ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಂಗಪಟ್ಟಣ: 6 ವರ್ಷ ಕಳೆದರೂ ಪರಿಹಾರ ಪಡೆಯದ ಅಧಿಕಾರಿಗಳು

ರಾಷ್ಟ್ರೀಯ ಹೆದ್ದಾರಿ–275 ವಿಸ್ತರಣೆಗೆ ಶಾಲಾ ಜಾಗ ಸ್ವಾಧೀನ
Published 8 ಡಿಸೆಂಬರ್ 2023, 5:22 IST
Last Updated 8 ಡಿಸೆಂಬರ್ 2023, 5:22 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ–275ಕ್ಕೆ ತಾಲ್ಲೂಕಿನ ಗರುಡನ ಉಕ್ಕಡ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಜಾಗವನ್ನು ಸ್ವಾಧೀನಪಡಿಸಿಕೊಂಡು 6 ವರ್ಷ ಕಳೆದರೂ ಶಿಕ್ಷಣ ಇಲಾಖೆ ಅಧಿಕಾರಿಗಳು ಅದರ ಬಾಬ್ತು ಪರಿಹಾರದ ಹಣ ಪಡೆಯುವಲ್ಲಿ ವಿಫಲರಾಗಿದ್ದಾರೆ.

ಗರುಡನ ಉಕ್ಕಡ ಶಾಲೆಯ (ಸ.ನಂ. 146/1) ಜಾಗದ ಒಂದು ಭಾಗವನ್ನು ರಾಷ್ಟ್ರೀಯ ಹೆದ್ದಾರಿ– 275ರ ವಿಸ್ತರಣೆಗೆ ಭೂ ಸ್ವಾಧೀನ ಮಾಡಿಕೊಳ್ಳಲಾಗಿದೆ. ಭೂಸ್ವಾಧೀನ ಆಗಿರುವ ಪರಿಹಾರ ಪಡೆಯಲು ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ವಿಶೇಷ ಭೂ ಸ್ವಾಧೀನಾಧಿಕಾರಿಗಳು ಹಾಗೂ ಸಕ್ಷಮ ಪ್ರಾಧಿಕಾರ ಕಚೇರಿಯು 2017ರ ಅ. 16ರಂದು ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಪದನಿಮಿತ್ತ ಬ್ಲಾಕ್‌ ಯೋಜನಾ ಸಮನ್ವಯಾಧಿಕಾರಿಗೆ ಅವಾರ್ಡ್‌ ನೋಟಿಸ್‌ ಕಳುಹಿಸಿದೆ. ಆದರೆ, ದಾಖಲೆಗಳನ್ನು ಸಲ್ಲಿಸದ ಕಾರಣ ಇದುವರೆಗೆ ಪರಿಹಾರದ ಹಣ ಇಲಾಖೆಗೆ ಬಂದಿಲ್ಲ.

ಈ ಅವಾರ್ಡ್‌ ನೋಟಿಸ್‌ ಬಂದ ಬಳಿಕ ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಶಾಲೆಯ ಮುಖ್ಯ ಶಿಕ್ಷಕರಿಗೆ 2017ರ ಅ. 24ರಂದು ಕ್ಷೇತ್ರ ಶಿಕ್ಷಣಾಧಿಕಾರಿ ಅವರು ಪತ್ರ ಬರೆದಿದ್ದಾರೆ. ಈ ಪತ್ರದ ಹಿನ್ನೆಲೆಯಲ್ಲಿ ಶಾಲೆಯ ಅಂದಿನ ಮುಖ್ಯ ಶಿಕ್ಷಕಿ ಕೆ.ಆರ್‌. ಮಂಗಳಾ ಅವರು ಶಾಲಾ ಜಾಗದ ದಾಖಲೆ ಒದಗಿಸಿಕೊಡಿ ಎಂದು ಕೆ.ಶೆಟ್ಟಹಳ್ಳಿ ಗ್ರಾ.ಪಂ ಮತ್ತು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ 2017ರ ನ. 8ರಂದು ಪತ್ರ ಬರೆದಿದ್ದಾರೆ.

ಇದಾದ ಒಂದೂವರೆ ವರ್ಷದ ಬಳಿಕ, ಅಂದರೆ 2019ರ ಜೂನ್‌ 19ರಂದು ಶಾಲೆಯ ಮುಖ್ಯ ಶಿಕ್ಷಕಿ ಕೆ.ಆರ್‌. ಮಂಗಳಾ ಅವರು ‘ಅಗತ್ಯ ದಾಖಲೆ ಸಲ್ಲಿಸಿದ್ದು, ಪರಿಹಾರ ಸಂದಾಯ ಮಾಡಲು ಕ್ರಮ ವಹಿಸಿ’ ಎಂದು ಕೋರಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮತ್ತು ರಾಮನಗರದ ಎನ್‌ಎಚ್‌ಎಐ ಯೋಜನಾ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

ಇಷ್ಟಾದರೂ ಪರಿಹಾರದ ಹಣ ಶಿಕ್ಷಣ ಇಲಾಖೆಗೆ ಬಂದಿಲ್ಲ. ಶಾಲೆಯ ದಾಖಲೆಗಳ ವಿಷಯದಲ್ಲಿ ಶಿಕ್ಷಣ ಇಲಾಖೆಯು ಕೆ.ಶೆಟ್ಟಹಳ್ಳಿ ಗ್ರಾ.ಪಂ. ಕಡೆಗೆ ಹಾಗೂ ಗ್ರಾಮ ಪಂಚಾಯಿತಿಯು ಶಿಕ್ಷಣ ಇಲಾಖೆ ಕಡೆಗೆ ಬೊಟ್ಟು ಮಾಡುತ್ತಿವೆ.

‘ಗರುಡನ ಉಕ್ಕಡ ಶಾಲೆಗೆ ಸಂಬಂಧಿಸಿದ ದಾಖಲೆಗಳನ್ನು ಕೆ.ಶೆಟ್ಟಹಳ್ಳಿ ಗ್ರಾ.ಪಂ. ಇದುವರೆಗೆ ಇಲಾಖೆಗೆ ಕೊಟ್ಟಿಲ್ಲ. ಹಾಗಾಗಿ ಭೂಸ್ವಾಧೀನ ಆಗಿರುವ ಜಾಗಕ್ಕೆ ಪರಿಹಾರ ಪಡೆಯಲು ಇದುವರೆಗೆ ಸಾಧ್ಯವಾಗಿಲ್ಲ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್‌. ಅನಂತರಾಜು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಗರುಡನ ಉಕ್ಕಡ ಶಾಲೆಗೆ ಜಾಗ ಹೇಗೆ ಬಂತು ಎಂಬ ಬಗ್ಗೆ ಆ ಶಾಲೆಯ ಮುಖ್ಯ ಶಿಕ್ಷಕರು ಅಥವಾ ಕ್ಷೇತ್ರ ಶಿಕ್ಷಣಾಧಿಕಾರಿ ನಮಗೆ ಮೂಲ ದಾಖಲೆ ಒದಗಿಸಿಲ್ಲ. ಶಾಲೆ ಜಾಗವನ್ನು ಅಳತೆ ಮಾಡಿರುವುದು ಬಿಟ್ಟರೆ ಬೇರಾವುದೇ ದಾಖಲೆ ನಮ್ಮ ಬಳಿ ಇಲ್ಲ’ ಎಂದು ಕೆ.ಶೆಟ್ಟಹಳ್ಳಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮಹಾಲಕ್ಷ್ಮಿ ಪ್ರತಿಕ್ರಿಯಿಸಿದ್ದಾರೆ.

‘ಈ ಶಾಲೆಗೆ ಈಚೆಗಷ್ಟೇ ಬಂದಿದ್ದೇನೆ. ಶಾಲೆಯ ಜಾಗ ಭೂ–ಸ್ವಾಧೀನ ಆಗಿರುವುದು ಮತ್ತು ಅದಕ್ಕೆ ಅವಾರ್ಡ್‌ ಆಗಿರುವುದರ ಬಗ್ಗೆ ನನಗೆ ಮಾಹಿತಿ ಇಲ್ಲ’ ಎಂದು ಶಾಲೆಯ ಈಗಿನ ಮುಖ್ಯ ಶಿಕ್ಷಕಿ ವರಲಕ್ಷ್ಮಿ ಹೇಳಿದ್ದಾರೆ.

ಭೂ ಸ್ವಾಧೀನಕ್ಕೆ ಒಳಪಟ್ಟ ಶಾಲೆ ಜಾಗಕ್ಕೆ ಪರಿಹಾರ ಪಡೆಯಲು ದಾಖಲೆಗಳನ್ನು ಸಲ್ಲಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಅವರ ಕಚೇರಿಗೆ 2017ರ ಅ.16ರಂದು ಅವಾರ್ಡ್‌ ನೋಟಿಸ್‌ ನೀಡಿರುವುದು
ಭೂ ಸ್ವಾಧೀನಕ್ಕೆ ಒಳಪಟ್ಟ ಶಾಲೆ ಜಾಗಕ್ಕೆ ಪರಿಹಾರ ಪಡೆಯಲು ದಾಖಲೆಗಳನ್ನು ಸಲ್ಲಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಅವರ ಕಚೇರಿಗೆ 2017ರ ಅ.16ರಂದು ಅವಾರ್ಡ್‌ ನೋಟಿಸ್‌ ನೀಡಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT