ಪಿತೃಪಕ್ಷ: ಕೋಟಿ ಮೀರಿದ ‘ಆಡು–ಕುರಿ’ ವಹಿವಾಟು!

7
ಮೃತಪಟ್ಟ ಪೂರ್ವಜನರ ಪುಣ್ಯಸ್ಮರಣೆ ಹೆಸರಿನಲ್ಲಿ ಭರ್ಜರಿ ಮಾಂಸಾಹಾರ ಉಪಚಾರ

ಪಿತೃಪಕ್ಷ: ಕೋಟಿ ಮೀರಿದ ‘ಆಡು–ಕುರಿ’ ವಹಿವಾಟು!

Published:
Updated:
Deccan Herald

ಮಂಡ್ಯ: ಕಳೆದೊಂದು ವಾರದಿಂದ ಜಿಲ್ಲೆಯಾದ್ಯಂತ ಪಿತೃಪಕ್ಷ ಆಚರಣೆ ನಡೆಯುತ್ತಿದ್ದು ಮಾಂಸಾಹಾರ ಉಪಚಾರ ಭರ್ಜರಿಯಾಗಿ ನಡೆಯುತ್ತಿದೆ. ಹಬ್ಬದ ಅಂಗವಾಗಿ ಆಡುಕುರಿಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದ್ದು ತಾಲ್ಲೂಕಿನ ‘ಹಲ್ಲೇಗೆರೆ ಆಡು–ಕುರಿ ಸಂತೆ’ಯಲ್ಲಿ ವಹಿವಾಟು ₹ 1 ಕೋಟಿ ಮೀರಿದೆ.

ಮಹಾಲಯ ಅಮಾವಾಸ್ಯೆಗೂ (ಅ. 8) ಮೊದಲು ಈ ಹಬ್ಬ ಬಹುತೇಕ ಕಡೆ ಕೊನೆಗೊಳ್ಳುತ್ತದೆ. ಪ್ರತಿ ಬುಧವಾರ ಹಲ್ಲೇಗೆರೆಯಲ್ಲಿ ಸಂತೆ ನಡೆಯುತ್ತದೆ. ಅಮಾವಾಸ್ಯೆಗೂ ಮೊದಲು ನಡೆಯುವ ಸಂತೆಯು ‘ಹಬ್ಬದ ಸಂತೆ’ ಎಂದೇ ಪ್ರಸಿದ್ಧಿ ಪಡೆದಿದೆ. ಅ. 3ರಂದು ನಡೆದ ಹಬ್ಬದ ಸಂತೆಯಲ್ಲಿ ಲಕ್ಷಾಂತರ ಆಡು–ಕುರಿಗಳ ಮಾರಾಟ ನಡೆದಿದೆ. ಜಿಲ್ಲೆ ಮಾತ್ರವಲ್ಲದೆ ಮೈಸೂರು, ಚಾಮರಾಜನಗರ, ರಾಮನಗರ, ಹಾಸನ ಜಿಲ್ಲೆಗಳಿಂದಲೂ ಬಂದು ಜನರು ತಮಗೆ ಇಷ್ಟವಾದ ಆಡು–ಕುರಿ ಖರೀದಿ ಮಾಡಿದ್ದಾರೆ.

ಮೃತಪಟ್ಟ ಪೂರ್ವಜರ ಪುಣ್ಯಸ್ಮರಣೆ ಅಂಗವಾಗಿ ನಡೆಯುವ ಮಾರ್ನೋಮಿ ಹಬ್ಬ ಗ್ರಾಮೀಣ ಭಾಗದಲ್ಲಿ ದೊಡ್ಡ ಆಚರಣೆಯೇ ಆಗಿದೆ. ಬೇರೆ ಬೇರೆ ನಗರಗಳಲ್ಲಿ ನೆಲಸಿರುವ ಜನರು ಪಿತೃಪಕ್ಷಕ್ಕೆ ತಪ್ಪದೇ ಬಂದು ಪೂರ್ವಜರಿಗೆ ಮಾಂಸಾಹಾರದ ಎಡೆ ಇಡುತ್ತಾರೆ. ಸ್ನೇಹಿತರು, ಸಂಬಂಧಿಗಳನ್ನು ಮನೆಗೆ ಆಹ್ವಾನಿಸಿ ಭರ್ಜರಿ ಭೋಜನ ಉಣಬಡಿಸುತ್ತಾರೆ. ಈ ಕಾರಣ ಹಲ್ಲೇಗೆರೆಯಲ್ಲಿ ನಡೆಯುವ ಆಡು–ಕುರಿ ಸಂತೆ ಮಹತ್ವವಾದುದು. ತಮ್ಮ ಮನೆಗೆ ಅವಶ್ಯಕವಾಗಿರುಷ್ಟು 10 ಕೆ.ಜಿಯಿಂದ 30 ಕೆ.ಜಿವರೆಗೆ ಮರಿಗಳನ್ನು ಖರೀದಿ ಮಾಡುತ್ತಾರೆ. ವ್ಯಾಪಾರಿಗಳು ವಿವಿಧ ಭಾಗದಿಂದ ವಿವಿಧ ಜಾತಿಯ ತಳಿಗಳನ್ನು ಇಲ್ಲಿಗೆ ತಂದು ಮಾರಾಟ ಮಾಡುತ್ತಾರೆ.

‘ಪಿತೃಪಕ್ಷ ಹಬ್ಬ ಹಳ್ಳಿಯ ಜನರಿಗೆ ಪ್ರತಿಷ್ಠೆಯ ವಿಷಯವೂ ಆಗಿದೆ. ಎಷ್ಟು ಕೆ.ಜಿ. ಮಾಂಸದ ಅಡುಗೆ ಮಾಡಿದ್ದಾರೆ ಎಂಬ ಮೇಲೆ ಅವರ ಯೋಗ್ಯತೆ ಅಳೆಯಲಾಗುತ್ತದೆ. ಸಾಲ ಮಾಡಿಯಾದರೂ ಭರ್ಜರಿ ಬಾಡೂಟ ಹಾಕುತ್ತಾರೆ. ಈ ಬಾರಿ ಬೆಲೆ ಗಗನಕ್ಕೇರಿದ್ದರೂ ಹಲ್ಲೇಗೆರೆ ಸಂತೆಯಲ್ಲಿ ಆಡು–ಕುರಿ ವ್ಯಾಪಾರ ಜೋರಾಗಿ ನಡೆಯುತ್ತಿದೆ’ ಎಂದು ಹಲ್ಲೇಗೆರೆ ಗ್ರಾಮದ ರೈತರ ಶಿವರಾಜೇಗೌಡ ಹೇಳಿದರು.

ನಸುಕಿನಿಂದಲೇ ವಹಿವಾಟು ಆರಂಭ: ಪ್ರತಿ ಬುಧವಾರ ನಡೆಯುವ ಈ ಸಂತೆಯಲ್ಲಿ ನಸುಕಿನ 5 ರಿಂದಲೇ ವ್ಯಾಪಾರ ಆರಂಭವಾಗುತ್ತದೆ. ವ್ಯಾಪಾರಿಗಳು ಆಟೊ, ಟಿಪ್ಪರ್‌, ಎತ್ತಿನಗಾಡಿಗಳಲ್ಲಿ ಆಡು–ಕುರಿಗಳನ್ನು ತುಂಬಿಕೊಂಡು ಹಿಂದಿನ ದಿನವೇ ಸಂತೆ ಮಾಳಕ್ಕೆ ಬಂದು ವಾಸ್ತವ್ಯ ಹೂಡಿರುತ್ತಾರೆ. ಬೆಳಿಗ್ಗೆ 9.30ಕ್ಕೆ ಸಂತೆ ಮುಗಿದು ಹೋಗುತ್ತದೆ. ನಂತರ ಅದೇ ಜಾಗದಲ್ಲಿ ತರಕಾರಿ ಸಂತೆ ಆರಂಭವಾಗುತ್ತದೆ. ಕೇವಲ ನಾಲ್ಕೈದು ಗಂಟೆ ನಡೆಯುವ ಸಂತೆಯಲ್ಲಿ ವಹಿವಾಟು ಕೋಟಿ ಮೀರುತ್ತದೆ.

ಬುಧವಾರ ನಡೆದ ಸಂತೆಯಲ್ಲಿ ನಾಟಿ ಮರಿಗಳಿಗೆ ಅತಿ ಹೆಚ್ಚು ಬೇಡಿಕೆ ಇತ್ತು. ಮಾಂಸದೂಟ ಹೆಚ್ಚು ರುಚಿಯಾಗಿರುತ್ತದೆ ಎಂಬ ಕಾರಣದಿಂದ ಜನರು ನಾಟಿ ಮರಿಗಳನ್ನು ಕೊಳ್ಳಲು ಮುಗಿ ಬಿದ್ದಿದ್ದರು. ನಾಟಿ ಮರಿಗಳು ಬಂದರೆ ವ್ಯಾಪಾರಿಗಳು ದಾರಿಯಲ್ಲೇ ಕಿತ್ತುಕೊಂಡು ಹಣ ಎಣಿಸಿ ಕೊಡುತ್ತಿದ್ದರು. ನಾಟಿ ಹೋತ, ಆಡು, ಕುರಿಗಳಿಗೆ ಅಪಾರ ಬೇಡಿಕೆ ಇತ್ತು. ವ್ಯಾಪಾರಿಗಳು ರೈತರಿಂದ ನಾಲ್ಕೈದು ಮರಿಗಳನ್ನು ಒಟ್ಟಾರೆಯಾಗಿ ಕೊಂಡು ಒಂದೊಂದಾಗಿ ಮಾರಾಟ ಮಾಡುತ್ತಿದ್ದರು.

‘ಆಂಧ್ರ ಆಡುಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತವೆ. ಅವುಗಳ ಮಾಂಸ ರುಚಿಸುವುದಿಲ್ಲ ಎಂಬ ಕಾರಣಕ್ಕೆ ಬೇಡಿಕೆ ಇಲ್ಲ, ಬೆಲೆಯೂ ಕಡಿಮೆ. ನಿಜವಾದ ಬಂಡೂರು ಕುರಿ, ಟಗರು ಈ ಸಂತೆಗೆ ಬರುವುದಿಲ್ಲ. ಆದರೆ ಬಂಡೂರು ಕಸಿ (ಕ್ರಾಸ್‌) ತಳಿ ಬರುತ್ತದೆ’ ಎಂದು ವ್ಯಾಪಾರಿ ಗೌಸ್‌ಖಾನ್‌ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !