ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜನರ ಹೃದಯದಲ್ಲಿ ನಿರಂತರ ಚೈತನ್ಯರೂಪಿ: ಡಾ.ನಿರ್ಮಲಾನಂದನಾಥ ಸ್ವಾಮೀಜಿ

ಬಾಲಗಂಗಾಧರನಾಥ ಸ್ವಾಮೀಜಿ 75ನೇ ಜಯಂತಿ ಸಮಾರಂಭದಲ್ಲಿ ಶ್ರೀಗಳ ಅಭಿಮತ
Last Updated 18 ಜನವರಿ 2020, 12:16 IST
ಅಕ್ಷರ ಗಾತ್ರ

ನಾಗಮಂಗಲ: ‘ಬಾಲಗಂಗಾಧರನಾಥ ಸ್ವಾಮೀಜಿ ಇಂದು ಭೌತಿಕವಾಗಿ ನಮ್ಮೊಂದಿಗಿಲ್ಲ. ಆದರೆ, ನಾಡಿನ ಜನರ ಹೃದಯದಲ್ಲಿ ನಿರಂತರ ಚೈತನ್ಯರೂಪಿಯಾದ ಸ್ಥಾನವನ್ನು ಪಡೆದಿದ್ದಾರೆ. ಅಂತಹ ಗುರುಗಳ ಶಿಷ್ಯರಾದ ನಾವೆಲ್ಲರೂ ಪುಣ್ಯವಂತರು’ ಎಂದು ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಆದಿಚುಂಚನಗಿರಿಯಲ್ಲಿ ಆಯೋಜಿಸಲಾಗಿದ್ದ ಬಾಲಗಂಗಾಧರನಾಥ ಸ್ವಾಮೀಜಿ 75ನೇ ಜಯಂತ್ಯುತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

‘ಬಾಲಗಂಗಾಧರನಾಥ ಸ್ವಾಮಿ ಮಠಕ್ಕೆ ಬಂದಾಗ ಹತ್ತು ಸಾವಿರ ಮಂದಿ ಮಕ್ಕಳಿಗೆ ವಿದ್ಯೆಯನ್ನು ಕೊಡಬೇಕು ಎಂಬ ಕನಸನ್ನು ಕಂಡಿದ್ದರು. ಆದರೆ, ಅವರು ದೇಹವನ್ನು ತ್ಯಜಿಸಿ ಹೋಗುವಾಗ ಮಠದಲ್ಲಿ 1.35 ಲಕ್ಷ ಮಕ್ಕಳು ವಿದ್ಯೆಯನ್ನು ಪಡೆಯುತ್ತಿದ್ದರು. ಗುರುಗಳ ಸಂಕಲ್ಪ ಶಕ್ತಿಗೆ ಅಂತಹ ಚೈತನ್ಯ ಇತ್ತು’ ಎಂದರು.

‘ನಾಡಿನಾದ್ಯಂತ ಗುರುಗಳ ಸ್ಮರಣೆ ಎಲ್ಲೆಡೆ ನಡೆಯುತ್ತಿದೆ. ಇದ್ದು ಇಲ್ಲದೇ ಹೋಗುವಂತಹವರನ್ನು ಸ್ಮರಿಸುವುದು ವಾಡಿಕೆ. ಆದರೆ, ಬಾಲಗಂಗಾಧರನಾಥ ಸ್ವಾಮೀಜಿ ಭೌತಿಕವಾಗಿಯಷ್ಟೇ ಇಂದು ನಮ್ಮೊಡನಿಲ್ಲ. ಆದರೆ, ಜನರಿಗೆ ಅವರು ನೀಡಿದ ಸೇವೆ ಜೀವಂತವಾಗಿದೆ’ ಎಂದರು.

ಸಮಾರಂಭ ಉದ್ಘಾಟಿಸಿದ ಬೇಲಿಮಠ ಶಿವರುದ್ರ ಸ್ವಾಮೀಜಿ, ‘ಬಾಲಗಂಗಾಧರನಾಥ ಸ್ವಾಮಿಗಳನ್ನು ನಾನು ಭೈರವೈಕ್ಯರು ಎನ್ನುವುದಿಲ್ಲ. ಭೈರವಸ್ವರೂಪರು ಎನ್ನುತ್ತೇನೆ. ಅವರು ಕೇವಲ ಮೂರೂವರೆ ದಶಕದ ಅವಧಿಯಲ್ಲಿ ಸಾಧಿಸಿದ ಕಾರ್ಯಗಳು ಮನುಷ್ಯರಿಂದ ಮಾಡಲು ಸಾಧ್ಯವಿಲ್ಲ. ಅಂತಹ ಮಹತ್ಕಾರ್ಯಗಳನ್ನು ಸಾಧಿಸಿ ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ತಮ್ಮ ಸಂಕಲ್ಪ ಮಾತ್ರದಿಂದಲೇ ಅದ್ವಿತೀಯ ಕಾರ್ಯಗಳನ್ನು ಸಾಧಿಸಿದ್ದಾರೆ. ಇಷ್ಟೆಲ್ಲವನ್ನು ಸಾಧಿಸಿದರೂ ನಾನು ಏನನ್ನೂ ಮಾಡಿಲ್ಲ. ಎಲ್ಲವನ್ನೂ ಭೈರವ ಮಾಡಿಸಿದ್ದಾನೆ ಎಂದು ಹೇಳುತ್ತಿದ್ದರು’ ಎಂದು ಸ್ಮರಿಸಿದರು.

‘ಅನ್ನ, ಅಕ್ಷರ, ಅರಣ್ಯ, ಆರೋಗ್ಯ ಮತ್ತು ಆಶ್ರಯ ಮುಂತಾದ ಕ್ಷೇತ್ರಗಳಲ್ಲಿ ಅವರು ಮಾಡಿದ ಸೇವೆ ಹಾಗೂ ದೀನ ದಲಿತರ ಬಡವರ ಏಳಿಗೆಗಾಗಿ ಸಲ್ಲಿಸಿದ ಸೇವೆ ಸ್ಮರಣೀಯ. ಅವರು ಲೋಕ ಕಲ್ಯಾಣಕ್ಕಾಗಿಯೇ ಅವತರಿಸಿ‌ ಸಮಾಜಕ್ಕೆ ಹಾಕಿಕೊಟ್ಟಿರುವ ಆದರ್ಶ ಪಥದಲ್ಲಿ ಪ್ರತಿಯೊಬ್ಬರೂ ಮುನ್ನಡೆಯಬೇಕು’ ಎಂದರು.

ಶಾಸಕ ಸಿ.ಎಸ್.ಪುಟ್ಟರಾಜು, ‘ಬಾಲಗಂಗಾಧರನಾಥ ಶ್ರೀಗಳು ನಾಡಿನ ಅಭಿವೃದ್ಧಿಗಾಗಿ ಸಾವಿರಾರು ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದಾರೆ. ದೇಶ ವಿದೇಶಗಳಲ್ಲೂ ಆದಿಚುಂಚನಗಿರಿಯ ಕೀರ್ತಿಯನ್ನು ಬೆಳಗಿಸಿದ್ದಾರೆ’ ಎಂದರು.

ಪತ್ರಕರ್ತ ರವಿ ಹೆಗಡೆ ಮಾತನಾಡಿ, ‘ಇಂದು ಹಣ, ಆಸ್ತಿ, ಅಧಿಕಾರ ಗಳಿಸುವುದು ಸರಳ. ಆದರೆ, ಗೌರವವನ್ನು ಗಳಿಸಿ ಅದನ್ನು ಉಳಿಸಿಕೊಂಡು ಹೋಗುವುದು ಕಷ್ಟಸಾಧ್ಯ. ಬಾಲಗಂಗಾಧರನಾಥ ಸ್ವಾಮೀಜಿ ಇಡೀ ದೇಶ ಗೌರವಿಸುವ ವ್ಯಕ್ತಿಯಾಗಿದ್ದರು. ಆದಿಚುಂಚನಗಿರಿ ಆಧ್ಯಾತ್ಮಿಕ ಕೇಂದ್ರ ಮಾತ್ರವಲ್ಲ. ಇದೊಂದು ಆಡಳಿತಾತ್ಮಕ ಕೌಶಲವನ್ನು ಹೊಂದಿರುವ ಕ್ಷೇತ್ರವಾಗಿದೆ’ ಎಂದರು.

‘ಯಾವುದೇ ಮಠ ಧಾರ್ಮಿಕ ಕೇಂದ್ರವಾಗಿ ಉಳಿಯುವುದರಿಂದ ಹೆಚ್ಚಿನ ಪ್ರಯೋಜನವಿಲ್ಲ. ಆದಿಚುಂಚನಗಿರಿ ಮಠ ಪ್ರಸ್ತುತ ದೊಡ್ಡ ಶಕ್ತಿ ಕೇಂದ್ರವಾಗಿದ್ದರೂ ಸಹ ತನ್ನ ಆಧ್ಯಾತ್ಮಿಕ ಮತ್ತು ಧಾರ್ಮಿಕ ಗಡಿಯನ್ನು ಮೀರದೇ ಇರುವುದು ಹೆಮ್ಮೆಯ ವಿಷಯವಾಗಿದೆ’ ಎಂದು ಹೇಳಿದರು.

ಶಾಸಕ ಕೆ.ಸುರೇಶಗೌಡ, ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಪತಿ ಡಾ.ಚಂದ್ರಶೇಖರ ಶೆಟ್ಟಿ, ಅಮರನಾಥಗೌಡ, ಪ್ರಸನ್ನನಾಥ ಸ್ವಾಮೀಜಿ, ಸಾಯಿಕೀರ್ತಿ ಸ್ವಾಮೀಜಿ ಮತ್ತು ಭಕ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT