ವಿಜಯಪುರ ಚುನಾವಣೆ: ಕೊನೆ ಕ್ಷಣದಲ್ಲಿ ಜಾತಿ–ಕಾಂಚಾಣದ ಕರಾಮತ್ತು..!

7

ವಿಜಯಪುರ ಚುನಾವಣೆ: ಕೊನೆ ಕ್ಷಣದಲ್ಲಿ ಜಾತಿ–ಕಾಂಚಾಣದ ಕರಾಮತ್ತು..!

Published:
Updated:
Deccan Herald

ವಿಜಯಪುರ: ಮತದಾನಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಇದರ ಬೆನ್ನಿಗೆ ಬುಧವಾರ ರಾತ್ರಿಯಿಂದಲೇ ಅಖಾಡದ ಚಿತ್ರಣವೂ ವಿಭಿನ್ನ ಸ್ವರೂಪ ಪಡೆದಿದೆ. ಏಕಪಕ್ಷೀಯ ಎಂದೇ ಬಿಂಬಿತಗೊಂಡಿದ್ದ ಚುನಾವಣಾ ಕಣದಲ್ಲಿ ಇದೀಗ ಜಾತಿ, ಕುರುಡು ಕಾಂಚಾಣದ ಕರಾಮತ್ತು ಬಿರುಸುಗೊಂಡಿದೆ.

ಬಾಗಲಕೋಟೆ ಜಿಲ್ಲೆಯಲ್ಲಿ ಬಿಜೆಪಿಯ ಪ್ರಾಬಲ್ಯ ಮುರಿಯಲಿಕ್ಕಾಗಿ ಕಾಂಗ್ರೆಸ್‌ ಅಭ್ಯರ್ಥಿಯ ಸಹೋದರರಾಗಿರುವ ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ, ತಮ್ಮ ಕೊನೆ ಕ್ಷಣದ ‘ಕೈ’ ಚಳಕ ಪ್ರದರ್ಶಿಸಿದ್ದಾರೆ. ಇದು ಎಷ್ಟರ ಮಟ್ಟಿಗೆ ಪರಿಣಾಮ ಬೀರಿದೆ ಎಂಬುದು ಮತ ಎಣಿಕೆ ಬಳಿಕ ಜಗಜ್ಜಾಹೀರಾಗಲಿದೆ.

ವಿಜಯಪುರ ಜಿಲ್ಲೆಯಲ್ಲಿನ ಹೊಂದಾಣಿಕೆ ರಾಜಕಾರಣಕ್ಕೆ ಇತಿಶ್ರೀ ಹಾಕಲು, ಎಂ.ಬಿ.ಪಾಟೀಲ ಪ್ರಭಾವ ತಗ್ಗಿಸಲು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ವಿಧಾನ ಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ಜಿಲ್ಲೆಯಲ್ಲೇ ಮೂರು ದಿನಗಳಿಂದ ಬೀಡು ಬಿಟ್ಟಿದ್ದಾರೆ. ಮನೆಯೊಂದು ನೂರು ಬಾಗಿಲು ಎಂಬಂಥ ಸ್ಥಿತಿಯಲ್ಲಿದ್ದ ಪಕ್ಷದ ಮುಖಂಡರನ್ನು ಒಂದೇ ವೇದಿಕೆಗೆ ಕರೆ ತಂದಿದ್ದಾರೆ.

ಪಕ್ಷದ ಪ್ರಮುಖರು ಯಥಾಪ್ರಕಾರ ಕಾಂಗ್ರೆಸ್‌ನ ಪ್ರಭಾವಿ ನಾಯಕನೊಟ್ಟಿಗೆ ‘ಕೈ’ ಜೋಡಿಸದಂತೆ ಕಣ್ಗಾವಲಿರಿಸಿದ್ದು, ಜತೆಯಲ್ಲೇ ಪ್ರವಾಸ ನಡೆಸುತ್ತಿರುವುದು ಎಷ್ಟರ ಮಟ್ಟಿಗೆ ಪರಿಣಾಮ ಬೀರಲಿದೆ ಎಂಬುದನ್ನು ಫಲಿತಾಂಶವೇ ನಿರ್ಧರಿಸಲಿದೆ.

ಹಣದ ಹೊಳೆ:

‘ಕಾಂಗ್ರೆಸ್‌, ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡುವಂತೆ, ಮತದಾರರಿಗೆ ಅಭ್ಯರ್ಥಿಗಳ ಬೆಂಬಲಿಗರು ವ್ಯವಸ್ಥಿತ ಜಾಲದ ಮೂಲಕ ತಲಾ ₹ 10000 ನಗದನ್ನು ವ್ಯವಸ್ಥಿತವಾಗಿ ತಲುಪಿಸುತ್ತಿದ್ದಾರೆ. ಇದರಲ್ಲಿ ಕಾಂಗ್ರೆಸ್ಸಿಗರೇ ಮುಂಚೂಣಿಯಲ್ಲಿದ್ದಾರೆ. ಎಲ್ಲರನ್ನೂ ತಲುಪಿದ್ದಾರೆ.

ನಮ್ಮ ಅಭ್ಯರ್ಥಿಗೆ ಯಾರ ಮೇಲೂ ವಿಶ್ವಾಸವಿಲ್ಲ. ನನ್ನ ಗೆಲುವು ಶತಸಿದ್ಧ ಎಂಬ ಆತ್ಮವಿಶ್ವಾಸದಲ್ಲಿ ಮೌನಿಯಾಗಿದ್ದಾರೆ. ಪಕ್ಷದ ಬೆಂಬಲಿತ ಸದಸ್ಯರಿಗಷ್ಟೇ ತಲಾ ₹ 10000 ನೀಡುತ್ತಿದ್ದಾರೆ. ವಿವಿಧೆಡೆಯಿಂದ ‘ನಮಗಿನ್ನೂ ವ್ಯವಸ್ಥೆಯಾಗಿಲ್ಲ’ ಎಂಬ ಮೊಬೈಲ್‌ ಕರೆಗಳ ಮಹಾಪೂರವೇ ಬಂದಿದೆ’ ಎಂದು ಬಿಜೆಪಿ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ಅಂತಿಮ ಕ್ಷಣದ ಕರಾಮತ್ತುಗಳ ಮಾಹಿತಿ ನೀಡಿದರು.

‘ಕಾಂಗ್ರೆಸ್ಸಿಗರು ಮೊದಲಿನಿಂದಲೂ ಚುನಾವಣೆಯನ್ನು ವ್ಯವಸ್ಥಿತವಾಗಿ ನಡೆಸಿದ್ದಾರೆ. ನಮ್ಮಲ್ಲಿ ಇಂದಿಗೂ ಇದು ತಳಹಂತಕ್ಕೆ ತಲುಪಿಲ್ಲ. ರವಿಕುಮಾರ್‌ ಕಸರತ್ತು ನಡೆಸಿದ್ದಾರೆ. ಎರಡ್ಮೂರು ದಿನಗಳಿಂದ ಜಾತಿಯೂ ಚಾಲ್ತಿಯಾಗಿದೆ. ಇದೀಗ ಎಲ್ಲವೂ ಸೇರಿದ್ದರಿಂದ ನಾವು ಸ್ಪರ್ಧೆಯ ಮುಂಚೂಣಿಯಲ್ಲಿದ್ದೇವೆ.

ಬಾಗಲಕೋಟೆ ಜಿಲ್ಲೆಯಲ್ಲಿ ಮುನ್ನಡೆ ಗಳಿಸುವುದು ಶತಸಿದ್ಧ. ವಿಜಯಪುರದಲ್ಲಿ ಕಸರತ್ತು ನಡೆಸಿದ್ದೇವೆ. ಎಲ್ಲರೂ ಸಾಥ್‌ ನೀಡಿದ್ದಾರೆ. ಮತದಾನ ಯಾವ ಪ್ರಮಾಣದಲ್ಲಿ ನಡೆಯಲಿದೆ ಎಂಬುದು ಫಲಿತಾಂಶ ನಿರ್ಧರಿಸಲಿದೆ’ ಎಂದು ಮತ್ತೊಬ್ಬ ಮುಖಂಡರು ತಿಳಿಸಿದರು.

ಇದರ ನಡುವೆ ಚುನಾವಣಾ ಕಣದಲ್ಲಿ ಪ್ರಚಾರ–ಅಪ ಪ್ರಚಾರವೂ ಬಿರುಸಾಗಿದೆ. ಮತದಾನಕ್ಕೂ ಮುನ್ನಾ ದಿನ ಬುಧವಾರ ‘ಬಿಜೆಪಿ ಅಭ್ಯರ್ಥಿಗೆ ಮತ ಹಾಕಬೇಡಿ, ಬಿಜೆಪಿ ನಿಷ್ಠಾವಂತರ ಮೋರ್ಚಾ’ ಹೆಸರಿನ ಕರಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ತೀವ್ರ ಸಂಚಲನವನ್ನು ಮೂಡಿಸಿದೆ.

ಮತದಾರರು

ವಿಜಯಪುರ, ಬಾಗಲಕೋಟೆ ಜಿಲ್ಲೆಯ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಮಹಾನಗರ ಪಾಲಿಕೆ, ಗ್ರಾಮ ಪಂಚಾಯ್ತಿ, ಪುರಸಭೆ, ಪಟ್ಟಣ ಪಂಚಾಯ್ತಿ, ವಿಧಾನಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು ಮತದಾನದ ಹಕ್ಕು ಹೊಂದಿದ್ದಾರೆ.

ಬೆಳಿಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ. ಮತ ಹಕ್ಕು ಹೊಂದಿರುವ ಮತದಾರರು ಚುನಾವಣಾ ಆಯೋಗ ನಿಗದಿಪಡಿಸಿದ 12 ಇತರೆ ದಾಖಲೆಗಳನ್ನು ಪ್ರದರ್ಶಿಸಿ ಮತ ಚಲಾಯಿಸಬಹುದು.

ಮತ ಚಲಾಯಿಸುವ ವಿಧಾನ

ಚುನಾವಣಾಧಿಕಾರಿ ಮತಪತ್ರದೊಡನೆ ನೀಡುವ ನೇರಳೆ ಬಣ್ಣದ ಸ್ಕೆಚ್ ಪೆನ್‌ ಮಾತ್ರ ಬಳಸಿ ಮತ ಚಲಾಯಿಸಬೇಕು. ಬೇರೆ ಯಾವುದನ್ನು ಬಳಸುವಂತಿಲ್ಲ. ಮತ ಚಲಾಯಿಸುವ ಅಭ್ಯರ್ಥಿಯ ಹೆಸರಿನ ಮುಂದೆ ‘1’ ಎಂದು ಮಾತ್ರ ನಮೂದಿಸಬೇಕು. ನಂತರ ಬೇರೆ ಅಭ್ಯರ್ಥಿ ಹೆಸರುಗಳ ಮುಂದೆ 2, 3, 4 ನಮೂದಿಸಬಹುದು. ಒಬ್ಬ ಅಭ್ಯರ್ಥಿ ಹೆಸರಿನ ಮುಂದೆ ಒಂದು ಅಂಕಿಯನ್ನು, ಒಮ್ಮೆ ಮಾತ್ರ ದಾಖಲಿಸಬೇಕು.

* * *

ವಿಧಾನ ಪರಿಷತ್‌ ಚುನಾವಣೆಯ ವಿವರ...

7 ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳು

38 ಮತಗಟ್ಟೆ ಅವಳಿ ಜಿಲ್ಲೆಯಲ್ಲಿ ಹೋಬಳಿಗೊಂದರಂತೆ ರಚನೆ

16 ಅತಿ ಸೂಕ್ಷ್ಮ ಮತಗಟ್ಟೆ

14 ಸೂಕ್ಷ್ಮ ಮತಗಟ್ಟೆ

8 ಸಾಧಾರಣ ಮತಗಟ್ಟೆ

4074 ಪುರುಷ ಮತದಾರರು

4163 ಮಹಿಳಾ ಮತದಾರರು

8237 ಒಟ್ಟು ಮತದಾರರು

14 ರೂಟ್‌ಗಳಲ್ಲಿ ಮಸ್ಟರಿಂಗ್‌ ಕೇಂದ್ರದಿಂದ ಮತಗಟ್ಟೆಗೆ ತೆರಳಿದ ಚುನಾವಣಾ ಸಿಬ್ಬಂದಿ

152 ಮತಗಟ್ಟೆ ಸಿಬ್ಬಂದಿ ನಿಯೋಜನೆ

1 ಅಧ್ಯಕ್ಷಾಧಿಕಾರಿ ಹಾಗೂ 3 ಜನ ಸಹಾಯಕ ಸಿಬ್ಬಂದಿ ಪ್ರತಿ ಮತಗಟ್ಟೆಗೂ

38 ಜನ ಸೆಕ್ಟರ್ ಅಧಿಕಾರಿಗಳ ನೇಮಕ

ಆಧಾರ: ಚುನಾವಣಾ ಆಯೋಗ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !