ಶುಕ್ರವಾರ, ಏಪ್ರಿಲ್ 10, 2020
19 °C
ತೋಟಗಾರಿಕೆ ಇಲಾಖೆ ಸುಪರ್ದಿಯಲ್ಲಿ 80 ಗಿಡಗಳಿವೆ

ಮೈಸೂರು ದೊರೆಗಳ ಪ್ರೀತಿಯ ‘ಗಂಜಾಂ ಅಂಜೂರ’

ಗಣಂಗೂರು ನಂಜೇಗೌಡ Updated:

ಅಕ್ಷರ ಗಾತ್ರ : | |

Prajavani

ಶ್ರೀರಂಗಪಟ್ಟಣ: ‘ಗಂಜಾಂ ಅಂಜೂರ, ತುಮಕೂರು ಹಲಸು, ಧಾರವಾಡದ ಆಪೂಸು, ಮಲೆನಾಡಿನ ಅನಾನಸು’- ಇವು 25 ವರ್ಷಗಳ ಹಿಂದೆ ಪ್ರಾಥಮಿಕ ಶಾಲೆಯ ಕನ್ನಡ ಪಠ್ಯ ಪುಸ್ತಕದ ಪದ್ಯದ ಸಾಲುಗಳು.

‘ಗಂಜಾಂ ಅಂಜೂರ’ದ ಹಣ್ಣು ಅಷ್ಟರ ಮಟ್ಟಿಗೆ ಪ್ರಸಿದ್ಧಿ ಪಡೆದಿದೆ. ಆಸ್ಟ್ರೇಲಿಯಾ ಮತ್ತು ಪೂನಾ ಅಂಜೂರ ತಳಿ ಹೊರತುಪಡಿಸಿದರೆ ಇರುವುದು ಇದೊಂದೇ ತಳಿ ಎಂದು ತೋಟಗಾರಿಕಾ ತಜ್ಞರು ಹೇಳುತ್ತಾರೆ. 50 ವರ್ಷಗಳ ಹಿಂದೆ ಕಾವೇರಿ ನದಿ ತೀರದ ಗಂಜಾಂನಲ್ಲಿ 150ಕ್ಕೂ ಹೆಚ್ಚು ಅಂಜೂರ ಹಣ್ಣಿನ ತೋಟಗಳಿದ್ದವು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಸಕ್ತಿಯ ಫಲವಾಗಿ ದಿವಾನ್ ಮಿರ್ಜಾ ಇಸ್ಮಾಯಿಲ್ ಅಂಜೂರ ಬೆಳೆಗಾರರಿಗೆ ತಲಾ 5 ಗುಂಟೆ ಜಮೀನು ನೀಡಿ, ನೀರಾವರಿ ಸೌಲಭ್ಯವನ್ನೂ ಒದಗಿಸಿದ್ದರು.

ಸದ್ಯ ಗಂಜಾಂನಲ್ಲಿ ಉಳಿದಿರುವುದು ಒಂದೇ ಅಂಜೂರದ ತೋಟ. ತೋಟಗಾರಿಕೆ ಇಲಾಖೆ ಸುಪರ್ದಿಯಲ್ಲಿರುವ ಈ ತೋಟದಲ್ಲಿ 80 ಗಿಡಗಳು ಇವೆ. ಅಪರೂಪದ ತಳಿಯನ್ನು ಉಳಿಸಲು ಸಸಿಗಳನ್ನು ಕಸಿ ಮಾಡಿ ಮಾರಾಟ ಮಾಡಲಾಗುತ್ತಿದೆ. ಪ್ರತಿ ಸಸಿಗೆ ₹ 20 ಬೆಲೆ ನಿಗದಿ ಮಾಡಲಾಗಿದೆ.

ಅರಸರಿಗೆ ಅಚ್ಚುಮೆಚ್ಚು: ಗಂಜಾಂ ಅಂಜೂರ ಎಂದರೆ ಮೈಸೂರು ದೊರೆಗಳಿಗೆ ಅಚ್ಚುಮೆಚ್ಚು. ಇಲ್ಲಿ ಬೆಳೆದ ಅಂಜೂರದ ಹಣ್ಣುಗಳನ್ನು ಬಿದಿರು ಬುಟ್ಟಿಗಳಲ್ಲಿ ತುಂಬಿ ಮೈಸೂರು ಅರಮನೆಗೆ ಕೊಂಡೊಯ್ಯಲಾಗುತ್ತಿತ್ತು. ‘ರಾಜ ಪರಿವಾರದವರಿಗೆ ಅಂಜೂರದ ಲಕ್ಕಯ್ಯ ಎಂಬವರು ಅಂಜೂರದ ಹಣ್ಣು ಕೊಟ್ಟು ಬರುವ ಕೆಲಸಕ್ಕೆ ನಿಯೋಜಿತರಾಗಿದ್ದರು. ವಿಶಿಷ್ಟ ಸ್ವಾದಕ್ಕೆ ಹೆಸರಾದ ಈ ಹಣ್ಣುಗಳನ್ನು ಮೈಸೂರು ದೊರೆಗಳು ಬೇರೆ ರಾಜರು ಹಾಗೂ ವಿದೇಶಿ ಗಣ್ಯರಿಗೆ ಉಡುಗೊರೆಯಾಗಿ ನೀಡುತ್ತಿದ್ದರು. ಹಾಗಾಗಿ ಗಂಜಾಂ ಅಂಜೂರ ವಿದೇಶದಲ್ಲೂ ಹೆಸರಾಗಿದೆ’ ಎಂದು ಸಾಹಿತಿ ಪ್ರೊ.ಕರಿಮುದ್ದೀನ್ ಹೇಳುತ್ತಾರೆ.

ಅತ್ತಿಯ ಹಣ್ಣನ್ನೇ ಹೋಲುವ ಅಂಜೂರದ ಹಣ್ಣು ಪೌಷ್ಟಿಕಾಂಶಗಳ ಆಗರ. ರಕ್ತ ಹೀನತೆಯಿಂದ ಬಳಲುವವರಿಗೆ ಇದು ರಾಮಬಾಣ. ಈ ಹಣ್ಣನ್ನು ಸಂಸ್ಕರಿಸಿ ಮಾರಾಟ ಮಾಡುವ ಪದ್ಧತಿ ಈಗ ಚಾಲ್ತಿಯಲ್ಲಿದೆ.

‘ಕಸಿ ಗಿಡ ನಾಟಿ ಮಾಡಿದ ಮೂರು ತಿಂಗಳಿಗೆ ಅಂಜೂರದ ಗಿಡ ಫಲ ಕೊಡಲು ಶುರು ಮಾಡುತ್ತದೆ. ವರ್ಷ ಪೂರ್ತಿ ಫಲ ಬಿಡುವುದು ಇದರ ಲಕ್ಷಣ. ಪೀಚು ಮತ್ತು ಕಾಯಿ ಹಸಿರು ಬಣ್ಣದಿಂದ ಕೂಡಿದ್ದು, ಹಣ್ಣಾದಾಗ ನಸುಗೆಂಪು ಬಣ್ಣಕ್ಕೆ ತಿರುಗುತ್ತದೆ. ಹಣ್ಣು ಮಾಗಿದಂತೆ ಅದರಿಂದ ಸಿಹಿಯಾದ ರಸ ಜಿನುಗುತ್ತದೆ’ ಎಂದು ಗಂಜಾಂನಲ್ಲಿರುವ ಅಂಜೂರದ ತೋಟದ ನೌಕರ ಶ್ರೀನಿವಾಸ್ ಹೇಳುತ್ತಾರೆ.


ಶ್ರೀರಂಗಪಟ್ಟಣದ ಗಂಜಾಂನಲ್ಲಿರುವ ಅಂಜೂರದ ಹಣ್ಣಿನ ತೋಟ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು