ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ದೂರು: ವರ್ಷಧಾರೆಯ ಸಿಂಚನ; ಹಲವು ವರ್ಷಗಳ ಬಳಿಕ ಮೈದುಂಬಿದ ಶಿಂಷಾನದಿ

ರೈತರ ಸಂಭ್ರಮ
Last Updated 29 ನವೆಂಬರ್ 2021, 3:09 IST
ಅಕ್ಷರ ಗಾತ್ರ

ಮದ್ದೂರು: ಮಂಡ್ಯ ಜಿಲ್ಲೆಯಾದ್ಯಂತ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ತಾಲ್ಲೂಕಿನಲ್ಲಿ ಹರಿಯುವ ಶಿಂಷಾ ನದಿಗೆ ಜೀವಕಳೆ ಬಂದಿದೆ. ಹಲವು ವರ್ಷಗಳ ಬಳಿಕ ಶಿಂಷೆಯ ಒಡಲಲ್ಲಿ ನೀರು ಮೈದುಂಬಿ ಹರಿಯುತ್ತಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿದೆ.

ಆತಗೂರು ಹೋಬಳಿಯ ನವಿಲೆ ಹಾಗೂ ತೊರೆಶೆಟ್ಟಹಳ್ಳಿ ಬಳಿ ಶಿಂಷಾ ನದಿಗೆ ನಿರ್ಮಿಸಲಾಗಿರುವ ಚೆಕ್ ಡ್ಯಾಂಗಳಲ್ಲೂ ನೀರಿನ ಸಂಗ್ರಹದ ಪ್ರಮಾಣ ಹೆಚ್ಚಾಗಿದೆ. ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಕಾರ್ಯರೂಪಕ್ಕೆ ಬಂದಿದ್ದ ಶಿಂಷಾ ಎಡದಂಡೆ ಏತ ನೀರಾವರಿ ಯೋಜನೆ ಮೂಲಕ ಕೆಸ್ತೂರು ಕೆರೆ, ನವಿಲೆ, ಹೆಬ್ಬೆರಳು ಕದಲೂರು ಸೇರಿದಂತೆ 16ಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬುವ ವಿಶ್ವಾಸ ಮೂಡಿದೆ. ಶಾಸಕ ಡಿ.ಸಿ.ತಮ್ಮಣ್ಣ ಅವರು ಆತಗೂರು ಹೋಬಳಿಯ ಹಲವಾರು ಕೆರೆಗಳಿಗೆ ಶಿಂಷಾ ನದಿಯಿಂದ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿರುವ ಕಾರಣ ಏತ ನೀರಾವರಿ ಯಿಂದ ನೀರು ತುಂಬಿಸುವ ಕೆಲಸ ಸುಗಮವಾಗಿದೆ. ನಿರ್ವಹಣೆ ಕೊರತೆ ಯಿಂದ ಕುಂಟುತ್ತಾ ಸಾಗಿದ್ದ ಈ ಏತ ನೀರಾವರಿ ಯೋಜನೆಗೆ ಕಳೆದ ವರ್ಷ ಪುನಶ್ಚೇತನ ನೀಡಲಾಗಿತ್ತು. ಹಾಳಾಗಿರುವ ಪೈಪ್ ಲೈನ್ ತೆಗೆಸಿ ಹೊಸ ಯೋಜನೆ ಸಿದ್ಧಪಡಿಸಿ ಸುಮಾರು ₹40 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಸಲು ಕ್ರಮ ಕೈಗೊಂಡಿದ್ದರು.

ಇತ್ತೀಚಿನ ದಿನಗಳಲ್ಲಿ ಶಿಂಷಾ ನದಿಗೆ ತುಮಕೂರು ಜಿಲ್ಲೆಗೆ ಸೇರಿದ ಮಾರ್ಕೋನಹಳ್ಳಿ ಜಲಾಶಯದಿಂದ ಹೆಚ್ಚುವರಿ ನೀರು ಹರಿಸುತ್ತಿರುವ ಕಾರಣ ಹರಿವು ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಹಲವಾರು ಕೆರೆಗಳ ಕೋಡಿ ತುಂಬಿ ಹರಿದು ಶಿಂಷಾ ನದಿ ಸೇರುತ್ತಿದೆ. ನದಿಯಲ್ಲಿ ನೀರು ಹರಿಯುತ್ತಿರುವ ಕಾರಣ ಈ ಭಾಗದ ಗ್ರಾಮಗಳ ರೈತರು ಕೃಷಿ ಚಟುವಟಿಕೆ ಆರಂಭಿಸಿದ್ದಾರೆ. ಅಂತರ್ಜಲವು ಹೆಚ್ಚಾಗಿದ್ದು, ರೈತರ ಕೊಳವೆ ಬಾವಿಗಳೂ ಪುನಶ್ಚೇತನಗೊಂಡಿವೆ.

ಕಳೆಗುಂದಿದ್ದ ಶಿಂಷೆ: ಈ ಹಿಂದಿನ ವರ್ಷಗಳಲ್ಲಿ ಮಳೆ ಪ್ರಮಾಣ ಕಡಿಮೆಯಾ ಗಿದ್ದರಿಂದ ಶಿಂಷಾ ನದಿಯ ಒಡಲು ಬತ್ತಿ ಹೋಗಿತ್ತು. ನದಿ ಪಾತ್ರದಲ್ಲಿ ಅಕ್ರಮ ಮರಳು ಗಣಿಗಾರಿಕೆ ಕದ್ದುಮುಚ್ಚಿ ನಡೆಯುತ್ತಿದ್ದುದ ರಿಂದ ನೀರಿನ ಕೊರತೆ ಎದುರಾಗಿತ್ತು. ನಂತರ ಜಿಲ್ಲಾಡಳಿತ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡ ನಂತರ ಮರಳು ಗಣಿಗಾರಿಕೆ ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ಬಂದಿತ್ತು.

ಮುಂದಿನ ದಿನಗಳಲ್ಲಿ ಮಾರ್ಕೋನಹಳ್ಳಿ ಜಲಾಶಯದಿಂದ ಇನ್ನೂ ಅಧಿಕ ನೀರು ಹರಿಯುವ ಸಾಧ್ಯತೆ ಇದೆ. ಹೀಗಾಗಿ ಮರಳು ಅಕ್ರಮ ಸಾಗಣೆಗೆ ಕಡಿವಾಣ ಬೀಳಲಿದೆ. ಈ ಬಾರಿ ಸುರಿಯುತ್ತಿರುವ ವರ್ಷಧಾರೆಯಿಂದ ಹಲವಾರು ವರ್ಷಗಳ ಬಳಿಕ ನದಿ ತುಂಬಿರುವುದನ್ನು ನೋಡುತ್ತಿದ್ದೇವೆ ಎಂದು ಈ ಭಾಗದ ರೈತ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಮಳೆ ಕೊರತೆಯಿಂದಾಗಿ ಶಿಂಷಾ ನದಿಯಲ್ಲಿ ನೀರು ನೋಡಲು ಸಾಧ್ಯವಾಗಿ ರಲಿಲ್ಲ. ಈಗ ಕೆಆರ್‌ಎಸ್ ಜಲಾಶಯ ತುಂಬಿದೆ. ಮುಂದಿನ ದಿನಗಳಲ್ಲಿ ಏತ ನೀರಾವರಿ ಮೂಲಕ ಸಮರ್ಪಕವಾಗಿ ಕೆರೆ ತುಂಬಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಹೊಟ್ಟೇಗೌಡನದೊಡ್ಡಿಯ ನಾಗೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT