ಎಂಟು ಉದ್ಯಾನಗಳಲ್ಲಿ ‘ಹೊರಾಂಗಣ ಜಿಮ್‌’ ನಿರ್ಮಾಣ

7
ಮಕ್ಕಳಿಗೆ ಆಟಿಕೆ, ಹಿರಿಯರಿಗೆ ಕಲ್ಲು ಬೆಂಚು ಅಳವಡಿಕೆ, ಕಾರ್ಯಕ್ರಮಗಳಿಗೆ ಸಣ್ಣದೊಂದು ವೇದಿಕೆ

ಎಂಟು ಉದ್ಯಾನಗಳಲ್ಲಿ ‘ಹೊರಾಂಗಣ ಜಿಮ್‌’ ನಿರ್ಮಾಣ

Published:
Updated:
Deccan Herald

ಮಂಡ್ಯ: ಇನ್ನು ಮುಂದೆ ಬೊಜ್ಜು ಕರಗಿಸಲು ವ್ಯಾಯಾಮ ಶಾಲೆಗೆ (ಜಿಮ್‌) ಸೇರಬೇಕಾಗಿಲ್ಲ. ನಾಲ್ಕು ಗೋಡೆಯ ನಡುವೆ ಬೆವರು ಹರಿಸಬೇಕಾಗಿಲ್ಲ. ಬೆಳಿಗ್ಗೆ ಎದ್ದು ತಂಪಾದ ಗಾಳಿ ಬೀಸುವ ಉದ್ಯಾನಕ್ಕೆ ಬಂದರೆ ಸಾಕು, ಜಿಮ್‌ಗೆ ಬಂದಂತೆ. ನಗರದ ಎಂಟು ಉದ್ಯಾನಗಳಲ್ಲಿ ‘ಹೊರಾಂಗಣ ಜಿಮ್‌’ ನಿರ್ಮಾಣಗೊಳ್ಳುತ್ತಿದ್ದು ವಿಹಾರಿಗಳಿಗೆ ಹೊಸ ಅನುಭವ ಸಿಗಲಿದೆ.

ಅಮೃತ್ ‌(ಅಟಲ್‌ ನಗರ ನವೀಕರಣ ಹಾಗೂ ಪುನರುಜ್ಜೀವನ) ಯೋಜನೆಯಡಿ ನಗರಸಭೆ ಉದ್ಯಾನಗಳಿಗೆ ಹೊಸ ರೂಪ ನೀಡುತ್ತಿದೆ. ಎರಡು ವರ್ಷಗಳವರೆಗೆ ₹ 2 ಕೋಟಿ ವೆಚ್ಚದಲ್ಲಿ ಉದ್ಯಾನಕ್ಕೆ ವಿವಿಧ ಸೌಲಭ್ಯ ನೀಡಲಾಗುತ್ತಿದ್ದು ಅವುಗಳನ್ನು ಹೊರಾಂಗಣ ಜಿಮ್‌ ಪ್ರಮುಖವಾದುದು. ಜಿಮ್‌ ಮಾದರಿಯಲ್ಲೇ ಜನರು ಸಹಜ ವ್ಯಾಯಾಮ ಮಾಡಲು ಉದ್ಯಾನದಲ್ಲಿ ಉಪಕರಣ ಅಳವಡಿಸಲಾಗುತ್ತಿದೆ. ಈಗಾಗಲೇ ಹಲವು ಉದ್ಯಾನಗಳಲ್ಲಿ ಮರಳಿನ ಅಂಕಣ ನಿರ್ಮಿಸಲಾಗಿದ್ದು ಅದರೊಳಗೆ 9 ವ್ಯಾಯಾಮ ಉಪಕರಣ ಅಳವಡಿಸಲಾಗಿದೆ. ಕೆಲವೆಡೆ ಉಪಕರಣ ಅಳವಡಿಕೆ ಕೆಲಸ ನಡೆಯುತ್ತಿದೆ.

ಇಲ್ಲಿ ಮಕ್ಕಳು, ಮಹಿಳೆಯರು, ವೃದ್ಧರಾದಿಯಾಗಿ ವ್ಯಾಯಾಮ ಮಾಡಬಹುದಾಗಿದೆ. ಇವು ಜಿಮ್‌ನಷ್ಟು ವೃತ್ತಿಪರ ಉಪಕರಣಗಳಲ್ಲ, ಆದರೆ ಸಾಮಾನ್ಯ ವ್ಯಾಯಾಮಕ್ಕೆ ಉಪಯುಕ್ತ ಸಲಕರಣೆಗಳಾಗಿವೆ. ಸುಭಾಷ್‌ನಗರದ ಶಿವನಂಜಪ್ಪ ಪಾರ್ಕ್‌, ವಿದ್ಯಾನಗರದ ವೆಂಕಟಗಿರಿಯಪ್ಪ ಪಾರ್ಕ್‌, ಅಶೋಕ್‌ನಗರದ ಬಾಲಭವನ ಪಾರ್ಕ್‌, ಹೌಸಿಂಗ್‌ ಬೋರ್ಡ್‌ನ ಅಂಬರೀಷ್‌ (ಎಚ್.ಸಿ.ಬೋರೇಗೌಡ) ಉದ್ಯಾನ, ಸ್ವರ್ಣಸಂದ್ರದ ಸುಧೀರ್‌ ಉದ್ಯಾನ, ಕುವೆಂಪು ನಗರದ ಗಣಪತಿ ದೇವಾಲಯ ಪಾರ್ಕ್‌, ಕಲ್ಲಹಳ್ಳಿ ಉದ್ಯಾನ ಸೇರಿ ಎಂಟು ಪಾರ್ಕ್‌ಗಳಲ್ಲಿ ಉಪಕರಣ ಅಳವಡಿಸಲಾಗುತ್ತಿದೆ.

‘ಹಿರಿಯರು ಹಾಗೂ ಮಕ್ಕಳ ಸ್ನೇಹಿ ಉದ್ಯಾನ ನಿರ್ಮಿಸುವ ಉದ್ದೇಶದಿಂದ ಅಮೃತ್‌ ಯೋಜನೆ ಹಣವನ್ನು ಸದ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಉದ್ಯಾನಕ್ಕೆ ಜನರು ಬಂದರೆ ಅದು ಕೇವಲ ವಿಹಾರ ಮಾತ್ರವೇ ಆಗಿರದೆ ವ್ಯಾಯಾಮ ಶಾಲೆಯೂ ಆಗಬೇಕು ಎಂಬ ಉದ್ದೇಶದಿಂದ ಹೊರಾಂಗಣ ಜಿಮ್‌ ನಿರ್ಮಾಣ ಮಾಡಲಾಗುತ್ತಿದೆ’ ಎಂದು ನಗರಸಭೆ ಪೌರಾಯುಕ್ತ ಟಿ.ಎನ್‌.ನರಸಿಂಹಮೂರ್ತಿ ಹೇಳಿದರು.

ಮಹಿಳೆಯರಿಗೆ ಪ್ರತ್ಯೇಕ:
ವಿದ್ಯಾನಗರದ ವೆಂಕಟಗಿರಿಯಪ್ಪ ಉದ್ಯಾನದಲ್ಲಿ ಈಗಾಗಲೇ ಹೊರಾಂಗಣ ಜಿಮ್‌ ನಿರ್ಮಾಣವಾಗಿದ್ದು ಇಲ್ಲಿ ಮಹಿಳೆಯರು ಹಾಗೂ ಪುರುಷರಿಗೆ ಪ‍್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಎರಡು ಕಡೆ ತಲಾ 9 ಉಪಕರಣ ಅಳವಡಿಸಲಾಗಿದೆ. ‘ಹೊರಾಂಗಣ ಜಿಮ್‌ಗೆ ಮಹಿಳೆಯರೂ ಬರಬೇಕು ಎಂಬ ಉದ್ದೇಶದಿಂದ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಪಾರ್ಕ್‌ ಸಮೀಪದ ಮಹಿಳೆಯರು, ಮಕ್ಕಳು ಇದರ ಸದುಪಯೋಗ ಮಾಡಿಕೊಳ್ಳಬೇಕು’ ಎಂದು 11ನೇ ವಾರ್ಡ್‌ ಸದಸ್ಯ ಎಂ.ಪಿ.ಅರುಣ್‌ಕುಮಾರ್‌ ಹೇಳಿದರು.

ಮಕ್ಕಳಿಗೆ ಆಟಿಕೆ, ಹಿರಿಯರಿಗೆ ಬೆಂಚು:
ಹೊರಾಂಗಣ ಜಿಮ್‌ ಜೊತೆ ಮಕ್ಕಳಿಗೆ ವಿವಿಧ ಆಟಿಕೆ ಹಾಗೂ ಹಿರಿಯರಿಗೆ ಕಲ್ಲು ಬೆಂಚುಗಳನ್ನು ಉದ್ಯಾನದಲ್ಲಿ ಅಳವಡಿಸಲಾಗುತ್ತಿದೆ. ಬಾಲಭವನ ಸೇರಿ ಹಲವು ಉದ್ಯಾನಗಳಲ್ಲಿ ಮಕ್ಕಳ ಆಟಿಕೆ ಉಪಕರಣಗಳು ದುರಸ್ತಿ ಕಂಡಿರಲಿಲ್ಲ. ಈಗ ಎಂಟು ಪಾರ್ಕ್‌ಗಳಲ್ಲಿ ಹೊಸ ಆಟಿಕೆ ಉಪಕರಣ ಅಳವಡಿಸುತ್ತಿರುವುದು ಮಕ್ಕಳಿಗೆ ಸಿಹಿ ಸುದ್ದಿಯಾಗಿದೆ.

ಜಿಮ್‌ ಉಪಕರಣ, ಆಟಿಕೆಗಳನ್ನು ಅಳವಡಿಸಲು ಮುಂಬೈ ಮೂಲಕ ಕಂಪನಿಯೊಂದಕ್ಕೆ ಟೆಂಡರ್‌ ನೀಡಲಾಗಿದೆ. ಗುತ್ತಿಗೆದಾರರೇ ಉಪಕರಣ ಅಳವಡಿಸುತ್ತಿದ್ದು ಅವರೇ ನಿರ್ವಹಣೆ ಮಾಡುತ್ತಾರೆ. ಎಲ್ಲಾ ಎಂಟು ಪಾರ್ಕ್‌ಗಳಲ್ಲೂ ಕಾವಲುಗಾರರನ್ನು ನೇಮಕ ಮಾಡಿಕೊಳ್ಳಲಾಗಿದೆ. ಇಷ್ಟೇ ಅಲ್ಲದೆ ಶಿವನಂಜಪ್ಪ ಪಾರ್ಕ್‌ನಲ್ಲಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲು ಸಣ್ಣದೊಂದು ವೇದಿಕೆಯನ್ನೂ ನಿರ್ಮಾಣ ಮಾಡಲಾಗುತ್ತಿದೆ.

* ₹ 50 ಲಕ್ಷ – ಹೊರಾಂಗಣ ಜಿಮ್‌ ನಿರ್ಮಾಣ ವೆಚ್ಚ
* ₹ 60 ಲಕ್ಷ – ಕಲ್ಲು ಬೆಂಚು ಅಳವಡಿಕೆ ವೆಚ್ಚ
* 30 ಲಕ್ಷ – ಮಕ್ಕಳ ಆಟಿಕೆಗಳ ಅಳವಡಿಕೆ ವೆಚ್ಚ
₹ 1.5 ಲಕ್ಷ – ಮಳೆಕೊಯ್ಲು ಘಟಕ ನಿರ್ಮಾಣ ವೆಚ್ಚ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !