ಅಂಬೇಡ್ಕರ್ ಜ್ಞಾನ ಎಲ್ಲರಿಗೂ ದಾರಿ ದೀಪ: ಶಾಸಕ ಡಾ.ಕೆ.ಅನ್ನದಾನಿ

ಮಂಡ್ಯ: ‘ಅಂಬೇಡ್ಕರ್ ಅವರು ಜಗತ್ತಿನ ಅತಿ ದೊಡ್ಡ ಆಲದಮರ ಇದ್ದಂತೆ, ಅವರ ಜ್ಞಾನ ದೀವಿಗೆ ನಮ್ಮೆಲ್ಲರಿಗೂ ದಾರಿ ದೀಪವಾಗಿದೆ’ ಎಂದು ಶಾಸಕ ಡಾ.ಕೆ.ಅನ್ನದಾನಿ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಫ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಜಿಲ್ಲಾ ಸಮಿತಿ ಸಹಯೋಗದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನ ಹಾಗೂ ಸಂವಿಧಾನ ಸಂರಕ್ಷಣಾ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಅತಿ ಹೆಚ್ಚು ಜ್ಞಾನ ಹೊಂದಿದ್ದ ಅವರು ಹೊಂದಿದ್ದ ಮಹಾನ್ ಚೇತನರು. ಅವರ ಹೋರಾಟದ ಹಾದಿಯನ್ನು ನಾವೆಲ್ಲರೂ ಅನುಸರಿಸೋಣ, ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ ಇಂದಲ್ಲಾ ನಾಳೆ ಫಲ ಕೊಡುವುದು ಎಂದು ಸಾಹಿತಿ ದೇವನೂರ ಮಹಾದೇವ ಅವರು ತಮ್ಮ ಸಾಹಿತ್ಯದ ಮೂಲಕ ಅಂಬೇಡ್ಕರ್ ಅವರನ್ನು ಅರ್ಥಮಾಡಿಸಿರುವುದು ಹೆಮ್ಮೆಯ ವಿಷಯ’ ಎಂದರು.
ಜಿಲ್ಲಾ ಪಂಚಾಯಿತಿ ಸಿಇಒ ಜಿ.ಆರ್.ಜೆ.ದಿವ್ಯಾ ಪ್ರಭು ಮಾತನಾಡಿ ‘ಅಂಬೇಡ್ಕರ್ ಅವರು ಪ್ರತಿ ದಿನ 18 ತಾಸು ಓದಿ ಜೀವನದಲ್ಲಿ ಹೆಚ್ಚು ಸಮಯವನ್ನು ಓದಿಗಾಗಿ ಮುಡುಪಿಟ್ಟ ಮಹಾತ್ಯಾಗಿ, ಅವರು ಓದದೇ ಇರುವ ವಿಷಯಗಳೇ ಇಲ್ಲ. ಹೆಚ್ಚು ಹೆಚ್ಚು ಓದಿದರೆ ಹಕ್ಕುಗಳನ್ನು ತಿಳಿದುಕೊಳ್ಳಲು ಹಾಗೂ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಅಂಬೇಡ್ಕರ್ ರವರು ಅರಿತುಕೊಂಡಿದ್ದರು’ ಎಂದರು.
‘ಅಂಬೇಡ್ಕರ್ ಅವರು ಅನೇಕ ದೇಶಗಳಿಗೆ ಭೇಟಿ ನೀಡಿ ಅಲ್ಲಿನ ಕಾನೂನುಗಳು ಹಾಗೂ ಸಂವಿಧಾನದ ಬಗ್ಗೆ ಜ್ಞಾನ ಪಡೆದುಕೊಂಡರು. ನಮಗೆ ಹಕ್ಕುಗಳ ಬಗ್ಗೆ ಸಂಪೂರ್ಣವಾಗಿ ಅರಿವಿರಬೇಕು ಆಗ ಮಾತ್ರ ಹಕ್ಕುಗಳನ್ನು ಕುರಿತು ಪ್ರಶ್ನೆ ಮಾಡಲು, ರಕ್ಷಣೆ ಮಾಡಲು ಸಾಧ್ಯ. ಇದಕ್ಕೆ ಶಿಕ್ಷಣ ಒಂದೇ ದಾರಿ ಎಂಬುದನ್ನು ಅಂಬೇಡ್ಕರ್ ಅವರು ಅರಿತು ಲಂಡನ್ , ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಅನೇಕ ಪದವಿಗಳನ್ನು ಪಡೆದುಕೊಂಡರು, ಇದು ಇತರರಿಗೂ ದಾರಿ ದೀಪ’ ಎಂದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ನಗರಸಭೆ ಸದಸ್ಯೆ ಸೌಭಾಗ್ಯ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಬಿ.ರಂಗೇಗೌಡ, ಸಮಿತಿಯ ನಂಜುಂಡಮೌರ್ಯ ಭಾಗವಹಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.