ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡಿಯೂರಪ್ಪ ವಿರುದ್ಧ ಮಾತನಾಡುವ ನೈತಿಕತೆ ಮಧು ಬಂಗಾರಪ್ಪಗಿಲ್ಲ: ಬಿ.ವೈ.ರಾಘವೇಂದ್ರ

ಚುನಾವಣಾ ಪ್ರಚಾರ ಸಭೆಯಲ್ಲಿ ವಾಗ್ದಾಳಿ
Last Updated 7 ಏಪ್ರಿಲ್ 2019, 12:02 IST
ಅಕ್ಷರ ಗಾತ್ರ

ಶಿಕಾರಿಪುರ: ‘ಬಗರ್‌ಹುಕುಂ ಸಾಗುವಳಿದಾರರ ಪರ ಹೋರಾಟ ಮಾಡಿದ ಶಾಸಕ ಬಿ.ಎಸ್‌. ಯಡಿಯೂರಪ್ಪ ವಿರುದ್ಧ ಮಾತನಾಡುವ ನೈತಿಕ ಹಕ್ಕು ಜೆಡಿಎಸ್‌ ಅಭ್ಯರ್ಥಿ ಮಧು ಬಂಗಾರಪ್ಪಗೆ ಇಲ್ಲ’ ಎಂದು ಲೋಕಸಭಾ ಚುನಾವಣೆ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ವಾಗ್ದಾಳಿ ನಡೆಸಿದರು.

ತಾಲ್ಲೂಕಿನ ಗಾಮ, ಈಸೂರು, ಚುರ್ಚಿಗುಂಡಿ, ಕಲ್ಮನೆ, ಕಟ್ಟಿಗೆಹಳ್ಳ ಸೇರಿ ವಿವಿಧ ಗ್ರಾಮಗಳಲ್ಲಿ ಭಾನುವಾರ ಪ್ರಚಾರ ನಡೆಸಿ ಮಾತನಾಡಿದರು.

‘ತಾಲ್ಲೂಕಿನಲ್ಲಿ ರೈತರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಒಕ್ಕಲೆಬ್ಬಿಸದಂತೆ ತಡೆಯುವುದಕ್ಕಾಗಿ ಯಡಿಯೂರಪ್ಪ ಪಾದಯಾತ್ರೆ ನಡೆಸುವ ಮೂಲಕ ಹೋರಾಟ ನಡೆಸಿದ್ದರು. ಮಧು ಬಂಗಾರಪ್ಪ ಸೊರಬ ಕ್ಷೇತ್ರದ ಅಭಿವೃದ್ಧಿ ಮಾಡದ ಹಿನ್ನೆಲೆಯಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕುಮಾರ ಬಂಗಾರಪ್ಪ ಅವರನ್ನು ಜನರು ಗೆಲ್ಲಿಸಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಸೊರಬ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಿದ್ದರು’ ಎಂದರು.

ಯಡಿಯೂರಪ್ಪ ಎಲ್ಲಾ ಜಾತಿ ನಾಯಕರನ್ನು ಬೆಳೆಸುವ ಮೂಲಕ ಸಾಮಾಜಿಕ ನ್ಯಾಯ ನೀಡಿದ್ದಾರೆ. ಈಡಿಗ ಸಮಾಜದ ಕುಮಾರ್‌ ಬಂಗಾರಪ್ಪ, ಹರತಾಳು ಹಾಲಪ್ಪ, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಶ್ರೀನಿವಾಸ್‌ ಕೋಟಾ ಪೂಜಾರಿ ಸೇರಿ ಹಲವು ಶಾಸಕರನ್ನು ಬೆಳೆಸಲು ಆದ್ಯತೆ ನೀಡಿದ್ದಾರೆ. ಜಿಲ್ಲೆಯ ಹಲವು ನೀರಾವರಿ ಯೋಜನೆ ಅನುಷ್ಠಾನಕ್ಕಾಗಿ ಶ್ರಮಿಸಿದ್ದಾರೆ ಎಂದು ಹೇಳಿದರು.

‘5 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಉತ್ತಮ ಆಡಳಿತ ನೀಡಿದ್ದಾರೆ. ರೈತರನ್ನು ಗೌರವಿಸಲು ಕೃಷಿ ಸಮ್ಮಾನ್‌ ಯೋಜನೆ ಜಾರಿಗೆ ತಂದಿದ್ದಾರೆ. ದೇಶದ ರಕ್ಷಣೆಗಾಗಿ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯನ್ನು ನಾವು ರಕ್ಷಣೆ ಮಾಡಬೇಕು. ಕಳೆದ ಬಾರಿ ಲೋಕಸಭಾ ಸದಸ್ಯನಾಗಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಪಕ್ಷಭೇದ ಮರೆತು ದೇಶದ ರಕ್ಷಣೆಗಾಗಿ ಪ್ರಧಾನಿ ನರೇಂದ್ರ ಮೋದಿಯನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಲು ನನಗೆ ಮತ ನೀಡಿ‌ ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಅರುಂಧತಿ ರಾಜೇಶ್‌, ‘ಶಾಸಕ ಬಿ.ಎಸ್‌. ಯಡಿಯೂರಪ್ಪ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಅವರು ತಾಲ್ಲೂಕಿನ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಈ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗಾಗಿ ಕೋಟ್ಯಾಂತರ ರೂಪಾಯಿ ಅನುದಾನ ನೀಡಿದ್ದಾರೆ. ಈ ಚುನಾವಣೆಯಲ್ಲಿ ರಾಘವೇಂದ್ರ ಅವರಿಗೆ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಪರಮೇಶ್ವರಪ್ಪ, ಟಿಎಪಿಸಿಎಂಎಸ್‌ ಅಧ್ಯಕ್ಷ ಚುರ್ಚಿಗುಂಡಿ ಶಶಿಧರ್‌, ಮುಖಂಡರಾದ ಬಿ.ಡಿ. ಭೂಕಾಂತ್, ರುದ್ರಮುನಿ, ಶಿವಪ್ಪಯ್ಯ, ರೇವಪ್ಪ, ಕೆ.ಜಿ. ಪಾಟೀಲ್‌, ರಾಜೇಶ್‌, ಕಲ್ಮನೆ ಲೋಕೇಶ್‌, ನಾಗರಾಜ್‌, ಶಾಂತಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT