ಸೆ.11ರವರೆಗೆ ಈ ಅಭಿಯಾನ ನಡೆಯಲಿದ್ದು, ಪೂರ್ವಭಾವಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅರಿಶಿನ ಗಣಪತಿ ಆರಾಧನೆಯ ಮಹತ್ವ ಸಾರಲಾಗುತ್ತಿದೆ. ಹಬ್ಬದ ಅವಧಿಯಲ್ಲಿ ಅರಿಶಿನ ಗಣೇಶ ವಿಗ್ರಹಗಳನ್ನೇ ಪ್ರತಿಷ್ಠಾಪಿಸುವಂತೆ 10 ಲಕ್ಷ ಮನೆಗಳಲ್ಲಿ ಅರಿವು ಮೂಡಿಸುವ ಗುರಿಯನ್ನು ಮಂಡಳಿ ಹಾಕಿಕೊಂಡಿದೆ. ಈ ಅಭಿಯಾನಕ್ಕೆವಿವಿಧ ಸಂಘ–ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು ಕೈಜೋಡಿಸಿವೆ.

ಹಬ್ಬದ ಆಶಯ ಈಡೇರಲಿದೆ: ‘ಪ್ರತಿವರ್ಷ ಗಣೇಶ ಹಬ್ಬವನ್ನು ಆಡಂಬರವಾಗಿ ಆಚರಿಸುತ್ತೇವೆ. ಆದರೆ, ಈ ವರ್ಷ ಕೊರೊನಾ ಕಾರಣ ಸುರಕ್ಷತೆಯೊಂದಿಗೆ ಹಬ್ಬವನ್ನು ಆಚರಿಸಬೇಕಾಗಿದೆ. ಅರಿಶಿನ ಹೇರಳವಾದ ಔಷಧ ಗುಣ ಹೊಂದಿದೆ. ಕೋವಿಡ್‌ ಸಂದರ್ಭದಲ್ಲಿ ಅದರ ಮಹತ್ವ ಎಲ್ಲರ ಅರಿವಿಗೆ ಬರುತ್ತಿದೆ. ಜನರಲ್ಲಿ ಇದರ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸಲು ಅಭಿಯಾನ ಕೈಗೊಂಡಿದ್ದೇವೆ’ ಎಂದು ಮಂಡಳಿಯ ಸದಸ್ಯ ಕಾರ್ಯದರ್ಶಿ ಶ್ರೀನಿವಾಸಲು ತಿಳಿಸಿದರು.

‘ಹಾಲಿನ ಪ್ಯಾಕೆಟ್‌ಗಳು, ಅಗರಬತ್ತಿ ಪೊಟ್ಟಣಗಳು, ಬಸ್‌ ಟಿಕೆಟ್‌ಗಳಲ್ಲಿ ಈ ಬಗ್ಗೆ ಸಂದೇಶ ಸಾರಲಾಗುತ್ತದೆ. ಈ ರೀತಿ ಗಣೇಶ ವಿಗ್ರಹವನ್ನು ತಯಾರಿಸುವುದರಿಂದ ಮಣ್ಣಿನ ರಕ್ಷಣೆಯೂ ಆಗುತ್ತದೆ. ಅರಿಶಿನ ವಿಗ್ರಹ ತಯಾರಿಸಿದವರು ಮಂಡಳಿಯ ಫೇಸ್‌ಬುಕ್ ಪುಟಕ್ಕೆ ಪೋಸ್ಟ್‌ ಮಾಡಲು ಅವಕಾಶ ಕಲ್ಪಿಸಲಾಗಿದೆ’ ಎಂದರು.

ಹೀಗೆ ತಯಾರಿಸಿ ಅರಿಶಿನ ಗಣೇಶ

*ಅರಿಶಿನ ಪುಡಿಗೆ ಮೈದಾ, ಅಕ್ಕಿ ಅಥವಾ ರಾಗಿ ಹಿಟ್ಟಿನಲ್ಲಿ ಯಾವುದಾದರು ಒಂದನ್ನು ಸಮಾನವಾಗಿ ಮಿಶ್ರಣ ಮಾಡಿಕೊಳ್ಳುವುದು

*7ರಿಂದ 8 ಚಮಚದಷ್ಟು ಸಕ್ಕರೆ ಪುಡಿ ಸೇರಿಸುವುದು

*ಮಿಶ್ರಣ ಹದ ಮಾಡಿಕೊಳ್ಳಲು ಬೇಕಾದಷ್ಟು ನೀರು ಬಳಸುವುದು

*ವಿಗ್ರಹಕ್ಕೆ ಕಣ್ಣಿನ ರೂಪದಲ್ಲಿಮೆಣಸಿನ ಕಾಳುಗಳನ್ನು ಅಳವಡಿಸುವುದು

*ವಿಗ್ರಹ ತಯಾರಿಸಿದ ಬಳಿಕಹೂವಿನಿಂದ ಅಲಂಕಾರ ಮಾಡುವುದು

* ಅರಿಶಿನ ಗಣೇಶನನ್ನು ಮನೆಯಲ್ಲಿಯೇ ವಿಸರ್ಜಿಸಬೇಕು. ವಿಗ್ರಹ ಕರಗಿದ ನೀರನ್ನು ಸೋಂಕು ನಿವಾರಕದ ರೂಪದಲ್ಲಿ ಮನೆಗೆ ಸಿಂಪಡಿಸಬಹುದು

- ಶ್ರೀನಿವಾಸಲು, ಕೆಎಸ್‌ಪಿಸಿಬಿ ಸದಸ್ಯ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT