ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಂಗಪಟ್ಟಣ | ರಸ್ತೆ ಗುಂಡಿ ಮುಚ್ಚಿದ ಆಟೊ ರಿಕ್ಷಾ ಚಾಲಕ

Published 22 ಆಗಸ್ಟ್ 2023, 13:14 IST
Last Updated 22 ಆಗಸ್ಟ್ 2023, 13:14 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ತಾಲ್ಲೂಕಿನ ಆರತಿ ಉಕ್ಕಡದ ಅಹಲ್ಯಾದೇವಿ ಮಾರಮ್ಮ ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ನಿರ್ಮಾಣವಾಗಿದ್ದ ಅಪಾಯಕಾರಿ ಗುಂಡಿಗಳನ್ನು ಕಡತನಾಳು ಗ್ರಾಮದ ಆಟೊ ರಿಕ್ಷಾ ಚಾಲಕ ಕರಿಯಪ್ಪ ಮಂಗಳವಾರ ಸ್ವಂತ ಖರ್ಚಿನಿಂದ ಮುಚ್ಚಿದರು.

ಕಡತನಾಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎದುರು ಇದ್ದ ಒಂದು ಅಡಿ, ಅರ್ಧ ಅಡಿ ಆಳದ ಮೂರ್ನಾಲ್ಕು ಗುಂಡಿಗಳನ್ನು ಅವರು ಮುಚ್ಚಿದರು. ಕಳೆದ ಒಂದು ವರ್ಷದಿಂದಲೂ ಈ ಗುಂಡಿಗಳು ಹಾಗೇ ಇದ್ದವು. ಈ ಮೊದಲು ಮಣ್ಣಿನಿಂದ ಈ ಗುಂಡಿಗಳನ್ನು ಮುಚ್ಚಲಾಗಿತ್ತು. ಆದರೆ ಅದರ ಮೇಲೆ ನೀರು ಹರಿದು ಮಣ್ಣು ಕೊಚ್ಚಿ ಹೋಗಿ ಗುಂಡಿಗಳು ಮತ್ತಷ್ಟು ದೊಡ್ಡದಾಗಿದ್ದವು. ಇಲ್ಲಿ ಬೈಕ್‌ ಸವಾರರು ಮೇಲಿಂದ ಮೇಲೆ ಬಿದ್ದು ಗಾಯಗೊಳ್ಳುತ್ತಿದ್ದರು. ರಸ್ತೆಯ ಗುಂಡಿಗಳಿಂದ ಕಲ್ಲುಗಳು ಮೇಲೆದ್ದು ಪಾದಚಾರಿಗಳಿಗೆ ಸಿಡಿಯುತ್ತಿದ್ದವು.

ರಸ್ತೆಯಲ್ಲಿ ಗುಂಡಿಗಳು ನಿರ್ಮಾಣ ಆಗಿದ್ದುದರಿಂದ ಕಾರು, ಆಟೊ ಇತರ ವಾಹನ ಸಂಚಾರಕ್ಕೆ ತೊಡಕಾಗಿತ್ತು. ಸಮಸ್ಯೆ ಕುರಿತು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಹಲವು ಬಾರಿ ಹೇಳಿದರೂ ಗಮನ ಹರಿಸಲಿಲ್ಲ. ಹಾಗೇ ಬಿಟ್ಟರೆ ಜನರ ಪ್ರಾಣಕ್ಕೆ ಕಂಟಕವಾಗಬಹುದು ಎಂಬ ಹಿನ್ನೆಲೆಯಲ್ಲಿ ಸ್ವಂತ ಖರ್ಚಿನಲ್ಲಿ ಗುಂಡಿಗಳನ್ನು ಮುಚ್ಚಿದ್ದೇನೆ. ಒಂದಷ್ಟು ದಿನ ಬಾಳಿಕೆ ಬರಲಿ ಎಂದು ಸಿಮೆಂಟ್‌ ಕಾಂಕ್ರೀಟ್‌ನಿಂದ ಗುಂಡಿಗಳನ್ನು ಮುಚ್ಚಲಾಗಿದೆ’ ಎಂದು ಕರಿಯಪ್ಪ ಹೇಳಿದರು.

‘ಪಾಂಡವಪುರ ರೈಲು ನಿಲ್ದಾಣದಿಂದ ಕಡತನಾಳು, ಆರತಿಉಕ್ಕಡ, ಕ್ಯಾತನಹಳ್ಳಿ, ಹರವು, ಅರಳಕುಪ್ಪೆ ಮತ್ತು ಕೆ.ಆರ್. ಪೇಟೆ ತಾಲ್ಲೂಕಿನ ಭೂ ವರಾಹನಾಥಸ್ವಾಮಿ ದೇವಾಲಯ ಮತ್ತಿತರ ಗ್ರಾಮಗಳಿಗೆ ಇದು ಪ್ರಮುಖ ಸಂಪರ್ಕ ರಸ್ತೆಯಾಗಿದೆ. ಆರತಿ ಉಕ್ಕಡದ ದೇವಾಲಯಕ್ಕೆ ಜಿಲ್ಲೆ, ಹೊರ ಜಿಲ್ಲೆಗಳಿಂದ ಭಕ್ತರು ಪ್ರತಿ ದಿನ ಬರುತ್ತಾರೆ. ಹಾಗೆ ಬರುವವರು ರಸ್ತೆ ಅವ್ಯವಸ್ಥೆಗೆ ಹಿಡಿ ಶಾಪ ಹಾಕುತ್ತಿದ್ದರು. ಅಧಿಕಾರಿಗಳು ರಸ್ತೆಯ ಗುಂಡಿ ಮುಚ್ಚುವುದಿಲ್ಲ ಎಂಬುದನ್ನು ಅರಿತು ಆಟೋ ಕರಿಯಪ್ಪ ಅವರೇ ಈ ಗುಂಡಿಗಳನ್ನು ಮುಚ್ಚಿದ್ದಾರೆ. ಈ ರಸ್ತೆ ಮುಂದಿನ ಭಾಗದಲ್ಲೂ ಹದಗೆಟ್ಟಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ರಸ್ತೆಯ ಅಭಿವೃದ್ಧಿಗೆ ಶಾಶ್ವತ ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮದ ಕೆ.ಎಸ್‌. ಜಯಶಂಕರ್‌ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT