ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಂಗಪಟ್ಟಣ: ಚುರುಕು ಪಡೆದ ಮುಂಗಾರು ಕೃಷಿ ಚಟುವಟಿಕೆ

ಬಿತ್ತನೆ ಬೀಜ ವಿತರಣೆಗೆ ತೊಂದರೆ ಇಲ್ಲ; ಯೂರಿಯಾ ಕೊಂಚ ಕೊರತೆ, ಈ ಬಾರಿ ವಾಡಿಕೆ ಮಳೆ ಆಗಿಲ್ಲ
Last Updated 14 ಆಗಸ್ಟ್ 2021, 4:03 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ತಾಲ್ಲೂಕಿನ ತರಿ ಮತ್ತು ಖುಷ್ಕಿ ಭೂಮಿಯಲ್ಲಿ ಮುಂಗಾರು ಹಂಗಾಮು ಕೃಷಿ ಚಟುವಟಿಕೆ ಚುರುಕುಗೊಂಡಿದೆ. ವಿವಿಧೆಡೆ ಭತ್ತದ ನಾಟಿ ಕಾರ್ಯ ಆರಂಭಗೊಂಡಿದೆ.

ತಾಲ್ಲೂಕಿನ ಕಸಬಾ ಮತ್ತು ಬೆಳಗೊಳ ಹೋಬಳಿ ವ್ಯಾಪ್ತಿಯಲ್ಲಿ ನಾಟಿ ಕಾರ್ಯ ಚುರುಕಾಗಿದೆ. ಅರಕೆರೆ ಮತ್ತು ಕೆ.ಶೆಟ್ಟಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಭತ್ತದ ಪೈರು ನಾಟಿ ಕಾರ್ಯಕ್ಕೆ ರೈತರುಸಿದ್ಧತೆ ಆರಂಭಿಸಿದ್ದಾರೆ. ಮಳೆಯಾಶ್ರಿತ ಕೃಷಿ ಭೂಮಿ ಹೆಚ್ಚು ಇರುವ ಅರಕೆರೆ, ಕೆ.ಶೆಟ್ಟಹಳ್ಳಿ ಮತ್ತು ಕಸಬಾ ಹೋಬಳಿಯಲ್ಲಿ ರಾಗಿ ಬಿತ್ತನೆ ಕಾರ್ಯ ಕೂಡ ಆರಂಭಗೊಂಡಿದೆ.

ಈ ಬಾರಿ ತಾಲ್ಲೂಕಿನಲ್ಲಿ 9,500 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತದ ಬೆಳೆ ಬೆಳೆಯುವ ಗುರಿ ಹೊಂದಲಾಗಿದೆ. ಭತ್ತ ಬೆಳೆಯುವ ರೈತರಿಗೆ ಕೃಷಿ ಇಲಾಖೆಯಿಂದ 1,300 ಕ್ವಿಂಟಲ್‌ ಬಿತ್ತನೆ ಬೀಜ ವಿತರಣೆಯಾಗಿದೆ. ಎಂಟಿಯು–1001, ಐ.ಆರ್‌–64 ಮತ್ತು ಜ್ಯೋತಿ ತಳಿಯ ಬಿತ್ತನೆ ಬೀಜ ಹೆಚ್ಚು ಮಾರಾಟವಾಗಿದೆ.

ಮಳೆಯಾಶ್ರಿತ ಪ್ರದೇಶದಲ್ಲಿ 650 ಹೆಕ್ಟೇರ್‌ ವಿಸ್ತೀರ್ಣದಲ್ಲಿ ರಾಗಿ ಬೆಳೆಯ ಅಂದಾಜು ಮಾಡಿದ್ದು, ಇಂಡಾಫ್‌ ಮತ್ತು ಇತರ ತಳಿಯ ರಾಗಿ ಬಿತ್ತನೆ ಕಾರ್ಯ ಶುರುವಾಗಿದೆ. ತಾಲ್ಲೂಕಿನ 4 ಹೋಬಳಿಗಳಿಂದ 4,000 ಹೆಕ್ಟೇರ್‌ ಪ್ರದೇಶದಲ್ಲಿ ನಿಂತಿರುವ ಮತ್ತು ಹೊಸ ದಾಗಿ ನಾಟಿ ಮಾಡಿದ ಕಬ್ಬು ಬೆಳೆ ಇದೆ.

ತಾಲ್ಲೂಕಿನ ಅಲ್ಲಲ್ಲಿ ಅಲಸಂದೆ, ಉದ್ದು, ಹೆಸರು, ತೊಗರಿ ಕೂಡ ಬಿತ್ತನೆಯಾಗಿದೆ. ತರಕಾರಿ, ಬಾಳೆ, ತೆಂಗು, ಸಪೋಟ ಇತರ ತೋಟಗಾರಿಕೆ ಬೆಳೆಯ ಜತೆಗೆ ತಾಲ್ಲೂಕಿನ ರೈತರು ಈಚಿನ ದಿನಗಳಲ್ಲಿ ಅಡಿಕೆ ಬೆಳೆಯತ್ತ ಒಲವು ತೋರುತ್ತಿರುವುದು ವಿಶೇಷ.

ಮಳೆ ಕೊರತೆ: ಆಗಸ್ಟ್‌ ತಿಂಗಳಲ್ಲಿ, ತಾಲ್ಲೂಕಿನಲ್ಲಿ ವಾಡಿಕೆ 17.9 ಮಿ.ಮೀ ಮಳೆಯಾಗಬೇಕಿತ್ತು. ಆದರೆ ಆ.11ರವರೆಗೆ ಕೇವಲ 3 ಮಿ.ಮೀ ಮಳೆಯಾಗಿದೆ. ಆ.11ರಿಂದ ಎರಡು ದಿನಗಳ ಕಾಲ ಉತ್ತಮ ಮಳೆಯಾಗಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಯೂರಿಯಾ ತುಸು ಕೊರತೆ: ನಾಟಿ ಕಾರ್ಯ, ಕಬ್ಬು ಮುರಿ ಇತರ ಉದ್ದೇಶಗಳಿಗೆ 4,200 ಟನ್‌ ಯೂರಿಯಾ ರಸಗೊಬ್ಬರದ ಅಗತ್ಯ ಇತ್ತು. ಈ ಪೈಕಿ 3,400 ಟನ್‌ ಸರಬರಾಜಾಗಿದೆ. ಇನ್ನೂ 800 ಟನ್‌ ಗೊಬ್ಬರ ಬೇಕಿದ್ದು, ಬೇಡಿಕೆ ಸಲ್ಲಿಸಲಾಗಿದೆ. ಪೊಟಾಷ್‌, ಡಿಎಪಿ, 10–26, 15–15–15 ರಸಗೊಬ್ಬರ ಅಗತ್ಯಕ್ಕೆ ತಕ್ಕಷ್ಟು ಸಂಗ್ರಹ ಇದೆ. ಹೊಸದಾಗಿ ಆವಿಷ್ಕರಿಸಿರುವ ‘ನ್ಯಾನೋ’ ಯೂರಿಯಾ ರಸಗೊಬ್ಬರದ ಬಳಕೆಯು ತಾಲ್ಲೂಕಿನಲ್ಲಿ ಇನ್ನೂ
ಶುರುವಾಗಿಲ್ಲ.

‘ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 10 ದಿನ ಮೊದಲೇ ಭತ್ತದ ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ. ರಾಗಿ ಮತ್ತು ದ್ವಿದಳ ಧಾನ್ಯ ಕೂಡ ಸಕಾಲಕ್ಕೆ ಬಿತ್ತನೆಯಾಗಿದೆ. ಕೆಆರ್‌ಎಸ್‌ ಅಣೆಕಟ್ಟೆಯ ನಾಲೆಗಳು ಮತ್ತು ಒಡ್ಡಿನ ನಾಲೆಗಳಿಗೆ ಬೇಗ ನೀರು ಹರಿಸಿರುವುದರಿಂದ ತಾಲ್ಲೂಕಿನಾದ್ಯಂತ ಕೃಷಿ ಚಟುವಟಿಕೆ ಬಿರುಸಿನಿಂದ ನಡೆಯುತ್ತಿದೆ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಿಶಾಂತ್‌ ಕೀಲಾರ ಹೇಳಿದರು.

ರೈತರು ಏನಂತಾರೆ?

‘ಖರೀದಿ ಕೇಂದ್ರ ತೆರೆಯಲಿ’

ಭತ್ತ, ರಾಗಿ, ಕಬ್ಬು ಬೆಳೆಗೆ ನೀರು, ಗೊಬ್ಬರದ ಕೊರತೆ ಇಲ್ಲ. ಆದರೆ, ಫಸಲು ಬಂದಾಗ ಸಕಾಲಕ್ಕೆ ಧಾನ್ಯ ಖರೀದಿ ಕೇಂದ್ರ ತೆರೆಯುವುದಿಲ್ಲ. ಧಾನ್ಯ ಮಾರಿದ ಹಣಕ್ಕೆ ಆರೇಳು ತಿಂಗಳು ಅಲೆಯಬೇಕು. ಕಬ್ಬು ಕಡಿದು ಕಾರ್ಖಾನೆಗೆ ಸಾಗಿಸುವಷ್ಟರಲ್ಲಿ ರೈತರು ಹೈರಾಣಾಗುತ್ತಿದ್ದಾರೆ.

–ನಾಗರಾಜು, ರೈತ, ಶ್ರೀರಂಗಪಟ್ಟಣ

‘ಬೆಳೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ’

35 ವರ್ಷಗಳಿಂದ ನಮ್ಮ ಕುಟುಂಬ ಬೇಸಾಯ ನೆಚ್ಚಿಕೊಂಡು ಬದುಕುತ್ತಿದೆ. ಹಬ್ಬಕ್ಕೆ ಹೊಸ ಬಟ್ಟೆ ಕೊಳ್ಳಲು, ಮನೆ ರಿಪೇರಿ ಮಾಡಿಸಲು, ಮಕ್ಕಳ ಶಾಲೆ ಶುಲ್ಕ ಕಟ್ಟಲು, ಆಸ್ಪತ್ರೆ ಖರ್ಚಿಗೆ ಕಾಸು ಹೊಂದಿಸಲು ಪರದಾಟ ತಪ್ಪಿಲ್ಲ. ರೈತನ ಬೆಳೆಗೆ ಸರಿಯಾದ ಬೆಲೆ ಯಾವಾಗ ಸಿಗುತ್ತದೋ ಆ ದೇವರೇ ಬಲ್ಲ.

–ಗಂಗಮ್ಮ, ರೈತ ಮಹಿಳೆ, ಬೊಮ್ಮೂರು ಅಗ್ರಹಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT