ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ವರದಿಂದ ಬಳಲುತ್ತಿರುವ 50 ಮಂದಿ; ಡೆಂಗಿ ಶಂಕೆ

ಗ್ರಾಮದಲ್ಲಿ ಸಂಚಾರಿ ಆಸ್ಪತ್ರೆ ಆರಂಭ
Last Updated 31 ಮೇ 2019, 19:45 IST
ಅಕ್ಷರ ಗಾತ್ರ

ಮಂಡ್ಯ: ಪ್ಲಾಸ್ಟಿಕ್‌ ಡ್ರಮ್‌ನಲ್ಲಿ ಸಂಗ್ರಹಿಸಿಟ್ಟುಕೊಂಡ ನೀರು ಸೇವಿಸಿದ್ದರಿಂದ, ನಾಗಮಂಗಲ ತಾಲ್ಲೂಕಿನ ಅಣೆಚನ್ನಾಪುರ ಗ್ರಾಮದ 50ಕ್ಕೂ ಜನರು ಜ್ವರದಿಂದ ಬಳಲುತ್ತಿದ್ದಾರೆ. ಈ ಪೈಕಿ 30 ಮಂದಿಯಲ್ಲಿ ಡೆಂಗಿ ಲಕ್ಷಣಗಳು ಕಾಣಿಸಿಕೊಂಡಿವೆ.

ಗ್ರಾಮದಲ್ಲಿ ಕುಡಿಯುವ ನೀರಿನ ಹಾಹಾಕಾರ ಉಂಟಾಗಿದ್ದು, ಎಂಟು ತಿಂಗಳಿನಿಂದ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ.ಲಾಳನಕೆರೆ ಗ್ರಾಮ ಪಂಚಾಯ್ತಿಯು ಖಾಸಗಿ ಕೊಳವೆಬಾವಿಯಿಂದ ನೀರು ಪಡೆದು ಸರಬರಾಜು ಮಾಡುತ್ತಿದೆ. ಗ್ರಾಮದ ಪ್ರತಿ ಮನೆಯ ಮುಂದೆ ಡ್ರಮ್‌ ಇಡಲಾಗಿದ್ದು, ವಾರಕ್ಕೆರಡು ಬಾರಿ ಬರುವ ಟ್ಯಾಂಕರ್‌ ನೀರನ್ನು ತುಂಬಿಸಿಕೊಳ್ಳಲಾಗುತ್ತದೆ.

ಬಿಸಿಲಿನಲ್ಲಿ ಇಟ್ಟಿರುವ ಡ್ರಮ್‌ ಸ್ವಚ್ಛಗೊಳಿಸದ ಕಾರಣ ನೀರು ಕಲುಷಿತಗೊಂಡಿದೆ. ಇದೇ ನೀರು ಕುಡಿದಿದ್ದರಿಂದ 15 ದಿನದಿಂದ ಗ್ರಾಮಸ್ಥರು ಕಾಯಿಲೆ ಬೀಳುತ್ತಿದ್ದಾರೆ.

ಡೆಂಗಿ ಭಯ:ಸಾಮೂಹಿಕವಾಗಿ ಜ್ವರ ಕಾಣಿಸಿಕೊಂಡಿರುವುದರಿಂದ, ಜನರು ಡೆಂಗಿ ಶಂಕೆಯಿಂದ ಭಯಗೊಂಡಿದ್ದಾರೆ. ನಾಲ್ವರ ಪೇಟ್ಲೇಟ್‌ ಸಂಖ್ಯೆ 8 ಸಾವಿರಕ್ಕೆ ಇಳಿದಿದ್ದು ಬೆಂಗಳೂರಿನ ಸೇಂಟ್‌ ಜಾನ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಳ್ಳೂರಿನ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ 10 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಡ್ರಮ್‌ ತೆರೆದು ನೋಡಿದಾಗ ತಳ ಭಾಗದಲ್ಲಿ ಲಾರ್ವಾಗಳು ಕಂಡು ಬಂದವು. ಡ್ರಮ್‌ನಿಂದಾಗಿ ಗ್ರಾಮದಲ್ಲಿ ಸೊಳ್ಳೆಗಳ ಕಾಟ ವಿಪರೀತವಾಗಿದೆ. ಡೆಂಗಿ ಭಯದಿಂದ ಊರಿಗೆ ಊರೇ ಚಿಕಿತ್ಸೆ ಪಡೆಯುತ್ತಿದೆ. ಟ್ಯಾಂಕರ್‌ ಮೂಲಕ ಸರಬರಾಜು ಮಾಡುತ್ತಿರುವ ನೀರಿನ ಗುಣಮಟ್ಟದ ಪರೀಕ್ಷೆ ಮಾಡದೇ ಇರುವುದೂ ಸಮಸ್ಯೆಗೆ ಕಾರಣವಾಗಿದೆ’ ಎಂದು ಎಪಿಎಂಸಿ ಸದಸ್ಯ ಮಂಜೇಶ್‌ ಹೇಳಿದರು.

ಸಂಚಾರಿ ಆಸ್ಪತ್ರೆ ಆರಂಭ:ಜ್ವರ ಪೀಡಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ, ಗ್ರಾಮದಲ್ಲಿ ಸಂಚಾರಿ ಆಸ್ಪತ್ರೆ ಆರಂಭಿಸಲಾಗಿದೆ. ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಗ್ರಾಮದಲ್ಲೇ ಇದ್ದು ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

‘ಜ್ವರಪೀಡಿತರ ರಕ್ತ ಮಾದರಿ ಸಂಗ್ರಹ ಮಾಡಲಾಗಿದ್ದು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಫಲಿತಾಂಶ ಬರಲು ಇನ್ನೆರಡು ದಿನ ಆಗುತ್ತದೆ. ವೈರಲ್‌ ಜ್ವರ ಒಬ್ಬರಿಂದ ಒಬ್ಬರಿಗೆ ಹರಡಿದೆ. ಡ್ರಮ್‌ ಸ್ವಚ್ಛ ಮಾಡದೆ ನೀರು ಕುಡಿದಿರುವುದೇ ಇದಕ್ಕೆ ಕಾರಣ’ ಎಂದು ನಾಗಮಂಗಲ ತಾಲ್ಲೂಕು ವೈದ್ಯಾಧಿಕಾರಿ ಡಾ.ಧನಂಜಯ ಹೇಳಿದರು.

ಅಣೆಚೆನ್ನಾಪುರ ಹಾಗೂ ಸುತ್ತಮುತ್ತಲ ಹಳ್ಳಿಗಳಲ್ಲಿ ನೀರಿಗೆ ಹಾಹಾಕಾರ ಉಂಟಾಗಿರುವ ಬಗ್ಗೆ ‘ಪ್ರಜಾವಾಣಿ’ ಮೇ 15ರಂದು ವಿಸ್ತೃತ ವರದಿ ಪ್ರಕಟಿಸಿತ್ತು.

ಬಿಸಿಯೂಟ ತಯಾರಿಸಲೂ ನೀರಿಲ್ಲ
ಅಣೆಚನ್ನಾಪುರ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ತಯಾರಿಕೆಗೂ ನೀರಿನ ಕೊರತೆ ಎದುರಾಗಿದೆ. ಶಾಲಾ ಮಕ್ಕಳು ಕೂಡ ಡ್ರಮ್‌ನಲ್ಲಿ ಸಂಗ್ರಹಿಸಿರುವ ನೀರು ಕುಡಿಯುತ್ತಿದ್ದು ಹಲವರು ಜ್ವರದಿಂದ ಬಳಲುತ್ತಿದ್ದಾರೆ.

‘ಟ್ಯಾಂಕರ್‌ ನೀರಿನಿಂದ ಅಡುಗೆ ತಯಾರಿಸಲು ಭಯವಾಗುತ್ತದೆ. ಹಲವು ಸಲ ಮನೆಯಿಂದ ನೀರು ತಂದು ಅಡುಗೆ ತಯಾರಿಸಿದ್ದೇನೆ’ ಎಂದು ಬಿಸಿಯೂಟ ಕಾರ್ಯಕರ್ತೆ ನೇತ್ರಾವತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT