ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಳ್ಳೇಕೆರೆ ಈಶ್ವರ ದೇವಾಲಯಕ್ಕೆ ಬೇಕು ಕಾಯಕಲ್ಪ

ಸಾವಿರಾರು ವರ್ಷಗಳ ಇತಿಹಾಸವಿರುವ ದೇವಾಲಯ
Published : 18 ಸೆಪ್ಟೆಂಬರ್ 2024, 6:14 IST
Last Updated : 18 ಸೆಪ್ಟೆಂಬರ್ 2024, 6:14 IST
ಫಾಲೋ ಮಾಡಿ
Comments

ಕೆ.ಆರ್.ಪೇಟೆ: ಮನಸ್ಸಿಗೆ ಮುದ ನೀಡುವ ಸಾವಿರಾರು ವರ್ಷಗಳ ಹಿಂದೆ ನಿರ್ಮಾಣವಾದ ಇತಿಹಾಸ ಸಾರುತ್ತಿರುವ ಹೊಯ್ಸಳ ಕಾಲದ  ಈಶ್ವರ ದೇವಾಲಯಕ್ಕೆ ಕಾಯಕಲ್ಪ ಬೇಕಿದೆ.

ದೇವಾಲಯದ ಸುತ್ತ ಹಸಿರು, ತೋಟ, ಗದ್ದೆ, ಸನಿಹದಲ್ಲಿಯೇ ಕಣ್ಣಾಯಿಸಿದಷ್ಟೂ ವಿಶಾಲವಾದ ದೊಡ್ಡಕೆರೆ, ಧ್ಯಾನಕ್ಕೆ, ಮನಶಾಂತಿಗೆ ಸೂಕ್ತವಾದ ನೆಲೆಯಾಗಿ ಗೋಚರಿಸಿದೆ. ಜೊತೆಗೆ ಭೇಟಿ ನೀಡುವ ಭಕ್ತರಿಗೆ ಆಹ್ಲಾದ ಉಂಟು ಮಾಡುವಂತಹ ದೇವಾಲಯವು ಕೆ.ಆರ್‌.ಪೇಟೆ ತಾಲ್ಲೂಕಿನ ಬೂಕನಕೆರೆ ಹೋಬಳಿಯ ಬಳ್ಳೇಕೆರೆಯಲ್ಲಿ ನೆಲೆನಿಂತಿರುವುದು ವಿಶೇಷ.

ಪ್ರಸ್ತುತದಲ್ಲಿ ಪ್ರಾಚೀನ ಕಲೆ, ಸ್ಮಾರಕ ಮತ್ತು  ದೇವಸ್ಥಾನಗಳು ಮಹತ್ವ ಕಳೆದುಕೊಳ್ಳುತ್ತಿವೆ ಏನೋ ಎಂಬುದಕ್ಕೆ ಸಾಕ್ಷಿಪ್ರಜ್ಞೆಯಂತೆ ನಿಂತಿರುವ ಈಶ್ವರ ದೇವಾಲಯ ಗ್ರಾಮದಲ್ಲಿನ ವಿಶಾಲವಾದ ಕೆರೆಯ ಏರಿಯ ಹಿಂಬದಿಯಲ್ಲಿದೆ.

ಸ್ಥಳೀಯರು ಈ ದೇವಾಲಯ ಚೋಳರ ಕಾಲದಲ್ಲಿ ನಿರ್ಮಾಣವಾದುದ್ದು, ಕೆರೆಯ ಮಗ್ಗುಲಲ್ಲೇ ಗ್ರಾಮವಿತ್ತು ಕಾಲನಂತರ ಗ್ರಾಮ ಎತ್ತರಕ್ಕೆ ಸ್ಥಳಾಂತರಗೊಂಡಿತು. ದೇವಸ್ಥಾನ ಅಲ್ಲಿಯೇ ಉಳಿಯಿತು ಎಂದು ಹೇಳುತ್ತಾರೆ. ಆದರೆ ದೇವಾಲಯದ ಕೆತ್ತನೆ,  ವಾಸ್ತು ಗಮನಿಸಿದಾಗ ಹೊಯ್ಸಳ ಅರಸರ ಕಾಲದಲ್ಲಿ ನಿರ್ಮಾಣವಾಗಿರುವ ಸಂಭವವಿದೆ. ದೇವಸ್ಥಾನದ ಅಧಿಸ್ಥಾನವು ಮುಚ್ಚಿ ಹೋಗಿರುವುದರಿಂದ ದೇವಾಲಯವು ಪೂರ್ಣಮಟ್ಟದಲ್ಲಿ ಗೋಚರವಾಗುವದಿಲ್ಲ. 

ದೇಗುಲದ ಗೋಡೆಗಳಲ್ಲಿ ಯಾವುದೇ ಆಲಂಕಾರಿಕ ಕೆತ್ತನೆ ಕಾಣುವುದಿಲ್ಲ. ಆದರೂ ದೇವಾಲಯದ ನವರಂಗ, ಗರ್ಭಗುಡಿ, ಅಂತರಾಳಗಳ ಮೇಲಿನ ಭಾಗದಲ್ಲಿ ಕೆತ್ತಿರುವ ಪದ್ಮಮಂಡಲ ಮನೋಹರವಾಗಿದೆ. ದೇವಾಲಯವು ಸಂಪೂರ್ಣವಾಗಿ ಕಪ್ಪುಕಲ್ಲಿನಿಂದ ನಿರ್ಮಾಣವಾಗಿದೆ. ದೇವಾಲಯದ ಬಾಗಿಲು ಪೂರ್ವಾಭಿಮುಖವಾಗಿದೆ. ದೇವಾಲಯದ ಮೇಲ್ಭಾಗದ ಗೋಪುರ ಕುಸಿದಿದೆ.

ಚಾವಣಿಯಲ್ಲೆಲ್ಲಾ ಹಸಿರು ಬೆಳೆದಿದ್ದು, ಚಪ್ಪಡಿಗಳ ನಡುವೆ ಬಿರುಕು ಕಾಣಿಸಿದೆ. ಮಳೆಗಾಲದಲ್ಲಿ ನೀರು ಸೋರಿಕೆಯಾಗಿ ಶಿವಲಿಂಗ ಜಲಾವೃತಗೊಳ್ಳುತ್ತಿದೆ. ಒಂದು ಕಾಲದಲ್ಲಿ ಸುತ್ತಮುತ್ತ ಗ್ರಾಮಗಳಿಗೆ ಪ್ರಸಿದ್ಧ ದೇವಾಲಯವಾಗಿದ್ದ ಈ ಮಲ್ಲೇಶ್ವರ(ಈಶ್ವರ) ದೇವಾಲಯಸೊರಗಿದೆ.

ಗರ್ಭಗುಡಿಯು ಚೌಕಾಕಾರವಾಗಿದ್ದು, ವಿತಾನದಲ್ಲಿ ಕೆತ್ತಿರುವ ಪದ್ಮಮಂಡಲ ಅಲಂಕಾರ ಸೊಗಸಾಗಿ ಕಾಣುತ್ತದೆ. ಇಲ್ಲಿ ಪ್ರತಿಷ್ಠಾಪನೆಗೊಂಡಿರುವ ಶಿವಲಿಂಗ ಶೋಭಾಯಮಾನವಾಗಿ ಕಂಗೊಳಿಸಿ ಆಕರ್ಷಕ ಕೆತ್ತನೆಯೊಂದಿಗೆ ಗಮನ ಸೆಳೆದಿದೆ. ದೇವಾಲಯದ ಮಧ್ಯೆ ಇರುವ ನಾಲ್ಕು ಕಂಬಗಳು ದೇವಾಲಯದ ಭಾರವನೊತ್ತಿದ್ದು, ರುದ್ರಕಾಂತಶೈಲಿ ಹೊಂದುವ ಮೂಲಕ ಆಶ್ವರ್ಯ ಉಂಟು ಮಾಡುತ್ತದೆ.

‘ಹಿಂದಿನ ಕಾಲದಲ್ಲಿ ಅಳತೆ ಮಾಡುವಾಗ ದೊಡ್ಡ ಪ್ರಮಾಣವನ್ನು ಬಳ್ಳ ಎನ್ನುತಿದ್ದರು. ಇಲ್ಲಿನ ಕೆರೆ ದೊಡ್ಡದಾಗಿದ್ದರಿಂದ ಬಳ್ಳೇಕೆರೆ ಎಂಬ ಹೆಸರು ಬಂದು ಗ್ರಾಮಕ್ಕೂ ಅದೇ ಹೆಸರು ಅಂಟಿಕೊಂಡಿದೆ. ಅಲ್ಲದೆ ಗ್ರಾಮಕ್ಕೆ ಪ್ರಾಚೀನ ಇತಿಹಾಸವಿದ್ದು, ಜೈನರ ಕಾಲದ ಪರಂಪರೆಯ ನಿಷದಿ ಶಾಸನವೂ ಇಲ್ಲಿ ಪತ್ತೆಯಾಗಿದ್ದು ಈ ಭಾಗದಲ್ಲಿ ಜೈನ ಧರ್ಮ ಪ್ರಚಲಿತವಾಗಿತ್ತೆಂಬುದಕ್ಕೆ ಮಾಹಿತಿ ನೀಡುತ್ತದೆ’ ಎನ್ನುತ್ತಾರೆ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಕಾರ್ಯಾಧ್ಯಕ್ಷ ಬಳ್ಳೇಕೆರೆ ಮಂಜುನಾಥ್.

‘ಅನಾದಿ ಕಾಲದಿಂದಲೂ ನಮ್ಮ ಪೂರ್ವಜರು ಶಿವದೇವಾಲಯ ನಿರ್ಮಾಣಕ್ಕೆ ಮಹತ್ವ ನೀಡಿದ್ದಾರೆ. ದೇವಾಲಯ ನಿರ್ಮಾಣವಾದಗಿನಿಂದಲೂ ನಮ್ಮ ವಂಶಸ್ಥರೇ ಪೂಜೆ ಮಾಡಿಕೊಂಡು ಬರುತಿದ್ದಾರೆ.  ಒಂದು ಕಾಲದಲ್ಲಿ ಬಳ್ಳೇಕೆರೆ ಈಶ್ವರ ದೇವಸ್ಥಾನವೆಂದರೆ ನಂಜನಗೂಡಿನ ನಂಜುಂಡೇಶ್ವರನ ದೇವಸ್ಥಾನ ಎಂದು ಕರೆಯುತಿದ್ದರು. ಅಲ್ಲದೇ ದೊಡ್ಡಜಾತ್ರೆಯೇ ಶಿವರಾತ್ರಿಯಂದು ನಡೆಯುತಿತ್ತು, ಇದನ್ನು ಜೀರ್ಣೋದ್ಧಾರ ಮಾಡುವ ಮೂಲಕ ದೇವಾಲಯ ಉಳಿಸಬೇಕು’ ಎಂಬುದು ದೇವಾಲಯದ ಅರ್ಚಕ ನಾಗರಾಜು ಮತ್ತು ಕಿರಣ್ ಕುಮಾರ್ ಅವರ ಒತ್ತಾಯವಾಗಿದೆ.

‘ಸೂರ್ಯನ ಕಿರಣಗಳು ಲಿಂಗದ ಮೇಲೆ ಬಿದ್ದು ಪ್ರಕಾಶನವಾಗುತಿತ್ತು, ದೇಗುಲದ ಗೋಪುರ, ಆಕರ್ಷಕವಾಗಿತ್ತು, ಚಾವಣಿ ಕುಸಿಯುವ ಸ್ಥಿತಿಯಲ್ಲಿರುವದರಿಂದ ಪ್ರಾಣಭಯದಿಂದಲೇ ಅರ್ಚಕರು ಪೂಜೆ ಮಾಡುವ ಸ್ಥಿತಿ ಬಂದೊದಗಿದೆ. ಧರ್ಮಸ್ಥಳ ಸಂಸ್ಥೆಯವರಾಗಲಿ, ಸರ್ಕಾರವರಾಗಲಿ ಜೀರ್ಣೋದ್ಧಾರಕ್ಕೆ ಮುಂದಾದರೆ ಗ್ರಾಮಸ್ಥರು ಎಲ್ಲಾ ರೀತಿಯ ನೆರವು ನೀಡುತ್ತೇವೆ’ ಎನ್ನುತ್ತಾರೆ ಗ್ರಾಮದ ಮುಖಂಡರಾದ ಚಂದ್ರೇಗೌಡ, ಅರುಣ್ ಕುಮಾರ್, ಚಂದ್ರಶೆಟ್ಟಿ.

ಬಳ್ಳೇಕೆರೆ ಗ್ರಾಮದ ಈಶ್ವರ ದೇವಾಲಯಕ್ಕೆ ತುರ್ತಾಗಿ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಯನ್ನು ಪರಿಶೀಲಿಸುತ್ತೇನೆ. ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಅಗತ್ಯ ಸಹಾಯವನ್ನು ಮುಜರಾಯಿ ಇಲಾಖೆಯಿಂದ ಕೊಡಿಸಲು ಪ್ರಯತ್ನಿಸುತ್ತೇನೆ.
ಯು.ಎಸ್.ಅಶೋಕ್ ಕುಮಾರ್, ತಹಶೀಲ್ದಾರ್, ಕೆ.ಆರ್. ಪೇಟೆ
ಹಸಿರು ಪರಿಸರದಲ್ಲಿ ಈಶ್ವರದೇವಾಲಯ ವಿಹಂಗಮ ನೋಟ
ಹಸಿರು ಪರಿಸರದಲ್ಲಿ ಈಶ್ವರದೇವಾಲಯ ವಿಹಂಗಮ ನೋಟ
ಶೋಭಾಯಮಾನವಾಗಿರುವ ಈಶ್ವರ ಲಿಂಗ
ಶೋಭಾಯಮಾನವಾಗಿರುವ ಈಶ್ವರ ಲಿಂಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT